ಶಬರಿಮಲೆ, ತ್ರಿವಳಿ ತಲಾಕ್‌ನಂತೆ ಹಿಜಾಬ್‌ ಸಹ ಸಾಂವಿಧಾನಿಕ ನೈತಿಕತೆ ಪರೀಕ್ಷೆಯಲ್ಲಿ ಉತ್ತೀರ್ಣವಾಗಲಿ: ಸರ್ಕಾರದ ನಿಲುವು

ಇಸ್ಲಾಂನಲ್ಲಿ ಹಿಜಾಬ್‌ ಧರಿಸುವುದು ಅಗತ್ಯ ಧಾರ್ಮಿಕ ಆಚರಣೆಯ ಭಾಗವಲ್ಲ ಎಂಬ ನಿಲುವನ್ನು ರಾಜ್ಯ ಸರ್ಕಾರ ವ್ಯಕ್ತಪಡಿಸಿತು.
ಶಬರಿಮಲೆ, ತ್ರಿವಳಿ ತಲಾಕ್‌ನಂತೆ ಹಿಜಾಬ್‌ ಸಹ ಸಾಂವಿಧಾನಿಕ ನೈತಿಕತೆ ಪರೀಕ್ಷೆಯಲ್ಲಿ ಉತ್ತೀರ್ಣವಾಗಲಿ: ಸರ್ಕಾರದ ನಿಲುವು

Karnataka High Court, Hijab Ban

ಶಬರಿಮಲೆ ಮತ್ತು ತ್ರಿವಳಿ ತಲಾಕ್‌ ಪ್ರಕರಣಗಳ ತೀರ್ಪುಗಳಲ್ಲಿ ಸುಪ್ರೀಂ ಕೋರ್ಟ್‌ ರೂಪಿಸಿರುವ ಸಾಂವಿಧಾನಿಕ ನೈತಿಕತೆ ಪರೀಕ್ಷೆಯಲ್ಲಿ ಹಿಜಾಬ್‌ ಧಾರಣೆ ಸಹ ಉತ್ತೀರ್ಣವಾಗಬೇಕು ಎಂದು ರಾಜ್ಯ ಸರ್ಕಾರವು ಶುಕ್ರವಾರ ಕರ್ನಾಟಕ ಹೈಕೋರ್ಟ್‌ಗೆ ತನ್ನ ನಿಲುವು ತಿಳಿಸಿತು.

ಹಿಜಾಬ್‌ ಧರಿಸಿ ಕಾಲೇಜಿಗೆ ತೆರಳುವುದನ್ನು ನಿರ್ಬಂಧಿಸಿ ರಾಜ್ಯ ಸರ್ಕಾರವು ಹೊರಡಿಸಿರುವ ಆದೇಶದ ಹಿನ್ನೆಲೆಯಲ್ಲಿ ತಮ್ಮನ್ನು ಕಾಲೇಜಿಗೆ ಪ್ರವೇಶಿಸಲು ಬಿಡುತ್ತಿಲ್ಲ ಎಂದು ಆಕ್ಷೇಪಿಸಿ ಮುಸ್ಲಿಮ್‌ ವಿದ್ಯಾರ್ಥಿನಿಯರು ಸಲ್ಲಿಸಿರುವ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದ ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌. ದೀಕ್ಷಿತ್ ಮತ್ತು ಜೆ ಎಂ ಖಾಜಿ ಅವರ ಪೂರ್ಣ ಪೀಠವು ಆರನೇ ದಿನವಾದ ಶುಕ್ರವಾರ ಸಹ ಮುಂದುವರೆಸಿತು.

ಶಬರಿಮಲೆ ಮತ್ತು ತ್ರಿವಳಿ ತಲಾಕ್‌ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ ತೀರ್ಪನ್ನು ಉಲ್ಲೇಖಿಸಿದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು “ಹಿಜಾಬ್‌ ಧಾರಣೆಯು ಕಡ್ಡಾಯವಾಗಿ ಸಾಂವಿಧಾನಿಕ ನೈತಿಕತೆ ಮತ್ತು ವೈಯಕ್ತಿಕ ಘನತೆಯ ಪರೀಕ್ಷೆಯಲ್ಲಿ ಉತ್ತೀರ್ಣವಾಗಬೇಕಿದೆ” ಎಂದರು.

