
ಕಲ್ಲಿದ್ದಲು ಬಳಸುವ ವಿದ್ಯುತ್ ಸ್ಥಾವರಗಳಿಂದ ಕಡಿಮೆ ಇಂಗಾಲ ಉತ್ಪತ್ತಿಯಾಗುವಂತೆ ನೋಡಿಕೊಳ್ಳಲು ಪ್ರಮುಖ ಇಂಧನ ನಿಯಂತ್ರಕರೊಂದಿಗೆ ಜಂಟಿ ಸಭೆ ನಡೆಸುವಂತೆ ಸುಪ್ರೀಂ ಕೋರ್ಟ್ ವಿದ್ಯುತ್ ಸಚಿವಾಲಯಕ್ಕೆ ಜುಲೈ 22ರಂದು ನಿರ್ದೇಶನ ನೀಡಿದೆ [ರಿಧಿಮಾ ಪಾಂಡೆ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಇಂಗಾಲ ನಿಯಂತ್ರಿಸಲು ಸತತವಾಗಿ ಉಂಟಾಗುತ್ತಿರುವ ವಿಳಂಬದಿಂದಾಗಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟದ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಎ ಎಸ್ ಚಂದೂರ್ಕರ್ ಅವರಿದ್ದ ಪೀಠ ಕಳವಳ ವ್ಯಕ್ತಪಡಿಸಿತು.
ದೆಹಲಿ- ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಮಾಲಿನ್ಯಕ್ಕೆ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರಗಳು ಅತಿದೊಡ್ಡ ಕಾರಣ. ಸರ್ಕಾರದ ಆದೇಶಗಳ ಹೊರತಾಗಿಯೂ ಫ್ಲೂ-ಗ್ಯಾಸ್ ಡಿಸಲ್ಫರೈಸೇಶನ್ (ಎಫ್‌ಜಿಡಿ) ವ್ಯವಸ್ಥೆಗಳನ್ನು ಇವುಗಳಲ್ಲಿ ಕೆಲವೆಡೆ ಮಾತ್ರವೇ ಸ್ಥಾಪಿಸಲಾಗಿದೆ ಎಂದು ಅಮಿಕಸ್ ಕ್ಯೂರಿ ವರದಿ ಆಧರಿಸಿ ನ್ಯಾಯಾಲಯ ಹೇಳಿತು.
ದೆಹಲಿ ಸುತ್ತಮುತ್ತ 300 ಕಿ.ಮೀ. ವ್ಯಾಪ್ತಿಯಲ್ಲಿ ಇರುವ ವಿದ್ಯುತ್ ಸ್ಥಾವರಗಳು ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ ನಿಗದಿಪಡಿಸಿದ ಸಲ್ಫರ್ ಡೈ ಆಕ್ಸೈಡ್ ಮಾನದಂಡಗಳನ್ನು ಉಲ್ಲಂಘಿಸುತ್ತಿರುವ ಬಗ್ಗೆ ವರದಿ ಕಳವಳ ವ್ಯಕ್ತಪಡಿಸಿದೆ.
ನ್ಯಾಯಾಲಯ ಕಳೆದ ಫೆಬ್ರವರಿಯಲ್ಲಿ ಭಾರೀ ಪ್ರಮಾಣದ ಹವಾಮಾನ ತುರ್ತುಪರಿಸ್ಥಿತಿ ಇದ್ದು ವಾತಾವರಣಕ್ಕೆ ತೀವ್ರತರನಾಗಿ ಇಂಗಾಲ ಬಿಡುಗಡೆಯಾಗುತ್ತಿರದಿಂದ ಪರಿಸರ ಅಸ್ಥಿರತೆ ಉಂಟಾಗುತ್ತಿದೆ ಎಂದು ಹೇಳಿತ್ತು.
ಜುಲೈ 22 ರಂದು ನಡೆದ ವಿಚಾರಣೆಯ ಸಂದರ್ಭದಲ್ಲಿ, ಉಷ್ಣ ವಿದ್ಯುತ್‌ನಿಂದಾಗಿ ಹೊರಬರುತ್ತಿರುವ ಇಂಗಾಲದ ಪ್ರಮಾಣ ರಾಷ್ಟ್ರೀಯ ಇಂಗಾಲದ ಹೊರಸೂಸುವಿಕೆ ಪ್ರಮಾಣದ ಸುಮಾರು ಶೇ 8ರಷ್ಟು ಇದೆ ಎಂದ ಪೀಠ ನವೀಕರಿಸಬಹುದಾದ ವಿದ್ಯುತ್‌ನತ್ತ ಭಾರತ ಹೆಜ್ಜೆ ಇರಿಸುತ್ತಿದ್ದರೂ ಕಲ್ಲಿದ್ದಲು ಕ್ಷೇತ್ರದಲ್ಲಿ ಸುಧಾರಣೆ ಮತ್ತು ಇಂಗಾಲ ಬಿಡುಗಡೆಗೆ ಸಂಬಂಧಿಸಿದ ಮಾನದಂಡಗಳನ್ನು ದೃಢವಾಗಿ ಜಾರಿಗೆ ತರುವ ಮೂಲಕ ಪರಿವರ್ತನೆ ಮೂಡಿಸಬೇಕು ಎಂದಿತು.
ಸಂಘಟಿತ ನಿಯಂತ್ರಕ ಕ್ರಮಕ್ಕಾಗಿ ಕೇಂದ್ರ ವಿದ್ಯುತ್ ಪ್ರಾಧಿಕಾರ ಮತ್ತು ಕೇಂದ್ರ ವಿದ್ಯುತ್ ನಿಯಂತ್ರಣ ಆಯೋಗವನ್ನು ಪ್ರಕರಣದ ಪಕ್ಷಕಕಾರರನ್ನಾಗಿ ಮಾಡುವಂತೆ ನ್ಯಾಯಾಲಯ ಆದೇಶಿಸಿತು.
ಈ ಸಂಸ್ಥೆಗಳೊಂದಿಗೆ ಸಭೆ ನಡೆಸಿ ನಾಲ್ಕು ವಾರಗಳಲ್ಲಿ ಪ್ರಸ್ತುತ ನಿಯಂತ್ರಕ ಕಾರ್ಯವಿಧಾನಗಳು, ಹೊರಸೂಸುವಿಕೆ ಕಡಿತ ತಂತ್ರಗಳು ಮತ್ತು ಎಫ್‌ಜಿಡಿ ವ್ಯವಸ್ಥೆಗಳ ಸ್ಥಾಪನೆ ಸೇರಿದಂತೆ ನಿರಿಂಗಾಲೀಕರಣಕ್ಕೆ (ಡಿಕಾರ್ಬನೈಸೇಷನ್) ಪ್ರಸ್ತಾವಿತ ಕಾಲಮಿತಿ ಒಳಗೊಂಡ ಜಂಟಿ ಅಫಿಡವಿಟ್ ಸಲ್ಲಿಸುವಂತೆ ಅದು ವಿದ್ಯುತ್ ಸಚಿವಾಲಯಕ್ಕೆ ಸೂಚಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ 19ರಂದು ನಡೆಯಲಿದೆ.