Britannia
Britannia

100ಕ್ಕೆ ಬದಲಾಗಿ 82 ಗ್ರಾಂ ಬಿಸ್ಕೆಟ್‌ ಪೊಟ್ಟಣ ಮಾರಾಟ: ಬ್ರಿಟಾನಿಯಾಗೆ ₹30,000 ದಂಡ ವಿಧಿಸಿದ ಕೊಡಗು ಗ್ರಾಹಕರ ಆಯೋಗ

ಸೇವಾ ನ್ಯೂನತೆಯು ಒಬ್ಬ ವ್ಯಕ್ತಿಗೆ ಅನ್ವಯಿಸದೇ ಸಾರ್ವಜನಿಕವಾಗಿ ಅನುಚಿತ ವ್ಯಾಪಾರ ಪದ್ಧತಿಯಿಂದ ತೂಕದಲ್ಲಿ ವಂಚಿಸಿ, ಅನ್ಯಾಯ ಎಸಗಿ, ಅಕ್ರಮ ಸಂಪಾದನೆ ಮಾಡುತ್ತಿರುವುದರಿಂದ ಬ್ರಿಟಾನಿಯಾ ಹೆಚ್ಚಿನ ಬಾಧ್ಯತೆ ಹೊರಬೇಕಾಗುತ್ತದೆ ಎಂದಿರುವ ಆಯೋಗ.

100 ಗ್ರಾಂ ಎಂದು 82 ಗ್ರಾಂ ಬ್ರಿಟಾನಿಯಾ ಮಾರಿಗೋಲ್ಡ್‌ ಬಿಸ್ಕತ್ತಿನ ಪೊಟ್ಟಣ ಮಾರಾಟ ಮಾಡುವ ಮೂಲಕ ಗ್ರಾಹಕರೊಬ್ಬರಿಗೆ ಸೇವಾ ನ್ಯೂನತೆ ಹಾಗೂ ಮಾನಸಿಕ ವೇದನೆ ಉಂಟು ಮಾಡಿರುವುದು ರುಜುವಾತಾದ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಬ್ರಿಟಾನಿಯಾ ಇಂಡಸ್ಟ್ರೀಸ್‌ಗೆ ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಈಚೆಗೆ ರೂ. 30 ಸಾವಿರ ದಂಡ ವಿಧಿಸಿದೆ.

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಪೊನ್ನಂಪೇಟೆಯ ಹಳ್ಳಿಗಟ್ಟು ಗ್ರಾಮದ ಎಂ ಇ ಹಾಲಿ ಅವರು ಗ್ರಾಹಕ ಸಂರಕ್ಷಣಾ ಕಾಯಿದೆ ಸೆಕ್ಷನ್‌ 12ರ ಅನ್ವಯ ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗದ ಹಂಗಾಮಿ ಅಧ್ಯಕ್ಷೆ ಸಿ ರೇಣುಕಾಂಬ ಮತ್ತು ಸದಸ್ಯೆ ಗೌರಮ್ಮಣ್ಣಿ ಅವರು ಈ ಆದೇಶ ಮಾಡಿದ್ದಾರೆ.

“ಬ್ರಿಟಾನಿಯಾ ಇಂಡಸ್ಟ್ರೀಸ್‌ ರಾಜ್ಯ ಆಯೋಗದ ಆದೇಶವನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವುದು ಕಂಡು ಬಂದಿದೆ. ದೂರುದಾರ ಹಾಲಿ ಅವರಿಗೆ ಸೇವಾ ನ್ಯೂನತೆ ಉಂಟು ಮಾಡಿ, ಅನುಚಿತ ವ್ಯಾಪಾರ ಪದ್ಧತಿಯನ್ನು ಅನುಸರಿಸುತ್ತಿರುವುದರಿಂದ ಬ್ರಿಟಾನಿಯಾ ಇಂಡಸ್ಟ್ರೀಸ್‌ ಹಾಲಿ ಅವರಿಗೆ ಪರಿಹಾರ ನೀಡುವ ಬಾಧ್ಯತೆ ಹೊಂದಿದೆ” ಎಂದು ಆಯೋಗ ಹೇಳಿದೆ.