ಹಿಜಾಬ್‌ ನಿಷೇಧ ವಿವಾದದಲ್ಲಿ ಸರ್ಕಾರವನ್ನು ನಿಂದಿಸುತ್ತಿರುವುದಕ್ಕೆ ನೋವಾಗುತ್ತಿದೆ ಎಂದ ನಾವದಗಿ ಅವರು “ಈ ಪ್ರಕ್ರಿಯೆಯಲ್ಲಿ ಸರ್ಕಾರವನ್ನು ನಿಂದಿಸುತ್ತಿರುವುದಕ್ಕೆ ನಮಗೆ ನೋವಾಗಿದೆ. ನಾವು ಇನ್ನಾವುದೋ ಕಾರಣಕ್ಕೆ ಹೀಗೆ ಮಾಡುತ್ತಿದ್ದೇವೆ ಎನ್ನಲಾಗಿದೆ. ಹೆಣ್ಣು ಮಕ್ಕಳು ಮತ್ತು ಮಹಿಳೆಯರ ವಿಚಾರದಲ್ಲಿ ನಾವು ತಾರತಮ್ಯ ಎಸಗುತ್ತಿದ್ದೇವೆ ಎನ್ನಲಾಗುತ್ತಿದೆ. ಅತ್ಯಂತ ವಿನಮ್ರತೆಯಿಂದ ನಾನು ಹೇಳುವುದೇನೆಂದರೆ ರಾಜ್ಯ ಸರ್ಕಾರವು ಎಲ್ಲರನ್ನೂ ಸಮಾನವಾಗಿ ಕಾಣುವುದರಲ್ಲಿ ನಂಬಿಕೆ ಹೊಂದಿದೆ” ಎಂದರು.

ಅರ್ಜಿದಾರರಿಂದ ಎತ್ತಲಾದ ಮೂರು ಪ್ರಮುಖ ವಿಚಾರಗಳ ಕುರಿತು ಎಜಿ ವಾದ: 

ಅರ್ಜಿದಾರರು ತಮ್ಮ ವಾದಗಳಲ್ಲಿ ಎತ್ತಿರುವ ಪ್ರಮುಖ ಮೂರು ಅಂಶಗಳ ಸುತ್ತ ತಮ್ಮ ವಾದವನ್ನು ಕೇಂದ್ರೀಕರಿಸುವುದಾಗಿ ಎಜಿ ತಮ್ಮ ವಾದದ ಆರಂಭದಲ್ಲಿ ತಿಳಿಸಿದರು. ಅವುಗಳೆಂದರೆ:

  1. 2022ರ ಫೆಬ್ರವರಿ 5ರಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಲಾಗಿದೆ. ಇದು ಕರ್ನಾಟಕ ಶಿಕ್ಷಣ ಕಾಯಿದೆಗೆ ಅನುಗುಣವಾಗಿದೆ.

  2. ಹಿಜಾಬ್‌ ಧಾರಣೆ ಅಗತ್ಯ ಧಾರ್ಮಿಕ ಆಚರಣೆಯ ಭಾಗವಲ್ಲ ಎಂಬುದು ರಾಜ್ಯ ಸರ್ಕಾರದ ನಿಲುವಾಗಿದೆ.

  3. ಸಂವಿಧಾನದ 19(1)(ಎ) ವಿಧಿ ಅಡಿ ಹಿಜಾಬ್‌ ಧರಿಸಬಹುದು. ಇದನ್ನು ನಿಯಂತ್ರಿಸುವುದು 19(1)(ಎ) ವಿಧಿ ಉಲ್ಲಂಘನೆ ಎಂಬುದಾಗಿದೆ. ಇದನ್ನು ನಿಯಂತ್ರಿಸುವುದರಿಂದ ಹಕ್ಕಿನ ಉಲ್ಲಂಘನೆಯಾಗುವುದಿಲ್ಲ ಎಂಬುದು ನಮ್ಮ ನಿಲುವು ಎಂದು ನಾವದಗಿ ತಿಳಿಸಿದರು.

