ಸುದ್ದಿಗಳು

ಏರ್ ಇಂಡಿಯಾದ ಎಲ್ಲಾ ಬೋಯಿಂಗ್ ವಿಮಾನಗಳ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಪಿಐಎಲ್

ಇತ್ತೀಚೆಗೆ ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ಬೋಯಿಂಗ್ ವಿಮಾನ ಅಪಘಾತಕ್ಕೀಡಾಗಿತ್ತು. ಅದರಲ್ಲಿದ್ದ 241 ಪ್ರಯಾಣಿಕರು ಮತ್ತು ಸಿಬ್ಬಂದಿ ಹಾಗೂ ಅದು ಅಪ್ಪಳಿಸಿದ ವ್ಯಾಪ್ತಿಯಲ್ಲಿನ 29 ಮಂದಿ ಸಾವನ್ನಪ್ಪಿದ್ದರು.

Bar & Bench

ಏರ್‌ ಇಂಡಿಯಾದ ಎಲ್ಲಾ ಬೋಯಿಂಗ್‌ ವಿಮಾನಗಳ ಸುರಕ್ಷತಾ ತಪಾಸಣೆ ಪೂರ್ಣಗೊಳ್ಳುವವರೆಗೆ ಅವುಗಳ ಕಾರ್ಯಾಚರಣೆ ಸ್ಥಗಿತಗೊಳಿಸಲು ತುರ್ತು ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಇತ್ತೀಚೆಗೆ ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ಬೋಯಿಂಗ್ ವಿಮಾನ ಅಪಘಾತಕ್ಕೀಡಾಗಿ ಅದರಲ್ಲಿದ್ದ 241 ಪ್ರಯಾಣಿಕರು ಮತ್ತು ಸಿಬ್ಬಂದಿಯ ಜೊತೆಗೆ ಅದು ಅಪ್ಪಳಿಸಿದ ಕಟ್ಟಡದ ವ್ಯಾಪ್ತಿಯಲ್ಲಿದ್ದ 29 ಮಂದಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಪ್ರಸ್ತುತ ಅರ್ಜಿ ಸಲ್ಲಿಸಲಾಗಿದೆ.

ಏರ್ ಇಂಡಿಯಾ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಪ್ರಯಾಣಿಕರ ಸುರಕ್ಷತೆ ಮತ್ತು ಕಾನೂನು ಪಾಲನೆ ಖಚಿತಪಡಿಸಿಕೊಳ್ಳುವಂತೆ ಅರ್ಜಿದಾರರಾಗಿರುವ ಪ್ರಾಕ್ಟೀಸ್‌ ನಿರತ ವಕೀಲ ಅಜಯ್ ಬನ್ಸಾಲ್ ಕೋರಿದ್ದಾರೆ.

ಅರ್ಜಿಯ ಪ್ರಮುಖಾಂಶಗಳು

  • ತಾನು ಹಾಗೂ ತನ್ನ ಪತ್ನಿ ಮೇ 20, 2025ರಂದು ದೆಹಲಿಯಿಂದ ಷಿಕಾಗೋಗೆ ಏರ್‌ ಇಂಡಿಯಾ ವಿಮಾನ 127ರಲ್ಲಿ ಪ್ರಯಣ ಬೆಳೆಸಿದ್ದೆವು. ಆಗ ಸೀಟುಗಳು, ಮನರಂಜನೆ ಹಾಗೂ ಹವಾ ನಿಯಂತ್ರಣ ವ್ಯವಸ್ಥೆ ಕಾರ್ಯ ನಿರ್ವಹಿಸದೆ ಇರುವುದು ಕಂಡುಬಂದಿತ್ತು. ಏರ್‌ ಇಂಡಿಯಾ ತನ್ನ ದೂರನ್ನು ಭಾಗಶಃ ಒಪ್ಪಿ ₹10,000 ಪರಿಹಾರ ನೀಡಿತ್ತು.