“ಬ್ರಿಟಾನಿಯಾ ಇಂಡಸ್ಟ್ರೀಸ್‌ ಕಂಪೆನಿಯ ಬಿಸ್ಕತ್ತನ್ನು ಹಾಲಿ ಅವರು ಹಣ ಪಾವತಿಸಿ ಖರೀದಿಸಿದ್ದು, ಆ ಪೊಟ್ಟಣ ತೂಕದಲ್ಲಿ ವ್ಯತ್ಯಾಸವಾಗಿದೆ. ಈ ಮೂಲಕ ಬ್ರಿಟಾನಿಯಾ ಕಂಪೆನಿಯು ಅನುಚಿತ ವ್ಯಾಪಾರ ಪದ್ದತಿ ಅನುಸರಿಸುತ್ತಿರುವುದನ್ನು ಸಾಬೀತುಪಡಿಸುವಲ್ಲಿ ಹಾಲಿ ಅವರು ಸಫಲರಾಗಿದ್ದಾರೆ” ಎಂದು ಆಯೋಗ ಹೇಳಿದೆ.

“ಹಾಲಿ ಅವರ ದೂರನ್ನು ಭಾಗಶಃ ಪುರಸ್ಕರಿಸಲಾಗಿದೆ. ಸೇವಾ ನ್ಯೂನತೆ ಮತ್ತು ಅನುಚಿತ ವ್ಯಾಪಾರ ಪದ್ಧತಿ ಅನುಸರಿಸಿರುವುದರಿಂದ ಈ ಆದೇಶವಾದ 45 ದಿನಗಳ ಒಳಗೆ 10 ಸಾವಿರ ನೀಡಬೇಕು. ತಪ್ಪಿದಲ್ಲಿ ಶೇ. 6 ಬಡ್ಡಿ ಪಾವತಿಸಬೇಕು. ಹಾಲಿಯವರಿಗೆ ಮಾನಸಿಕ ವೇದನೆ ಉಂಟು ಮಾಡಿರುವುದಕ್ಕೆ ಬ್ರಿಟಾನಿಯಾ ಇಂಡಸ್ಟ್ರೀಸ್‌ 10 ಸಾವಿರ ರೂಪಾಯಿ ಹಾಗೂ ವ್ಯಾಜ್ಯದ ಖರ್ಚು ವೆಚ್ಚಗಳಿಗಾಗಿ 10 ಸಾವಿರ ರೂಪಾಯಿಯನ್ನು ಈ ಆದೇಶವಾದ 45 ದಿನಗಳ ಒಳಗೆ ಪಾವತಿಸಬೇಕು” ಎಂದು ಆದೇಶದಲ್ಲಿ ತಿಳಿಸಲಾಗಿದೆ.

“ಹಾಲಿ ಅವರು ಬಿಸ್ಕತ್ತು ಪೊಟ್ಟಣದ ಫೋಟೊಗಳನ್ನು ಸಲ್ಲಿಸಿದ್ದಾರೆ. ಬ್ರಿಟಾನಿಯಾಗೆ ಮಾರಿಗೋಲ್ಡ್‌ ಬಿಸ್ಕತ್ತನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ರಿಜಿಸ್ಟರ್‌ ಅನ್ನು ಆಯೋಗಕ್ಕೆ ಸಲ್ಲಿಸುವಂತೆ ಜಿಲ್ಲಾ ಆಯೋಗವು ಆದೇಶ ಮಾಡಿತ್ತು. ಇದನ್ನು ಪ್ರಶ್ನಿಸಿ ಬ್ರಿಟಾನಿಯಾ ರಾಜ್ಯ ಆಯೋಗದಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಿತ್ತು. ಬ್ರಿಟಾನಿಯಾ ಬಿಸ್ಕತ್ತಿನ ಮಾದರಿ ತಮ್ಮದಲ್ಲ ಎಂದು ಬ್ರಿಟಾನಿಯಾ ಹೇಳಿ, ಜಿಲ್ಲಾ ವೇದಿಕೆಯ ಆದೇಶನ್ನು ರಾಜ್ಯ ಆಯೋಗದಲ್ಲಿ ಮರುಪರಿಶೀಲನಾ ಅರ್ಜಿಯ ಮೂಲಕ ಪ್ರಶ್ನಿಸಲಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ್ದ ರಾಜ್ಯ ಆಯೋಗವು ಜಿಲ್ಲಾ ವೇದಿಕೆಯ ನಿರ್ದೇಶನದಂತೆ ರಿಜಿಸ್ಟರ್‌ ಹಾಜರುಪಡಿಸಬೇಕು ಎಂದು ಹೇಳಿ ಬ್ರಿಟಾನಿಯಾ ಅರ್ಜಿ ವಜಾ ಮಾಡಿತ್ತು. ಆನಂತರ ಬ್ರಿಟಾನಿಯಾ ವೇದಿಕೆಯ ಪ್ರಕ್ರಿಯೆಯಲ್ಲಿ ಭಾಗಿಯಾಗಿಲ್ಲ ಮತ್ತು ರಿಜಿಸ್ಟರ್‌ ಹಾಜರುಪಡಿಸಿರಲಿಲ್ಲ” ಎಂದು ಆಯೋಗ ಆದೇಶದಲ್ಲಿ ವಿವರಿಸಿದೆ.