ತರಗತಿಯಲ್ಲಿ ಹಿಬಾಬ್‌ ನಿಷೇಧ

“2013ರಿಂದಲೇ ಸಮವಸ್ತ್ರ ಸೂಚಿಸಲಾಗಿತ್ತು. ಬಾಲಕಿಯರ ಸಮವಸ್ತ್ರ ಬದಲಿಸುವುದಕ್ಕೆ ಸಂಬಂಧಿಸಿದಂತೆ ಕಾಲೇಜು ಅಭಿವೃದ್ಧಿ ಸಮಿತಿ (ಸಿಡಿಸಿ) ನಿಲುವಳಿ ಮಂಡಿಸಿತ್ತು. 2013-14ನೇ ಸಾಲಿನಲ್ಲಿಯೇ ಸಮವಸ್ತ್ರದ ಬಗ್ಗೆ ಸೂಚನೆ ಇತ್ತು ಎಂಬುದನ್ನು ತೋರಿಸಲು ಈ ಮೂಲಕ ಪ್ರಯತ್ನಿಸಲಾಗಿದೆ” ಎಂದು ತರಗತಿಗೆ ವಿದ್ಯಾರ್ಥಿಗಳು ಹಿಜಾಬ್‌ ಧರಿಸಿ ಬರುವುದನ್ನು ನಿಷೇಧಿಸಿರುವ ಸರ್ಕಾರಿ ಆದೇಶದ ಹಿನ್ನೆಲೆಯನ್ನು ವಿವರಿಸಿದರು.

ಸರ್ಕಾರ ಆದೇಶ ಹೊರಡಿಸಿದ ಹಿನ್ನೆಲೆ

  • 2022ರ ಜನವರಿ 1ರಂದು ಸಿಡಿಸಿ ನಿರ್ಣಯ ಪಾಸು ಮಾಡಿದ ಬಳಿಕ ವಿದ್ಯಾರ್ಥಿಗಳು ಹಿಜಾಬ್‌ ಧರಿಸುವುದಾಗಿ ಹೇಳಿದ್ದು, ನಿಯಮಾವಳಿಗೆ ಅನುಗುಣವಾಗಿ ನಡೆದುಕೊಂಡಿಲ್ಲ.

  • ಜನವರಿ 25ರಂದು ಮತ್ತೊಂದು ನಿರ್ಣಯ ಪಾಸು ಮಾಡಲಾಗಿದ್ದು, ಅದರಲ್ಲಿ ರಾಜ್ಯ ಸರ್ಕಾರವು ರಚಿಸಿರುವ ಉನ್ನತಮಟ್ಟದ ಸಮಿತಿಯು ಪರಿಶೀಲಿಸುತ್ತಿರುವುದರಿಂದ ಸದ್ಯಕ್ಕೆ ಯಥಾಸ್ಥಿತಿ ಕಾಪಾಡುವಂತೆ ಹೇಳಲಾಗಿದೆ.

  • ಜನವರಿ 31ರಂದು ಮೂರನೇ ನಿರ್ಣಯ ಪಾಸು ಮಾಡಲಾಗಿದ್ದು, ಇದರಲ್ಲಿ ಮಕ್ಕಳು ಹಿಜಾಬ್‌ ಧರಿಸಿ ಬರುವಂತಿಲ್ಲ. ಹಿಜಾಬ್‌ ಧರಿಸಿದ ಹೆಣ್ಣು ಮಕ್ಕಳನ್ನು ಕಳುಹಿಸಿದರೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ. ಆದರೆ, ಈ ನಿರ್ಣಯವನ್ನು ಈ ನ್ಯಾಯಾಲಯ ಅಥವಾ ಬೇರೆಲ್ಲೂ ಪ್ರಶ್ನಿಸಲಾಗಿಲ್ಲ ಎಂದರು.

  • ನಿರ್ಣಯದ ವಿರುದ್ಧ ಪ್ರತಿಭಟನೆ ವ್ಯಾಪಕವಾದ್ದರಿಂದ ಸರ್ಕಾರವು ಫೆಬ್ರವರಿ 5ರಂದು ಆದೇಶ ಹೊರಡಿಸಿಲಾಯಿತು ಎಂದು ನಾವದಗಿ ತಿಳಿಸಿದರು.

ಸಾರ್ವಜನಿಕ ಸುವ್ಯವಸ್ಥೆ: ಆದೇಶ ಸಿದ್ಧಪಡಿಸಿದವರ ಅತ್ಯುತ್ಸಾಹ!

