ಸುದ್ದಿಗಳು

ವಿಮಾನದಲ್ಲಿ ಕಿರ್ಪಾನ್ ಕೊಂಡೊಯ್ಯಲು ಸಿಖ್ಖರಿಗೆ ಅವಕಾಶ: ಡಿಜಿಸಿಎ ನಿರ್ಧಾರ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ

ಈ ಹಿಂದೆಯೂ ವಿಮಾನ ಅಪಹರಣಕ್ಕಾಗಿ ಕಿರ್ಪಾನ್ ಬಳಸಿದ ಉದಾಹರಣೆಗಳಿದ್ದು ಸರ್ಕಾರದ ನಿರ್ಧಾರ ಗಂಭೀರ ಭದ್ರತಾ ಅಪಾಯ ಉಂಟುಮಾಡುತ್ತದೆ ಎಂದು ಪಿಐಎಲ್ ವಾದಿಸಿದೆ.

Bar & Bench

ವಿಮಾನದಲ್ಲಿ ಕಿರ್ಪಾನ್‌ ಕೊಂಡೊಯ್ಯಲು ಸಿಖ್ಖರಿಗೆ ಅವಕಾಶ ನೀಡಿದ ಡಿಜಿಸಿಎ ನಿರ್ಧಾರ ಪ್ರಶ್ನಿಸಿರುವ ಅರ್ಜಿಗೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ಸಚಿವಾಲಯ (ಎಂಸಿಎ), ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್‌ಎ), ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಮತ್ತು ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ ಮಹಾ ನಿರ್ದೇಶಕರಿಗೆ ದೆಹಲಿ ಹೈಕೋರ್ಟ್‌ ಗುರುವಾರ ನೋಟಿಸ್‌ ನೀಡಿದೆ [ಹರ್ಷ್ ವಿಭೋರೆ ಸಿಂಘಾಲ್ ವಿರುದ್ಧ ಭಾರತದ ಸಂಪುಟ ಕಾರ್ಯದರ್ಶಿ ಮತ್ತಿತರರ ನಡುವಣ ಪ್ರಕರಣ].

ಅಧಿಕಾರಿಗಳು ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸಲು ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೊಣಿಯಂ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ ಎಂಟು ವಾರಗಳ ಕಾಲಾವಕಾಶ ನೀಡಿತು. ಪ್ರಕರಣವನ್ನು ನವೆಂಬರ್ 15ಕ್ಕೆ ನಿಗದಿಪಡಿಸಿತು. ಆದರೂ ಅಧಿಸೂಚನೆ ತಡೆಹಿಡಿಯುವ ಯಾವುದೇ ಮಧ್ಯಂತರ ಆದೇಶ ನೀಡಲು ನ್ಯಾಯಾಲಯ ನಿರಾಕರಿಸಿತು. ಸಂಪುಟ ಕಾರ್ಯದರ್ಶಿಯನ್ನು ಪಕ್ಷಕಾರರ ಪಟ್ಟಿಯಿಂದ ತೆಗೆದುಹಾಕುವಂತೆ ಅರ್ಜಿದಾರರಿಗೆ ನ್ಯಾಯಾಲಯ ತಿಳಿಸಿತು.

ಸಿಖ್ ಸಮುದಾಯದ ಪ್ರಯಾಣಿಕರು ನಾಗರಿಕ ವಿಮಾನಗಳಲ್ಲಿ ಕಿರ್ಪಾನ್‌ (ಸಾಂಪ್ರದಾಯಿಕ ಬಾಕುವಿನಂತಹ ಅಸ್ತ್ರ) ಕೊಂಡಯ್ಯಲು ಅನುಮತಿ ನೀಡಿದ್ದ ಮಾರ್ಚ್ 4, 2022ರ ಡಿಜಿಸಿಎ ಆದೇಶ ಪ್ರಶ್ನಿಸಿ ಅರ್ಜಿದಾರರೂ ಆಗಿರುವ ವಕೀಲ ಹರ್ಷ್ ವಿಭೋರ್ ಸಿಂಘಾಲ್ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ಸಲ್ಲಿಸಿದ್ದಾರೆ.

ಕತ್ತಿಯ ಅಲಗು ಆರು ಇಂಚು ಒಟ್ಟು ಉದ್ದ ಒಂಬತ್ತು ಇಂಚು ಮೀರದೇ ಇರುವ ಕಿರ್ಪಾನ್‌ ಕೊಂಡೊಯ್ಯಲು ಅನುಮತಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು. ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ಸಿಖ್‌ ಸಮುದಾಯದ ಸಿಬ್ಬಂದಿ ಕೂಡ ಕಿರ್ಪಾನ್‌ ಬಳಸಬಹುದು ಎಂದು ನಂತರ ಹೊರಡಿಸಿದ್ದ ಆದೇಶ ತಿಳಿಸಿತ್ತು.

ಕಿರ್ಪಾನ್‌ಗಳು ಸುರಕ್ಷಿತ ವಾಯುಯಾನಕ್ಕೆ ಅಪಾಯಕಾರಿ. ಈ ಹಿಂದೆಯೂ ವಿಮಾನ ಅಪಹರಣಕ್ಕಾಗಿ ಕಿರ್ಪಾನ್‌ ಬಳಸಿದ ಉದಾಹರಣೆಗಳಿದ್ದು ಸರ್ಕಾರದ ನಿರ್ಧಾರ ಗಂಭೀರ ಭದ್ರತಾ ಅಪಾಯ ಉಂಟುಮಾಡುತ್ತದೆ. 1981 ಮತ್ತು 1984ರಲ್ಲಿ ಕಿರ್ಪಾನ್‌ ಬಳಸಿ ವಿಮಾನ ಅಪಹರಿಸಲಾಗಿತ್ತು. ಧರ್ಮದ ಕಾರಣಕ್ಕೆ ಅವು ಸುರಕ್ಷಿತ ಎನ್ನುವುದಾದರೆ ಸೂಜಿ, ತೆಂಗಿನಕಾಯಿ, ಸ್ಕ್ರೂ ಡ್ರೈವರ್‌, ಪೆನ್‌ಡ್ರೈವ್‌ಗಳನ್ನೇಕೆ ನಿಷೇಧಿಸಲಾಗಿದೆ ಎಂದು ಅರ್ಜಿ ಪ್ರಶ್ನಿಸಿದೆ.

ಭಾರತೀಯ ನಾಗರಿಕರಿಗೆ ಮಾತ್ರ ವಿನಾಯಿತಿ ನೀಡಿಲ್ಲ. ಅಧಿಸೂಚನೆ ಭಾರತೀಯ ಸಿಖ್ಖರಿಗೆ ಅನ್ವಯವೋ ಇತರ ರಾಷ್ಟ್ರಗಳ ಸಿಖ್‌ ಪ್ರಯಾಣಿಕರಿಗೂ ಅನ್ವಯವೋ ಎಂಬುದನ್ನು ತಿಳಿಸುವುದಿಲ್ಲ ಎಂದು ಅರ್ಜಿ ಆಕ್ಷೇಪಿಸಿದೆ.