ಪೊಟ್ಟಣದಲ್ಲಿ ನೀಡಲಾಗುವ ಆಹಾರ ಪದಾರ್ಥಗಳಲ್ಲಿರುವ ಉಪ್ಪು, ಸಕ್ಕರೆ ಹಾಗೂ ಕೊಬ್ಬಿನ ಪ್ರಮಾಣ ಎಷ್ಟು ಎಂದು ವಿವರಿಸಲು ಪೊಟ್ಟಣದ ಮುಂಭಾಗದಲ್ಲಿ ಎಚ್ಚರಿಕೆಯ ಲೇಬಲ್‌ಗಳನ್ನು ಪ್ರಕಟಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.
ವಕೀಲ ರಾಜೀವ್ ಶಂಕರ್ ದ್ವಿವೇದಿ ಅವರ ಮೂಲಕ '3ಎಸ್ ಮತ್ತು ಅವರ್ ಹೆಲ್ತ್ ಸೊಸೈಟಿ' ಹೆಸರಿನ ಸಂಸ್ಥೆ ಅರ್ಜಿ ಸಲ್ಲಿಸಿದೆ.
ಭಾರತದಲ್ಲಿ ಮಧುಮೇಹ ಮತ್ತಿತರ ಜೀವನಶೈಲಿ ರೋಗಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹಾಗೆ ಲೇಬಲ್ ಪ್ರಕಟಿಸುವುದನ್ನು ಕಡ್ಡಾಯಗೊಳಿಸುವುದು ಅವಶ್ಯಕ ಎಂದು ಮನವಿಯಲ್ಲಿ ಹೇಳಲಾಗಿದೆ.
ಅರ್ಜಿಯ ಪ್ರಮುಖಾಂಶಗಳು
ಕರಿದ ಆಹಾರ ಪದಾರ್ಥಗಳ ವಿಪರೀತ ಸೇವನೆಗೂ ಮಧುಮೇಹ, ಕ್ಯಾನ್ಸರ್, ಹೃದ್ರೋಗಗಳು, ಅಧಿಕ ರಕ್ತದೊತ್ತಡ, ಮಾನಸಿಕ ಆರೋಗ್ಯ ಸಮಸ್ಯೆಗಳು ಮತ್ತು ಅಕಾಲಿಕ ಮರಣಗಳು ಉಂಟಾಗುವುದಕ್ಕೂ ಅಂತರ್ ಸಂಬಂಧ ಇದೆ ಎಂದು ವಿಜ್ಞಾನ ಸಮುದಾಯ ಒತ್ತಿ ಹೇಳುತ್ತದೆ.
ಅನಾರೋಗ್ಯಕರ ಉತ್ಪನ್ನಗಳ ವ್ಯಾಪಕವಾದ ಮಾರಾಟ ಈ ಸ್ಥಿತಿಯನ್ನು ಉಲ್ಬಣಗೊಳಿಸಿದ್ದು ಇದು ತೂಕ ಹೆಚ್ಚಾಗುವಂತೆ ಮಾಡುತ್ತದೆ ಮತ್ತು ಸಕ್ಕರೆ ಉಪ್ಪು ಮತ್ತು ಕೊಬ್ಬಿನಂಶ ಇರುವ ಆಹಾರದ ಮಿತಿ ಮೀರಿದ ಸೇವನೆಗೆ ಕಾರಣವಾಗುತ್ತಿದೆ.
ದೊಡ್ಡ ಕಾರ್ಪೊರೇಟ್ ಕಂಪೆನಿಗಳು ಮಾರಾಟ ಮಾಡುವ ಆಹಾರದ ಹಾನಿಕಾರಕ ಪರಿಣಾಮಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ತಮ್ಮ ಆಹಾರವನ್ನು ಪ್ರಜ್ಞಾಪೂರ್ವಕವಾಗಿ ಆಯ್ಕೆ ಮಾಡಲು ಗ್ರಾಹಕರಿಗೆ ಅಧಿಕಾರ ನೀಡಲು ಪೊಟ್ಟಣದ ಮುಂಭಾಗದ ಮಾಹಿತಿ (ಫ್ರಂಟ್-ಆಫ್-ಪ್ಯಾಕೇಜ್ ಲೇಬಲಿಂಗ್ – ಎಫ್‌ಒಪಿಎಲ್) ಪ್ರಬಲ ಸಾಧನವಾಗಿ ಕೆಲಸ ಮಾಡುತ್ತದೆ.
ಪ್ಯಾಕ್ ಮಾಡಲಾದ ಆಹಾರ ಮತ್ತು ಪಾನೀಯಗಳಲ್ಲಿನ ಪೌಷ್ಟಿಕಾಂಶದ ಅಂಶ ಮತ್ತು ಹಾನಿಕಾರಕ ಪದಾರ್ಥಗಳನ್ನು ಸುಲಭವಾಗಿ ಗುರುತಿಸಲು ಮತ್ತು ಅರ್ಥಮಾಡಿಕೊಳ್ಳಲು ಇದು ನಾಗರಿಕರಿಗೆ ಅನುವು ಮಾಡಿಕೊಡುತ್ತದೆ. ಇದರಿಂದಾಗಿ ಆರೋಗ್ಯಕರ ಆಹಾರದ ಆಯ್ಕೆ ಸಾಧ್ಯವಾಗುತ್ತದೆ.
ಭಾರತೀಯ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಈಗಾಗಲೇ ಎಫ್ಒಪಿಎಲ್ ಮಹತ್ವವನ್ನು ಹೇಳಿದ್ದು ಎಚ್ಚರಿಕೆ ಮಾಹಿತಿಯನ್ನು ಕಡ್ಡಾಯಗೊಳಿಸುವ ನಿಯಮಗಳನ್ನು ಕೂಡಲೇ ಜಾರಿಗೆ ತರುವುದು ಮುಖ್ಯವಾಗಿದೆ.
ಆಹಾರಕ್ಕೆ ಸೇರಿಸಲಾದ ಸಕ್ಕರೆ, ಸೋಡಿಯಂ, ಸ್ಯಾಚುರೇಟೆಡ್ ಕೊಬ್ಬು ಇತ್ಯಾದಿಗಳ ಅತಿಯಾದ ಉಪಸ್ಥಿತಿಯನ್ನು ಪ್ರಮುಖವಾಗಿ ಸೂಚಿಸುವ ಮೂಲಕ, ಗ್ರಾಹಕರು ಅನಾರೋಗ್ಯಕರ ಆಹಾರ ಪದಾರ್ಥಗಳನ್ನು ಸುಲಭವಾಗಿ ಗುರುತಿಸಲು ಮತ್ತು ಆರೋಗ್ಯಕರ ಆಹಾರವನ್ನು ಆಯ್ದುಕೊಳ್ಳಲು ಸಾಧ್ಯವಾಗುತ್ತದೆ.
ಇಂತಹ ಲೇಬಲ್‌ಗಳು ಆಹಾರದ ಮಿತಿಮೀರಿದ ಸೇವನೆಗೂ ಕಡಿವಾಣ ಹಾಕಲಿದ್ದು ಅಂತಹ ಉತ್ಪನ್ನ ಸೇವಿಸುವುದರಿಂದ ಉಂಟಾಗುವ ಅನಾರೋಗ್ಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತವೆ.
ಈ ನಿಟ್ಟಿನಲ್ಲಿ ತ್ವರಿತ ನಿರ್ದೇಶನ ಕೋರಿ ತಾನು (3ಎಸ್ ಮತ್ತು ಅವರ್ ಹೆಲ್ತ್ ಸೊಸೈಟಿ) ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಪತ್ರ ಬರೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.