 “ಬ್ರಿಟಾನಿಯಾ ಇಂಡಸ್ಟ್ರೀಸ್‌ ಉಂಟು ಮಾಡಿರುವ ಸೇವಾ ನ್ಯೂನತೆಯು ಒಬ್ಬ ವ್ಯಕ್ತಿಗೆ ಅನ್ವಯಿಸದೇ ಸಾರ್ವಜನಿಕವಾಗಿ ಅನ್ವಯಿಸಿ ಅನುಚಿತ ವ್ಯಾಪಾರ ಪದ್ಧತಿಯಿಂದ ಗ್ರಾಹಕರಿಗೆ ತೂಕದಲ್ಲಿ ಮೋಸ, ವಂಚನೆ ಉಂಟು ಮಾಡಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಅನ್ಯಾಯ ಎಸಗಿ, ಅಕ್ರಮ ಸಂಪಾದನೆ ಮಾಡುತ್ತಿರುವುದರಿಂದ ಹೆಚ್ಚಿನ ಬಾಧ್ಯತೆಯನ್ನು ಬ್ರಿಟಾನಿಯಾ ಇಂಡಸ್ಟ್ರೀಸ್‌ ಹೊರಬೇಕಾಗುತ್ತದೆ. ಬ್ರಿಟಾನಿಯಾ ಇಂಡಸ್ಟ್ರೀಸ್‌ ಬಿಸ್ಕತ್ತು ತಯಾರಿಕಾ ಕಂಪೆನಿಯಾಗಿದ್ದು, ಎರಡನೇ ಪ್ರತಿವಾದಿ ಶಶಿಧರ್‌ ಅವರು ಮಾರಾಟಗಾರರಾಗಿರುತ್ತಾರೆ. ಇವರು ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿಲ್ಲ. ಹಾಗಾಗಿ, ಇವರಿಂದ ಸೇವಾ ನ್ಯೂನತೆಯಾಗಿಲ್ಲ” ಎಂದು ಆಯೋಗ ಅವರ ವಿರುದ್ಧದ ದೂರು ವಜಾ ಮಾಡಿದೆ.