“ರಾಜ್ಯ ಸರ್ಕಾರದ ಆದೇಶವು ನಿರುಪದ್ರವ ಸ್ವರೂಪ ಹೊಂದಿದ್ದು, ಅರ್ಜಿದಾರರ ಹಕ್ಕಿಗೆ ತೊಡಕು ಮಾಡುವುದಿಲ್ಲ. ರಾಜ್ಯ ಸರ್ಕಾರವು ಈ ವಿಚಾರದಲ್ಲಿ ನೇರವಾಗಿ ಭಾಗಿಯಾಗಿಲ್ಲ. ಸಮವಸ್ತ್ರದ ವಿಚಾರದಲ್ಲಿ ಸಿಡಿಸಿ ಸೂಚಿಸುವುದನ್ನು ಅನುಸರಿಸಬೇಕು ಎಂಬ ನಿಲುವನ್ನು ಹೊಂದಿದೆ” ಎಂದರು.

“ಸರ್ಕಾರದ ಆದೇಶ ಸಿದ್ಧಪಡಿಸಿದವರು ಅತ್ಯುತ್ಸಾಹದಿಂದ ಸಾರ್ವಜನಿಕ ಸುವ್ಯವಸ್ಥೆ ಎಂದು ಉಲ್ಲೇಖಿಸಿದ್ದಾರೆ… ಹಿಜಾಬ್‌ ನಿಷೇಧಿಸುವ ಅಥವಾ ಸೂಚಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಈ ವಿಚಾರದಲ್ಲಿ ರಾಜ್ಯ ಸರ್ಕಾರವು ಸಿಡಿಸಿ ಮತ್ತು ಖಾಸಗಿ ಕಾಲೇಜುಗಳ ಸಂಸ್ಥೆಗಳಿಗೆ ಸಂಪೂರ್ಣ ಸ್ವಾಯತ್ತತೆ ನೀಡಿದೆ” ಎಂದರು.

ತೀರ್ಪುಗಳ ಉಲ್ಲೇಖದ ಅಗತ್ಯವೇನಿತ್ತು?

ಇದಕ್ಕೆ ಸಿಜೆ ಅವಸ್ಥಿ ಅವರು “ಸರ್ಕಾರದ ಆದೇಶದ ಹಿಂದಿನ ಭಾಗಕ್ಕೆ ಬನ್ನಿ. ಇಲ್ಲಿ ನೀವು ಹಿಜಾಬ್‌ಗೆ ಸಂಬಂಧಿಸಿದಂತೆ ಈ ತೀರ್ಪುಗಳನ್ನು ಪರಿಗಣಿಸಿದ್ದೀರಿ. ಇದರ ಅಗತ್ಯವೇನಿತ್ತು?” ಎಂದರು. ಇದಕ್ಕೆ ನಾವದಗಿ ಅವರು “ರಾಜ್ಯ ಸರ್ಕಾರವು ಪ್ರಜ್ಞಾಪೂರ್ವಕವಾಗಿ ಈ ವಿಚಾರದಿಂದ ದೂರವಿದೆ” ಎಂದರು. ಇದಕ್ಕೆ ಸಿಜೆ ಅವರು “ಹಿಜಾಬ್‌ ಧರಿಸಲು ಸಿಡಿಸಿ ಅನುಮತಿಸಿದರೆ ನಿಮ್ಮ ಆಕ್ಷೇಪ ಇಲ್ಲವೇ” ಎಂದು ಪ್ರಶ್ನಿಸಿತು. ಇದಕ್ಕೆ ನಾವದಗಿ ಅವರು “ಸೆಕ್ಷನ್‌ 131ರ ಅಡಿ ರಾಜ್ಯ ಸರ್ಕಾರಕ್ಕೆ ಪರಿಶೀಲನೆ ಅಧಿಕಾರವಿದೆ. ಭವಿಷ್ಯದಲ್ಲಿ ಕೆಲವು ವಿದ್ಯಾರ್ಥಿಗಳು ಅಥವಾ ಪ್ರಾಧಿಕಾರ ಅಹವಾಲು ಇರಿಸಿ ಅದು ಇನ್ನೊಂದು ರೂಪ ಪಡೆದರೆ ನಾವು ಆಗ ನಿರ್ಧಾರ ಕೈಗೊಳ್ಳಬಹುದು ಅಥವಾ ಕೈಗೊಳ್ಳದೇ ಇರಬಹುದು” ಎಂದರು.

