Rahul Gandhi, Allahabad High Court (Lucknow)  facebook
ಸುದ್ದಿಗಳು

ರಾಹುಲ್ ಗಾಂಧಿ ಆಯ್ಕೆ ಪ್ರಶ್ನಿಸಿ ಅಲಾಹಾಬಾದ್ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ಹಿಂಪಡೆದ ಮನವಿದಾರ

Bar & Bench

ಲೋಕಸಭೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಚುನಾಯಿತರಾಗಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಪರಿಗಣಿಸಲು ಅಲಹಾಬಾದ್ ಹೈಕೋರ್ಟ್ ಸೋಮವಾರ ನಿರಾಕರಿಸಿದೆ [ಎಸ್ ವಿಘ್ನೇಶ್ ಶಿಶಿರ್ ಮತ್ತು ರಾಹುಲ್ ಗಾಂಧಿ ಇನ್ನಿತರರ ನಡುವಣ ಪ್ರಕರಣ].

ಅರ್ಜಿದಾರರು ಮನವಿ ಹಿಂಪಡೆಯಲು ಅವಕಾಶ ನೀಡಿದ ನ್ಯಾಯಮೂರ್ತಿಗಳಾದ ರಂಜನ್ ರಾಯ್ ಮತ್ತು ಓಂ ಪ್ರಕಾಶ್ ಶುಕ್ಲಾ ಅವರಿದ್ದ ಪೀಠ ರಾಹುಲ್ ಅವರು ಭಾರತೀಯ ಪೌರತ್ವ ಹೊಂದಿಲ್ಲ ಎಂದು ಮನವಿದಾರ ವಾದಿಸಿರುವುದರಿಂದ  ಪೌರತ್ವ ಕಾಯಿದೆಯಡಿ ಪರಿಹಾರ ಪಡೆಯಲು ಅನುಮತಿಸಿತು. ಅರ್ಜಿಯ ಅರ್ಹತೆಯ ಮೇಲೆ ತೀರ್ಪು ನೀಡಿಲ್ಲ ಎಂದು ನ್ಯಾಯಾಲಯ ಇದೇ ವೇಳೆ ಸ್ಪಷ್ಟಪಡಿಸಿದೆ.

ಈ ಹಂತದಲ್ಲಿ ಪ್ರಕರಣದ ಅರ್ಹತೆಗಳ ಕುರಿತು ತೀರ್ಪು ನೀಡಿಲ್ಲ ಎಂದು ತಿಳಿಸುವಂತೆ ಖುದ್ದು ಹಾಜರಿದ್ದ ಕರ್ನಾಟಕ ಮೂಲದ ಅರ್ಜಿದಾರ ವಿಘ್ನೇಶ್ ಶಿಶಿರ್ ಕೋರಿದ್ದಾರೆ. ಪ್ರಕರಣದ ಅರ್ಹತೆಯನ್ನು ನಿರ್ಣಯಿಸಿಲ್ಲ ಎಂಬುದು ನಮ್ಮ ಆದೇಶದಿಂದಲೇ ಸ್ಪಷ್ಟವಾಗಿದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ವಿವರಿಸಿದೆ.

ರಾಹುಲ್‌ ಗಾಂಧಿ ಅವರು ಬ್ರಿಟನ್‌ ಪ್ರಜೆಯಾಗಿದ್ದು, ಅವರು ಭಾರತದ ಪ್ರಜೆಯಾಗಿಲ್ಲ. ಹೀಗಾಗಿ ಸಂಸತ್‌ ಸದಸ್ಯತ್ವದಿಂದ ಅನರ್ಹಗೊಳಿಸಬೇಕು. ರಾಯಬರೇಲಿ ಕ್ಷೇತ್ರದಲ್ಲಿ ಕಾನೂನಿನ ಯಾವ ಅಧಿಕಾರದಡಿ ರಾಹುಲ್‌ ಸಂಸತ್‌ ಸದಸ್ಯರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ವಿವರಿಸಲು ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

ತಮ್ಮ ವಾದಕ್ಕೆ ಪೂರಕವಾಗಿ ಅರ್ಜಿದಾರ “ರಾಹುಲ್‌ ಗಾಂಧಿ ಅವರು 2003 ಮತ್ತು 2009ರಲ್ಲಿ ಮೆಸರ್ಸ್‌ ಬ್ಯಾಕ್‌ಡಾಪ್ಸ್‌ ಲಿಮಿಟೆಡ್‌ನ ನಿರ್ದೇಶಕ ಎಂದು ಬ್ರಿಟನ್‌ ಮೂಲದ ಕಂಪೆನಿ ಸಲ್ಲಿಸಿದ್ದ ದಾಖಲೆಗಳನ್ನು ಉಲ್ಲೇಖಿಸಿ, ರಾಹುಲ್‌ ವಿದೇಶಿ ಪ್ರಜೆ ಎಂದು ಹೇಳಲಾಗಿದೆ. 2006ರಲ್ಲಿ ಈ ಕಂಪೆನಿ ಸಲ್ಲಿಸಿದ ದಾಖಲೆಗಳಲ್ಲಿ ರಾಹುಲ್‌ ಗಾಂಧಿ ಬ್ರಿಟನ್‌ ಪ್ರಜೆ ಎಂದು ಹೇಳಲಾಗಿದೆ” ಎಂದಿದ್ದರು.

ಅಲ್ಲದೆ, ಸೂರತ್‌ನ ವಿಚಾರಣಾಧೀನ ನ್ಯಾಯಾಲಯವು ಮಾನಹಾನಿ ಪ್ರಕರಣದಲ್ಲಿ ರಾಹುಲ್‌ ಗಾಂಧಿ ಅವರನ್ನು ಸಂಸತ್‌ ಸದಸ್ಯತ್ವದಿಂದ ಅನರ್ಹಗೊಳಿಸಿ, ಅವರಿಗೆ ಶಿಕ್ಷೆ ವಿಧಿಸಿರುವುದರಿಂದ ಅವರು ರಾಯಬರೇಲಿ ಸಂಸತ್‌ ಸದಸ್ಯರಾಗಿ ಮುಂದುವರಿಯಾಗಲಾಗದು ಎಂದೂ ಅರ್ಜಿಯಲ್ಲಿ ವಾದಿಸಲಾಗಿತ್ತು.