ಉತ್ತರಾಖಂಡ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಏಕರೂಪ ನಾಗರಿಕ ಸಂಹಿತೆಯ ಕೆಲವು ಸೆಕ್ಷನ್‌ಗಳ ಸಿಂಧುತ್ವ ಪ್ರಶ್ನಿಸಿ ವಕೀಲೆಯೊಬ್ಬರು ಉತ್ತರಾಖಂಡ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ .
ಯುಸಿಸಿ ಅನ್ವಯದ ವ್ಯಾಪ್ತಿ, ವಿವಾಹಗಳನ್ನು ನೋಂದಾಯಿಸುವ ಅವಶ್ಯಕತೆ ಮತ್ತು ಲಿವ್-ಇನ್ ಸಂಬಂಧಗಳ ನೋಂದಣಿ ಅಥವಾ ಅಂತ್ಯಕ್ಕೆ ಸಂಬಂಧಿಸಿದ ಪ್ರಮುಖ ಸೆಕ್ಷನ್‌ಗಳು ಅಸಾಂವಿಧಾನಿಕ ಎಂದು ಘೋಷಿಸುವಂತೆ ಅರ್ಜಿ ಸಲ್ಲಿಸಿರುವ ಆರುಷಿ ಗುಪ್ತಾ ಕೋರಿದ್ದಾರೆ.
ನಿರ್ದಿಷ್ಟವಾಗಿ ಹೇಳುವುದಾದರೆ, ಅರ್ಜಿದಾರರು ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ- 2025ರ ಸೆಕ್ಷನ್ 3(ಸಿ), 3(ಎನ್)(iv), 4 (iv), 8, 11, 13, 25 (3), 29, 32(1) ಮತ್ತು (2), 378, 380(1), 384, 381, 385, 386, ಮತ್ತು 387 ರ ಸಿಂಧುತ್ವವನ್ನು ಹಾಗೂ ಅದಕ್ಕೆ ಸಂಬಂಧಿಸಿದ ನಿಯಮಗಳನ್ನು ಪ್ರಶ್ನಿಸಿದ್ದಾರೆ.
ಪ್ರಕರಣವನ್ನು ಹೈಕೋರ್ಟ್ ಇನ್ನೂ ಕೈಗೆತ್ತಿಕೊಂಡಿಲ್ಲ. ವಕೀಲ ಆಯುಷ್ ನೇಗಿ ಮೂಲಕ ಅರ್ಜಿ ಸಲ್ಲಿಸಲಾಗಿದೆ.
ಯುಸಿಸಿ ಹಲವು ತಾರತಮ್ಯಗಳಿಗೆ ಕಡಿವಾಣ ಹಾಕಿದ್ದರೂ ಕೆಲ ಸೆಕ್ಷನ್‌ಗಳಲ್ಲಿರುವ ನಿರ್ಬಂಧ ಅಸಮಂಜಸವಾಗಿದೆ. ಜೊತೆಗೆ ಅಲ್ಪಸಂಖ್ಯಾತ ಸಮುದಾಯಗಳಿಗೆ ತಾರತಮ್ಯ ಮಾಡುವ ಅವಿವೇಕದ ನಿರ್ಬಂಧಗಳನ್ನು ಇದು ಒಳಗೊಂಡಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.
ಉತ್ತರಾಖಂಡ ಯುಸಿಸಿ ಅನ್ವಯಿಸುವ "ನಿವಾಸಿಗಳು" ಎಂಬ ಪದದ ವಿಶಾಲ ವ್ಯಾಖ್ಯಾನವನ್ನು ಅವರು ಪ್ರಶ್ನಿಸಿದ್ದಾರೆ. ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಉತ್ತರಾಖಂಡದಲ್ಲಿ ವಾಸಿಸುವ ಯಾವುದೇ ವ್ಯಕ್ತಿಗೆ ಈ ಸಂಹಿತೆಯನ್ನು ಅನ್ವಯಿಸಲಾಗಿದೆ. ಈ ಪದವನ್ನು (ನಿವಾಸಿ) ಎಷ್ಟು ವ್ಯಾಪಕವಾಗಿ ವ್ಯಾಖ್ಯಾನಿಸಲಾಗಿದೆಯೆಂದರೆ, ಇತರ ರಾಜ್ಯಗಳ ಖಾಯಂ ನಿವಾಸಿಗಳಾಗಿದ್ದು, ಪ್ರಸ್ತುತ ಉತ್ತರಾಖಂಡದಲ್ಲಿ ನೆಲೆಸಿರುವವರಿಗೂ ಇದು ಅನ್ವಯಿಸುತ್ತದೆ ಎಂದು ಅರ್ಜಿದಾರರು ಹೇಳುತ್ತಾರೆ.