ಸರ್ಕಾರದ ಆದೇಶ ಅಪಕ್ವ ಎನಿಸುವುದಿಲ್ಲವೇ?

ಆಗ ಸಿಜೆ ಅವಸ್ಥಿ ಅವರು “ಸರ್ಕಾರದ ಆದೇಶ ಅಪಕ್ವ ಎನಿಸುವುದಿಲ್ಲವೇ? ಒಂದು ಕಡೆ ಉನ್ನತ ಮಟ್ಟದ ಸಮಿತಿ ರಚಿಸಲಾಗುವುದು ಎನ್ನುತ್ತೀರಿ. ಮತ್ತೊಂದು ಕಡೆ ನೀವು ಈ ರೀತಿಯ ಸರ್ಕಾರದ ಆದೇಶ ಹೊರಡಿಸುತ್ತೀರಿ” ಎಂದು ಪ್ರಶ್ನಿಸಿದರು.

ಆಗ ನಾವದಗಿ ಅವರು “ಸರ್ಕಾರವು ಅಗತ್ಯತೆಗಳನ್ನು ಪರಿಗಣಿಸಿ, ಸೆಕ್ಷನ್ 133 (ಕರ್ನಾಟಕ ಶಿಕ್ಷಣ ಕಾಯಿದೆ) ಅಡಿಯಲ್ಲಿ ಈ ಆದೇಶಗಳನ್ನು ಹೊರಡಿಸಿದೆ. ಅಸಾಮಾನ್ಯ ಸನ್ನಿವೇಶಗಳು ನಿರ್ಮಾಣವಾಗಿವೆ” ಎಂದರು.

ಕರ್ನಾಟಕ ಶಿಕ್ಷಣ ಕಾಯಿದೆಯ ನಿಬಂಧನೆಗಳನ್ನು ಉಲ್ಲೇಖಿಸಿದ ಎಜಿ ನಾವದಗಿ ಅವರು ಸೆಕ್ಷನ್‌ 133 ಅಡಿ ಯಾವುದೇ ಶಿಕ್ಷಣ ಸಂಸ್ಥೆಗೆ ನಿರ್ದೇಶನ ನೀಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ ಎಂದರು. “ಸರ್ಕಾರ ನಿಯಮ ಮೀರಿದೆ ಎಂದು ಯಾವುದೇ ಕಾಲೇಜು ನ್ಯಾಯಾಲಯಕ್ಕೆ ಬಂದಿಲ್ಲ. ವಿದ್ಯಾರ್ಥಿಗಳು ಮಾತ್ರ ಸರ್ಕಾರವು ನಿಯಮ ಮೀರಿದೆ ಎಂದು ನ್ಯಾಯಾಲಯದ ಕದ ತಟ್ಟಿದ್ದಾರೆ. ಈ ಒಂದು ಆಧಾರದಲ್ಲಿಯೇ ಅರ್ಜಿದಾರರ ವಾದವು ವಿಫಲವಾಗುತ್ತದೆ” ಎಂದು ಸರ್ಕಾರವನ್ನು ಸಮರ್ಥಿಸುವ ಪ್ರಯತ್ನ ಮಾಡಿದರು.

“ಸಿಡಿಸಿ ಸಂಯೋಜನೆ ಬಗ್ಗೆ ಮಾತನಾಡಿದ ನಾವದಗಿ ಅವರು ಇದು ಪ್ರಾತಿನಿಧಿಕ ಘಟಕವಾಗಿದ್ದು, ಇದರಲ್ಲಿ ಶಾಸಕರು ಸದಸ್ಯರಾಗಬಾರದು ಎಂಬ ಯಾವುದೇ ನಿರ್ಬಂಧ ಇಲ್ಲ” ಎಂದರು. ಇದನ್ನು ಆಲಿಸಿದ ಪೀಠವು ವಿಚಾರಣೆಯನ್ನು ಸೋಮವಾರ ಮಧ್ಯಾಹ್ನ 2.30ಕ್ಕೆ ಮುಂದೂಡಿದೆ.