  • ಈ ಸೇವಾ ಲೋಪ ಪ್ರತ್ಯೇಕ ಘಟನೆಯಲ್ಲ. ಏರ್‌ ಇಂಡಿಯಾ ವಿಮಾನಗಳು ಅಸಮರ್ಪಕವಾಗಿ ಕಾರ್ಯನಿರ್ವಹಿಸುವುದನ್ನು ಬಿಂಬಿಸುವ ಹಲವು ವರದಿಗಳು ಸಾಮಾಜಿಕ ಮಾಧ್ಯಮದ ವೀಡಿಯೊಗಳಿವೆ.

  •  ಜೂನ್ 12ರಂದು ಅಹಮಾದಾಬಾದ್‌ನಲ್ಲಿ ಸಂಭವಿಸಿದ ಅಪಘಾತ, ವಿಮಾನದ ಹಾರಾಟ ಯೋಗ್ಯತೆ, ನಿರ್ವಹಣಾ ಪರಿಶೀಲನೆಗಳ ಸಮರ್ಪಕತೆಯ ಬಗ್ಗೆ ಗಂಭೀರ ಅನುಮಾನ ಹುಟ್ಟುಹಾಕಿದೆ.

  • ಏರ್ ಇಂಡಿಯಾದ ಆಂತರಿಕ ಸುರಕ್ಷತಾ ತಪಾಸಣಾ ದಾಖಲೆಗಳು ಸುಳ್ಳು ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯದ (ಡಿಜಿಸಿಎ) ತಪಾಸಣಾ ವರದಿ ಹೇಳುತ್ತದೆ.

  • ಏರ್‌ ಇಂಡಿಯಾ ಹದಿಮೂರು ಸ್ಥಳಗಳಲ್ಲಿ ನಡೆಸಿದೆ ಎನ್ನಲಾದ ತಪಾಸಣೆ ನಕಲಿ ಎಂದು ಕಂಡುಬಂದಿದೆ.

  • ಕೆಲವು ಸಂದರ್ಭಗಳಲ್ಲಿ, ತಪಸಣಾ ಅಧಿಕಾರಿಗಳು ಎಂದು ತಿಳಿಸಲಾದವರು ಆಪಾದಿತ ತಪಾಸಣೆಯ ಸಮಯದಲ್ಲಿ ಪ್ರಯಾಣಿಕರಾಗಿ ಪ್ರಯಾಣಿಸುತ್ತಿರುವುದು ಕಂಡುಬಂದಿದೆ.

  •  ಡಿಜಿಸಿಎ ಗಂಭೀರ ನ್ಯೂನತೆಗಳನ್ನು ಎತ್ತಿ ತೋರಿಸಿದರೂ ಲೋಪ ಸರಿಪಡಿಸಲು ಮುಂದಾಗಿಲ್ಲ.

    ಅಧಿಕಾರಿಗಳು ಇದರ ಹೊಣೆ ಹೊರಬೇಕು.

  • 1934ರ ವಿಮಾನ ಕಾಯಿದೆ ಮತ್ತು 1937 ರ ವಿಮಾನ ನಿಯಮಾವಳಿ  ಜಾರಿಗೊಳಿಸಬೇಕು.

    ತಾಂತ್ರಿಕ ಅಂಶಗಳನ್ನು ಆಗಾಗ್ಗೆ ಪರಿಶೀಲಿಸಬೇಕು.

  • ಸುರಕ್ಷತಾ ತಪಾಸಣೆಯಲ್ಲಿ ದೊರೆತ ಮಾಹಿತಿಯನ್ನು ಸಾರ್ವಜನಿಕಗೊಳಿಸಲು ನ್ಯಾಯಾಲಯ ಸೂಚಿಸಬೇಕು. ತಪ್ಪಿದಲ್ಲಿ ದಂಡ ವಿಧಿಸಬೇಕು.