ವಿಚ್ಛೇದನ ಇತ್ಯಾದಿಗಳ ಮೇಲಿನ ಕಾನೂನುಗಳನ್ನು ಪ್ರಮಾಣೀಕರಿಸಲು ಉದ್ದೇಶಿಸಿದ್ದರೂ, ಕೆಲವು ನಿಬಂಧನೆಗಳು ಬಹುಸಂಖ್ಯಾತ ಕೇಂದ್ರಿತ, ತಾರತಮ್ಯದಿಂದ ಕೂಡಿದ್ದು, ಪಾರ್ಸಿಗಳು ಮತ್ತು ಮುಸ್ಲಿಮರಂತಹ ಅಲ್ಪಸಂಖ್ಯಾತ ಧಾರ್ಮಿಕ ಸಮುದಾಯಗಳ ಪದ್ಧತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಿ ರೂಪಿಸಲಾಗಿದೆ ಎಂದಿದ್ದಾರೆ.
ಎಲ್‌ಜಿಬಿಟಿಕ್ಯೂ + ಜೋಡಿ ತಮ್ಮ ಸಂಬಂಧ ನೋಂದಾಯಿಸಿಕೊಳ್ಳಬೇಕು ಎಂಬುದು ಸಮಂಜಸವಲ್ಲ. ನೋಂದಣಿ ಮಾಡಿಕೊಳ್ಳದಿದ್ದರೆ ವಿಧಿಸಿರುವ ದಂಡದ ಮೊತ್ತವೂ ಭಾರೀ ಪ್ರಮಾಣದ್ದು. 18 ವರ್ಷ ವಯಸ್ಸಿನ ಮಹಿಳೆಯರು ಯುಸಿಸಿ ಅಡಿಯಲ್ಲಿ ಮದುವೆಯಾಗಲು ಯಾವುದೇ ನಿರ್ಬಂಧ ಇಲ್ಲದಿರುವಾಗ ಲಿವ್ ಇನ್ ಸಂಬಂಧಕ್ಕೆ ನಿರ್ಬಂಧ ವಿಧಿಸುತ್ತಿರುವುದು ಏಕೆ? ರೂಮ್‌ಮೇಟ್‌ಗಳೆಂದು ಹೇಳಿಕೊಳ್ಳುವ ಜನರು ನಿಜವಾಗಿಯೂ ಲಿವ್-ಇನ್ ಸಂಬಂಧದಲ್ಲಿದ್ದಾರೆಯೇ ಎಂದು ಪರಿಶೀಲಿಸಲು ರಿಜಿಸ್ಟ್ರಾರ್‌ಗಳಿಗೆ ಅತಿಯಾದ ಅಧಿಕಾರ ನೀಡಲಾಗಿದೆ.
ಲಿವ್-ಇನ್ ಸಂಬಂಧದಲ್ಲಿ ನೋಂದಾಯಿಸಿಕೊಳ್ಳಲು ಬಯಸುವವರು ತಮ್ಮ ಹಿಂದಿನ ಸಂಬಂಧಗಳ ಬಗ್ಗೆ ಮಾಹಿತಿಯನ್ನು ನೀಡಬೇಕಾಗಿರುವುದು ಅವರ ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸುತ್ತದೆ. ಲಿವ್-ಇನ್ ಸಂಬಂಧದಲ್ಲಿರುವವರಲ್ಲಿ ಒಬ್ಬರು ಬೇರೆ ರಾಜ್ಯದವರಾಗಿದ್ದರೆ, ಯುಸಿಸಿ ಅನಗತ್ಯವಾಗಿ ಅವರ ಮೇಲೆ ಕ್ಷುಲ್ಲಕ ವಿಷಯಗಳ ಆಧಾರದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಮಾಡುತ್ತದೆ. ಸಂಹಿತೆ ಅಧಿಕಾರಿಗಳಿಗೆ ನೈತಿಕ ಪೊಲೀಸ್ ಗಿರಿ ನಡೆಸಲು ಅವಕಾಶ ಮಾಡಿಕೊಡುತ್ತದೆ. ಆದ್ದರಿಂದ ಯುಸಿಸಿಯ ಇಂತಹ ನಿಬಂಧನೆಗಳು, ಪುಟ್ಟಸ್ವಾಮಿ ಪ್ರಕರಣದಲ್ಲಿ (ಗೌಪ್ಯತೆಯ ಹಕ್ಕು ಪ್ರಕರಣ) ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಅಸಮಾನತೆಯ ಪರೀಕ್ಷೆಯಲ್ಲಿ ವಿಫಲವಾಗಿವೆ ಎಂದು ಅರ್ಜಿದಾರರು ವಿವರಿಸಿದ್ದಾರೆ.