ಲೈವ್‌ ಸ್ಟ್ರೀಮಿಂಗ್‌ ನಿಲ್ಲಿಸಿ

ವಿಚಾರಣೆ ಆರಂಭವಾಗುತ್ತಿದ್ದಂತೆ ಅರ್ಜಿದಾರರ ಪರ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ಅವರು “ವಿದ್ಯಾರ್ಥಿಗಳಿಗೆ ಅನಗತ್ಯ ಸಮಸ್ಯೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿಚಾರಣೆಯ ಲೈವ್‌ ಸ್ಟ್ರೀಮಿಂಗ್‌ ಅನ್ನು ಅಮಾನತು ಮಾಡಬೇಕು” ಎಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿಗೆ ಅವರಿಗೆ ಮನವಿ ಮಾಡಿದರು. ಆಗ ಸಿಜೆ “ಪ್ರತಿವಾದಿಗಳ ನಿಲುವನ್ನು ಜನರು ಕೇಳಲಿ ಬಿಡಿ” ಎಂದರು.

Also Read
[ಹಿಜಾಬ್‌ ವಿಚಾರಣೆ] ಲತಾ ಹಾಡು, ಮಾನಸಿಕ ಆರೋಗ್ಯದ ಪಾಡು, ಪಿಐಎಲ್‌ ಸಲ್ಲಿಕೆಯಲ್ಲಿನ ಲೋಪ, ಬೇಸರಿಸಿದ ಪೀಠ

ಎಫ್‌ಐಆರ್‌ ದಾಖಲಿಸಿ

ವಕೀಲ ಸಿರಾಜುದ್ದೀನ್‌ ಅಹ್ಮದ್‌ ಅವರು ಮಹಿಳೆಯರು ಹಿಜಾಬ್‌ ಧರಿಸದಂತೆ ಕೆಲವು ಸಮಾಜಘಾತುಕ ಶಕ್ತಿಗಳು ನಿರ್ಬಂಧ ವಿಧಿಸುತ್ತಿವೆ ಎಂದು ಪೀಠದ ಗಮನಸೆಳೆದರು. ಇದಕ್ಕೆ ಸಿಜೆ “ಅಂಥವರ ವಿರುದ್ಧ ನೀವು ಎಫ್‌ಐಆರ್‌ ದಾಖಲಿಸಬೇಕು” ಎಂದರು.

ಹಿಂದೆ ಹಿಜಾಬ್‌ ಧರಿಸಿ ಶಾಲೆಗೆ ತೆರಳು ಅವಕಾಶ ಮಾಡಿಕೊಟ್ಟಿದ್ದ ಶಾಲೆಗಳು ಈಗ ಹಿಜಾಬ್‌ ಧರಿಸಿದ ಮಕ್ಕಳನ್ನು ಶಾಲೆಗೆ ಬಿಡುತ್ತಿಲ್ಲ. “ನ್ಯಾಯಾಲಯದ ಆದೇಶದ ಬಳಿಕ ಎಲ್ಲಾ ಕಾಲೇಜುಗಳು ಹಿಜಾಬ್‌ಗೆ ಅನುಮತಿಸುತ್ತಿಲ್ಲ. ಹಿಂದೆ ಅನುಮತಿ ಕೊಟ್ಟಿದ್ದವರೂ ಈಗ ಬಿಡುತ್ತಿಲ್ಲ. ನಿಮ್ಮ ಆದೇಶವನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಂಡಿಲ್ಲ” ಎಂದು ಅಹ್ಮದ್‌ ನ್ಯಾಯಾಲಯದ ಗಮನಕ್ಕೆ ತಂದರು. ಮನವಿಯಲ್ಲಿ ಕೆಲವು ದೋಷಗಳಿವೆ. ಅವುಗಳನ್ನು ಸರಿಪಡಿಸಿ ಹೊಸ ಮನವಿ ಸಲ್ಲಿಸಿ. ಬಳಿಕ ನಿಮ್ಮ ವಾದ ಆಲಿಸುತ್ತೇವೆ ಎಂದಿತು.

Related Stories

No stories found.
Kannada Bar & Bench
kannada.barandbench.com