ಇದಕ್ಕೂ ಮುನ್ನ, ಬ್ರಿಟಾನಿಯಾ ಇಂಡಸ್ಟ್ರೀಸ್‌ “ತಮ್ಮ ಕಂಪೆನಿಯ ಬಿಸ್ಕತ್ತನ್ನು ಅದೇ ಮಾದರಿಯಲ್ಲಿ ಬೇರೆಯವರು ತಯಾರು ಮಾಡಿರುತ್ತಾರೆ. ಇದಕ್ಕೆ ನಾವು ಜವಾಬ್ದಾರರಲ್ಲ. ತಾವು ಬಿಸ್ಕತ್ತನ್ನು ಮಾರುಕಟ್ಟೆಗೆ ಬಿಡುವುದಕ್ಕೂ ಮುನ್ನ ಗುಣಮಟ್ಟ ನಿಯಂತ್ರಣ ಇಲಾಖೆ ಪರಿಶೀಲಿಸಿದ ನಂತರ ಮಾರುಕಟ್ಟೆಗೆ ಬಿಡುತ್ತೇವೆ. ತಮ್ಮ ಬಳಿ ಇರುವ ಸಿಸ್ಟಮ್‌, ಡೈಲಿ ಕ್ವಾಲಿಟಿ ಇಂಡೆಕ್ಸಿಂಗ್‌ ಸಿಸ್ಟಮ್‌ ಎಂದು ಇರುತ್ತದೆ. ಅಲ್ಲಿ ಪ್ರತಿ ಪೊಟ್ಟಣ ಕೂಡ ಪರೀಕ್ಷಿಸಿ ಡಿಸ್ಪ್ಯಾಚ್‌ ಆಗಿ ಹೊರಬರುತ್ತದೆ. ಇದು ಮಾರಾಟಕ್ಕೂ ಮೊದಲು ಸಕ್ಷಮ ಪ್ರಾಧಿಕಾರದಿಂದ ಮಂಜೂರಾತಿ ಪಡೆದಿರುತ್ತದೆ. ದೂರುದಾರ ಹಾಲಿ ಅವರು ಲೀಗಲ್‌ ಮೆಟ್ರಾಲಜಿ ಕಾಯಿದೆ ಸೆಕ್ಷನ್‌ 15ರ ಪ್ರಕಾ ದೂರು ನೀಡಬೇಕಿತ್ತು. ಆದರೆ, ಗ್ರಾಹಕ ವೇದಿಕೆಯಲ್ಲಿ ದೂರು ನೀಡಿದ್ದಾರೆ. ಇದು ಸರಿಯಲ್ಲ. ತಮ್ಮಿಂದ ಯಾವುದೇ ಸೇವಾ ನ್ಯೂನತೆಯಾಗಿಲ್ಲ. ದೂರನ್ನು ವಜಾ ಮಾಡಬೇಕು” ಎಂದು ಆಕ್ಷೇಪಣೆ ಸಲ್ಲಿಸಿ ಕೋರಿತ್ತು.

ಪ್ರಕರಣದ ಹಿನ್ನೆಲೆ: ದೂರುದಾರ ಹಾಲಿ ಅವರು ಗೋಣಿಕೊಪ್ಪ ಪಟ್ಟಣದಲ್ಲಿ ಬ್ರಿಟಾನಿಯಾ ಮಾರಿಗೋಲ್ಡ್‌ ಬಿಸ್ಕತ್ತನ್ನು 2017ರ ಜೂನ್‌ 29ರಂದು ಖರೀದಿಸಿದ್ದರು. ರಸೀದಿಯಲ್ಲಿನ ಮಾಹಿತಿಯ ಪ್ರಕಾರ ಬಿಸ್ಕತ್ತಿನ ತೂಕ 100 ಗ್ರಾಂ ಎಂದು ಪೊಟ್ಟಣದ ಮೇಲೆ ಬರೆದಿತ್ತು. ಬಿಸ್ಕತ್ತನ್ನು ತೂಕ ಮಾಡಿದಾಗ ಅದು 82 ಗ್ರಾಂ ಇತ್ತು. ಈ ವಿಚಾರವನ್ನು ಶಶಿಧರ್‌ ಅವರಿಗೆ ಕರೆ ಮಾಡಿ, ಬಿಸ್ಕತ್ತಿನ ತೂಕ ಕಡಿಮೆ ಇದೆ ಎಂದು ಮಾಹಿತಿ ನೀಡಿದ್ದರು.

ಈ ಹಿನ್ನೆಲೆಯಲ್ಲಿ 2017ರ ಜುಲೈ 13ರಂದು ಗ್ರಾಹಕ ವೇದಿಕೆಯಲ್ಲಿ ಪ್ರಕರಣ ದಾಖಲಿಸಿದ್ದು, 10 ಲಕ್ಷ ಪರಿಹಾರವನ್ನು ಸೇವಾ ನ್ಯೂನತೆ ಮತ್ತು ಮಾನಸಿಕ ವೇದನೆಗಾಗಿ ಕೇಳಿದ್ದರು. ಪ್ರಕರಣದ ಸಂಬಂಧ ಆಯೋಗ ನೋಟಿಸ್‌ ನೀಡಿದ್ದರಿಂದ ಬ್ರಿಟಾನಿಯಾ ಇಂಡಿಸ್ಟ್ರೀಸ್‌ ಪರವಾಗಿ ತಕರಾರು ಸಲ್ಲಿಕೆಯಾಗಿತ್ತು.

Attachment
PDF
M E Hali Vs Britania Industries.pdf
Preview
Kannada Bar & Bench
kannada.barandbench.com