
ಇತ್ತೀಚೆಗೆ ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದ ಸಂತ್ರಸ್ತರು ಮತ್ತು ಮೃತರ ಕುಟುಂಬಗಳಿಗೆ ಸಹಾಯ ಮಾಡಲು ಗುಜರಾತ್ ರಾಜ್ಯ ಕಾನೂನು ಸೇವಾ ಪ್ರಾಧಿಕಾರ (ಜಿಎಸ್‌ಎಲ್‌ಎಸ್‌ಎ) ಸಹಾಯವಾಣಿ ಆರಂಭಿಸಿದೆ.
ಪ್ರಯಾಣಿಕರ ವಿವರಗಳನ್ನು ಸಂಗ್ರಹಿಸಲು, ಪ್ರಮಾಣಪತ್ರಗಳು/ದಾಖಲೆಗಳ ವಿತರಣೆ ಮತ್ತು ಕಾನೂನು ಸೇವೆಗಳಿಗಾಗಿ ಸಹಾಯವಾಣಿಯನ್ನು ಸಂಪರ್ಕಿಸಬಹುದು ಎಂದು ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.
ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ (ಎನ್‌ಎಎಲ್‌ಎಸ್‌ಎ-ನಾಲ್ಸಾ) ಕಾರ್ಯನಿರ್ವಾಹಕ ಅಧ್ಯಕ್ಷರಾದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಮಾರ್ಗದರ್ಶನದಲ್ಲಿ ತಾನು ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್ವಾಲ್ ಮತ್ತು ನ್ಯಾಯಮೂರ್ತಿ ಎ ವೈ ಕೊಗ್ಜೆ ಅವರ ನೇತೃತ್ವದಲ್ಲಿ ಅಹಮದಾಬಾದ್ ನಗರ ನಾಗರಿಕ ಕಾನೂನು ಸೇವಾ ಸಮಿತಿಯ ಸಮನ್ವಯದೊಂದಿಗೆ 24 ಗಂಟೆಗಳ ಸಹಾಯವಾಣಿ ಆರಂಭಿಸುತ್ತಿರುವುದಾಗಿ ಪ್ರಾಧಿಕಾರ ವಿವರಿಸಿದೆ.
ದಫ್ನಾಲಾದ ಶಾಹಿಬಾಗ್‌ನಲ್ಲಿರುವ ಕಾನೂನು ಸೇವಾ ಕೇಂದ್ರದಲ್ಲಿ ಸಹಾಯವಾಣಿ ಸ್ಥಾಪಿಸಲು ಪ್ರಾಧಿಕಾರ ನಿರ್ಧರಿಸಿದ್ದು ಅಲ್ಲಿ ವಿವಿಧ ಏಜೆನ್ಸಿಗಳಿಂದ ಸೇವೆ ಪಡೆಯುವ ಕುರಿತು ಮಾರ್ಗದರ್ಶನ ನೀಡಲಾಗುತ್ತದೆ.
ಜೂನ್ 12ರಂದು (ಗುರುವಾರ) ಅಹಮಾದಾಬಾದ್‌ನ ಸರ್ದಾರ್ ವಲ್ಲಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ ಗ್ಯಾಟ್ವಿಕ್‌ಗೆ ಹೊರಟಿದ್ದ ಏರ್ ಇಂಡಿಯಾ 171 ವಿಮಾನ ಅಪಘಾತಕ್ಕೀಡಾಗಿ, ವಿಮಾನದಲ್ಲಿದ್ದ 241 ಪ್ರಯಾಣಿಕರು ಮತ್ತು ಸಿಬ್ಬಂದಿ ಸಾವನ್ನಪ್ಪಿದರು. ಬೋಯಿಂಗ್ 787-8 ವಿಮಾನವು 169 ಭಾರತೀಯ ಪ್ರಜೆಗಳು, 53 ಬ್ರಿಟಿಷ್ ಪ್ರಜೆಗಳು, ಒಬ್ಬ ಕೆನಡಾ ಪ್ರಜೆ ಮತ್ತು ಏಳು ಪೋರ್ಚುಗೀಸ್ ಪ್ರಜೆಗಳನ್ನು ಕರೆದೊಯುತ್ತಿತ್ತು. ಅಲ್ಲದೆ ನಗರದ ಬಿಜೆ ವೈದ್ಯಕೀಯ ಕಾಲೇಜಿನ ಹಾಸ್ಟೆಲ್‌ಗೆ ವಿಮಾನ ಅಪ್ಪಳಿಸಿದ್ದರಿಂದ ಅಲ್ಲಿನ ಐವರು ವಿದ್ಯಾರ್ಥಿಗಳು ಸೇರಿದಂತೆ ಹಲವರು ಮೃತಪಟ್ಟಿದ್ದರು.
ದುರಂತದಲ್ಲಿ ಪ್ರಾಣ ಕಳೆದುಕೊಂಡ ಪ್ರತಿಯೊಬ್ಬ ವ್ಯಕ್ತಿಯ ಕುಟುಂಬಗಳಿಗೆ ₹1 ಕೋಟಿ ಪರಿಹಾರ ನೀಡುವುದಾಗಿ ಏರ್ ಇಂಡಿಯಾ ಒಡೆತನದ ಟಾಟಾ ಗ್ರೂಪ್ ಘೋಷಿಸಿದ್ದು ಗಾಯಗೊಂಡವರ ವೈದ್ಯಕೀಯ ವೆಚ್ಚವನ್ನು ಭರಿಸುವುದಾಗಿಯೂ ಹೇಳಿದೆ.
[ಪ್ರಕಟಣೆಯ ಪ್ರತಿ]