Supreme Court
Supreme Court 
ಸುದ್ದಿಗಳು

ಋತುಸ್ರಾವ ರಜೆ ಕೋರಿ ಸುಪ್ರೀಂ ಕೋರ್ಟ್‌ಗೆ ಪಿಐಎಲ್

Bar & Bench

ದೇಶದಾದ್ಯಂತ ಮಹಿಳಾ ವಿದ್ಯಾರ್ಥಿಗಳು ಮತ್ತು ಉದ್ಯೋಗಸ್ಥ ಮಹಿಳೆಯರಿಗೆ ಮುಟ್ಟಿನ ನೋವಿನ ರಜೆ ಅಥವಾ ಋತುಸ್ರಾವ ರಜೆ ಜಾರಿಗೆ ತರಲು ನಿರ್ದೇಶನ ನೀಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಲಾಗಿದೆ [ಶೈಲೇಂದ್ರ ಮಣಿ ತ್ರಿಪಾಠಿ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಕೆಲವು ಸಂಸ್ಥೆ ಮತ್ತು ಕೆಲ ರಾಜ್ಯ ಸರ್ಕಾರಗಳನ್ನು ಹೊರತುಪಡಿಸಿ, ಸಮಾಜ, ಶಾಸಕಾಂಗ ಮತ್ತಿತರರು ಮುಟ್ಟಿನ ಅವಧಿ ಬಗ್ಗೆ ತಿಳಿದೋ ಅಥವಾ ತಿಳಿಯದೆಯೋ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ.

ಭಾರತೀಯ ಕಂಪನಿಗಳಾದ ಇವಿಪನನ್, ಜೊಮಾಟೊ, ಬೈಜುಸ್, ಸ್ವಿಗ್ಗಿ, ಮಾತೃಭೂಮಿ, ಮ್ಯಾಗ್ಜ್ಟರ್, ಇಂಡಸ್ಟ್ರಿ, ಎಆರ್‌ಸಿ, ಫ್ಲೈಮೈಬಿಜ್ ಮತ್ತು ಗೊಜೂಪ್ ವೇತನಸಹಿತ ಋತುಸ್ರಾವ ರಜೆ ನೀಡುತ್ತಿವೆ. ಆನ್‌ಲೈನ್‌ ಸಂಶೋಧನೆ ಆಧರಿಸಿ ಹೇಳುವುದಾದರೆ ಹೆರಿಗೆ ಪ್ರಯೋಜನ ಕಾಯಿದೆಯ ಕಟ್ಟುನಿಟ್ಟಿನ ಜಾರಿಗಾಗಿ 2014ರ ಅಧಿಸೂನೆ ಮೂಲಕ ಅಂತಹ ಅಧಿಕಾರಿಗಳ ನೇಮಕಾತಿ ಮಾಡಿರುವ ಏಕೈಕ ರಾಜ್ಯ ಮೇಘಾಲಯವಾಗಿದೆ. ಬಿಹಾರವು ತನ್ನ 1992ರ ನೀತಿಯ ಭಾಗವಾಗಿ ಋತುಸ್ರಾವ ನೋವಿನ ವಿಶೇಷ ರಜೆ ಒದಗಿಸಿರುವ ದೇಶದ ಏಕೈಕ ರಾಜ್ಯವಾಗಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.

ವಕೀಲರಾದ ಶೈಲೇಂದ್ರ ಮಣಿ ತ್ರಿಪಾಠಿ ಅವರು ಸಲ್ಲಿಸಿದ ಅರ್ಜಿಯಲ್ಲಿ, ಮುಟ್ಟಿನ ನೋವಿನ ರಜೆಗಳಿಗೆ ಸಂಬಂಧಿಸಿದಂತೆ ನಿಯಮಾವಳಿ ರೂಪಿಸಲು ರಾಜ್ಯ ಸರ್ಕಾರಗಳಿಗೆ ನಿರ್ದೇಶನಗಳನ್ನು ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದರು.

ಇನ್‌ಸ್ಪೆಕ್ಟರ್‌ಗಳ ನೇಮಕಾತಿಗೆ ಸಂಬಂಧಿಸಿದಂತೆ 1961ರ ಹೆರಿಗೆ ಪ್ರಯೋಜನ ಕಾಯಿದೆಯ ಸೆಕ್ಷನ್ 14 ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.

ಬಹುತೇಕ ರಾಜ್ಯಗಳಲ್ಲಿ ಮಹಿಳೆಯರಿಗೆ ಇಂತಹ ರಜೆ ನಿರಾಕರಿಸಿರುವುದು ಸಂವಿಧಾನದ 14ನೇ ವಿಧಿಯ ಅಡಿಯಲ್ಲಿ ಒದಗಿಸಲಾದ ಸಮಾನತೆಯ ಹಕ್ಕಿನ ಉಲ್ಲಂಘನೆಯಾಗಿದೆ. ರಜೆಗೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಡಾ. ಶಶಿ ತರೂರ್‌ ಮತ್ತು ನಿನೊಂಗ್ ಎರಿಂಗ್ ಅವರು ಕ್ರಮವಾಗಿ 2018 ಮತ್ತು 2017 ರಲ್ಲಿ ಎರಡು ಖಾಸಗಿ ಮಸೂದೆಗಳನ್ನು ಮಂಡಿಸಲಾಗಿದ್ದರೂ ಅವೆರಡೂ ಅಂಗೀಕಾರವಾಗಿಲ್ಲ. ಇಂತಹ ವಿವಿಧ ಯತ್ನಗಳು ನಡೆದಿದ್ದರೂ ಮುಟ್ಟಿನ ನೋವಿಗೆ ಸಂಬಂಧಿಸಿದಂತೆ ರಜೆ ಸೌಲಭ್ಯ ನೀಡಲು ಶಾಸಕಾಂಗಕ್ಕೆ ಇಚ್ಛಾಶಕ್ತಿಯ ಕೊರತೆ ಇದೆ ಎಂದು ಅರ್ಜಿಯನ್ನು ವಿವರಿಸಲಾಗಿದೆ.

ಇಂಗ್ಲೆಂಡ್‌, ಚೀನಾ, ಜಪಾನ್‌, ತೈವಾನ್‌, ಇಂಡೋನೇಷ್ಯಾ, ದಕ್ಷಿಣ ಕೊರಿಯಾ, ಸ್ಪೇನ್‌ ಹಾಗೂ ಜಾಂಬಿಯಾದಂತಹ ದೇಶಗಳು ಈಗಾಗಲೇ ಒಂದಲ್ಲ ಒಂದು ರೂಪದಲ್ಲಿ ಈ ಬಗೆಯ ರಜೆ ಕಲ್ಪಿಸುತ್ತಿವೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.