Udhayanidhi Stalin, Madras High CourtUdhayanidhi Stalin (Facebook) 
ಸುದ್ದಿಗಳು

ಅಧಿಕೃತ ಕಾರ್ಯಕ್ರಮಗಳಲ್ಲಿ ಜೀನ್ಸ್, ಟಿ-ಶರ್ಟ್ ಧರಿಸದಂತೆ ಉದಯನಿಧಿ ಸ್ಟಾಲಿನ್ ವಿರುದ್ಧ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ

ಅಧಿಕೃತ ಕರ್ತವ್ಯ ನಿರ್ವಹಿಸುವಾಗ ಸಾರ್ವಜನಿಕ ಹುದ್ದೆಯಲ್ಲಿರುವವರಿಗೆ ಔಪಚಾರಿಕ ವಸ್ತ್ರ ಸಂಹಿತೆ ಪಾಲಿಸುವಂತೆ ಸೂಚಿಸಿ ತಮಿಳುನಾಡು ಸರ್ಕಾರ 2019ರಲ್ಲಿ ಹೊರಡಿಸಿದ್ದ ಆದೇಶವನ್ನು ಉದಯನಿಧಿ ಉಲ್ಲಂಘಿಸಿದ್ದಾರೆ ಎಂಬುದು ಅರ್ಜಿದಾರರ ವಾದ.

Bar & Bench

ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ಸಾರ್ವಜನಿಕ ಕಾರ್ಯಕ್ರಮಗಳಿಗೆ ಹಾಜರಾಗುವಾಗ ಹಾಗೂ ಅಧಿಕೃತ ಕರ್ತವ್ಯ ನಿರ್ವಹಿಸುವಾಗ ಔಪಚಾರಿಕ ವಸ್ತ್ರ ಸಂಹಿತೆ ಪಾಲಿಸುವಂತೆ ನಿರ್ದೇಶನ ನೀಡಲು ಕೋರಿ ಚೆನ್ನೈ ಮೂಲದ ವಕೀಲರೊಬ್ಬರು ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಅಧಿಕೃತ ಕರ್ತವ್ಯ ನಿರ್ವಹಿಸುವಾಗ ಸಾರ್ವಜನಿಕ ಹುದ್ದೆಯಲ್ಲಿರುವವರಿಗೆ ಔಪಚಾರಿಕ ವಸ್ತ್ರ ಸಂಹಿತೆ ಪಾಲಿಸುವಂತೆ ಸೂಚಿಸಿ ತಮಿಳುನಾಡು ಸರ್ಕಾರ  2019ರಲ್ಲಿ ಹೊರಡಿಸಿದ್ದ ಆದೇಶವನ್ನು ಉದಯನಿಧಿ ಅವರು ಅಧಿಕೃತ ಕಾರ್ಯಕ್ರಮಗಳಲ್ಲಿ ಟಿ ಶರ್ಟ್, ಜೀನ್ಸ್ ಹಾಗೂ ಕ್ಯಾಶುವಲ್ ಪಾದರಕ್ಷೆ ರೀತಿಯ "ಅನೌಪಚಾರಿಕ ಉಡುಗೆ" ಧರಿಸುವ ಮೂಲಕ ಉಲ್ಲಂಘಿಸಿದ್ದಾರೆ ಎಂದು ಅರ್ಜಿ ದೂರಿದೆ.

ಸರ್ಕಾರ ಖುದ್ದಾಗಿ ಎಲ್ಲಾ ಸಾರ್ವಜನಿಕ ಹುದ್ದೆಯಲ್ಲಿರುವವರಿಗೆ ಹೊರಡಿಸಿದ 2019ರ ಆದೇಶವನ್ನು ಸರ್ಕಾರದ ಉನ್ನತ ಸ್ಥಾನದಲ್ಲಿರುವ ಉದಯನಿಧಿ ಅವರೇ ಉಲ್ಲಂಘಿಸಿದ್ದಾರೆ ಎಂದು ವಕೀಲ ಎಂ ಸತ್ಯ ಕುಮಾರ್ ಸಲ್ಲಿಸಿದ್ದ ಅರ್ಜಿ ಹೇಳಿದೆ.

ಸರ್ಕಾರಿ ಸಭೆಗಳಲ್ಲಿ ಸಾರ್ವಜನಿಕ ಹುದ್ದೆಯಲ್ಲಿರುವವರು ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷದ ಚಿಹ್ನೆ ಪ್ರದರ್ಶಿಸುವುದನ್ನು ನಿಷೇಧಿಸಲಾಗಿದ್ದರೂ ಅಧಿಕೃತ ಕಾರ್ಯಕ್ರಮಗಳಲ್ಲಿ ಉದಯ ನಿಧಿ ಅವರು ಧರಿಸುತ್ತಿದ್ದ ಬಹುತೇಕ ಟಿ ಶರ್ಟ್‌ಗಳಲ್ಲಿ ಡಿಎಂಕೆ ಚಿಹ್ನೆ ಇರುತ್ತಿತ್ತು ಎಂದೂ ಅರ್ಜಿ ಆರೋಪಿಸಿದೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.