ಸುದ್ದಿಗಳು

ಚುನಾವಣೆ ವೇಳೆ ಕೋಮು ಸೌಹಾರ್ದಕ್ಕೆ ಧಕ್ಕೆ ತರಲೆಂದು ಧ್ವನಿವರ್ಧಕ ವಿರೋಧಿಸಿ ಅರ್ಜಿ ಸಲ್ಲಿಕೆ: ಅಲಾಹಾಬಾದ್ ಹೈಕೋರ್ಟ್

Bar & Bench

ಉತ್ತರಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವ ವೇಳೆ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಉದ್ದೇಶದಿಂದ ದೇವಸ್ಥಾನ ಮತ್ತು ಮಸೀದಿಗಳಲ್ಲಿ ಧ್ವನಿವರ್ಧಕಗಳ ಬಳಕೆಯ ವಿರುದ್ಧ ಮನವಿ ಸಲ್ಲಿಸಲಾಗಿದೆ ಎಂದು ಅಭಿಪ್ರಾಯಪಟ್ಟು ಇತ್ತೀಚೆಗೆ ಅಲಾಹಾಬಾದ್‌ ಹೈಕೋರ್ಟ್‌ ಅರ್ಜಿಯೊಂದನ್ನು ತಿರಸ್ಕರಿಸಿದೆ [ಇಸ್ಲಾಮುದ್ದೀನ್ ಮತ್ತು ಶ್ರೀ ರವೀಂದ್ರ ಕುಮಾರ್ ಮಂದರ್, ರಾಂಪುರ್‌ ಜಿಲ್ಲಾಧಿಕಾರಿ ಮತ್ತಿತರರ ನಡುವಣ ಪ್ರಕರಣ].

ದೇವಸ್ಥಾನ, ಮಸೀದಿಗಳಲ್ಲಿ ಧ್ವನಿವರ್ಧಕ ವಿರೋಧಿಸಿ ಸಲ್ಲಿಸಲಾಗಿರುವ ಮನವಿ ರಾಜ್ಯದಲ್ಲಿ ಕೋಮುಸೌಹಾರ್ದತೆ ಮೇಲೆ ಪರಿಣಾಮ ಬೀರಲೆಂದು ಸಲ್ಲಿಸಲಾದ ದ್ವೇಷಪೂರಿತ ಪ್ರಾಯೋಜಿತ ಮೊಕದ್ದಮೆ ಎಂದು ನ್ಯಾ. ರೋಹಿತ್‌ ರಂಜನ್‌ ಅಗರ್‌ವಾಲ್‌ ಅಭಿಪ್ರಾಯಪಟ್ಟಿದ್ದಾರೆ. ರಾಜ್ಯದ ಕೋಮು ಸೌಹಾರ್ದತೆಯನ್ನು ಅಸ್ಥಿರಗೊಳಿಸಲು ಯತ್ನಿಸುವ ಯಾವುದೇ ವ್ಯಕ್ತಿಯ ಇಂತಹ ನಡೆಗೆ ನ್ಯಾಯಾಲಯ ಬಳಕೆಯಾಗುವಂತಿಲ್ಲ ಎಂದು ಪೀಠ ಹೇಳಿದೆ. 2015ರಲ್ಲಿ ದೇವಸ್ಥಾನ ಹಾಗೂ ಮಸೀದಿಗಳಲ್ಲಿ ಧ್ವನಿವರ್ಧಕದ ಬಳಕೆಯ ಕುರಿತಾಗಿ ರಾಮ್‌ಪುರ್ ಜಿಲ್ಲಾಡಳಿತಕ್ಕೆ ನ್ಯಾಯಾಲಯವು ನೀಡಿದ್ದ ಆದೇಶದ ಪಾಲನೆಯಾಗಿಲ್ಲ ಎಂದು ಅರ್ಜಿದಾರರು ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನು ದಾಖಲಿಸಿದ್ದರು.

2021 ರಲ್ಲಿ ಕೆಲ ಮಂದಿ ದೇವಾಲಯಗಳು ಮತ್ತು ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಬಳಸಲು ಪ್ರಾರಂಭಿಸಿದರು, ಇದು ಶಬ್ದ ಮಾಲಿನ್ಯಕ್ಕೆ ಕಾರಣವಾಯಿತು ಎಂದು ಪ್ರಸ್ತುತ ಪ್ರಕರಣದ ಅರ್ಜಿದಾರರು ತಿಳಿಸಿದ್ದರು. ಅವರು ಸ್ಥಳೀಯ ಅಧಿಕಾರಿಗಳಿಗೆ ಬರೆದ ಪತ್ರವನ್ನೂ ನ್ಯಾಯಾಲಯದ ಗಮನಕ್ಕೆ ತರಲಾಗಿತ್ತು.

ಆ ಬಳಿಕ ರಾಂಪುರ ಎಸ್‌ಪಿ ಅವರಿಗೆ ಬರೆದ ಪತ್ರ ಒಂದು ಸಮುದಾಯದ ವಿರುದ್ಧ ದೂರು ನೀಡಿ ಸಮಾಜದ ಇತರ ಸದಸ್ಯರ ವಿರುದ್ಧ ತರತಮದ ಆರೋಪ ಮಾಡಿರುವುದು ವಿಚಲಿತಗೊಳಿಸುವ ಸಂಗತಿ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.