ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಮತ್ತು ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ವಿರುದ್ಧದ ಅವ್ಯವಹಾರಗಳ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಅಥವಾ ಇನ್ನಾವುದೇ ಸ್ವತಂತ್ರ ಸಂಸ್ಥೆ ತನಿಖೆ ನಡೆಸಬೇಕು ಎಂದು ಕೋರಿ ಮುಂಬೈ ಮೂಲದ ವಕೀಲೆ ಡಾ ಜೈಶ್ರೀ ಲಕ್ಷ್ಮಣರಾವ್ ಪಾಟೀಲ್ ಅವರು ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಸಾಮಾನ್ಯ ನಾಗರಿಕರು ಮತ್ತು ಉದ್ಯಮಿಗಳಿಂದ ಹಣ ಸುಲಿಗೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡುವ ಮೂಲಕ ದೇಶಮುಖ್ ಅವರು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದಿರುವುದರಿಂದ ದೇಶಮುಖ್, ಗೃಹ ಸಚಿವರ ಸ್ಥಾನದಲ್ಲಿ ಮುಂದುವರೆಯಲು ಅರ್ಹರಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಬರೆದ ಪತ್ರದ ಮೂಲಕ ಆರೋಪಗಳನ್ನು ಸಿಂಗ್ ಅವರು ಬೆಳಕಿಗೆ ತಂದಿದ್ದು ದೇಶಮುಖ್ ಅವರು ಆಗಾಗ್ಗೆ ಪೊಲೀಸ್ ತನಿಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದರು ಮತ್ತು ಅಧಿಕಾರಿಗಳನ್ನು ಪದೇ ಪದೇ ಕರೆಸಿಕೊಂಡು ತನಿಖೆ ನಡೆಸುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸೂಚನೆ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ.
ತಿಂಗಳಿಗೆ 40- 50 ಕೋಟಿ ರೂ. ಹಣ ಸಂಗ್ರಹಿಸುವ ಸಲುವಾಗಿ ಮುಂಬೈನ ಸುಮಾರು 1,750 ಬಾರ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಅದೇ ರೀತಿಯ ಕೇಂದ್ರಗಳಿಂದ ಸುಮಾರು 2-3 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಲು ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಜೆ ಅವರನ್ನು ದೇಶಮುಖ್ ಕೇಳಿಕೊಂಡಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ದೇಶಮುಖ್ ಅವರು ಉನ್ನತ ಪೊಲೀಸ್ ಅಧಿಕಾರಿಯಾಗಿದ್ದು ಸಿಆರ್‌ಪಿಸಿ ಸೆಕ್ಷನ್ 154 ರ ಅಡಿಯಲ್ಲಿ ಅಧಿಕಾರ ಹೊಂದಿದ್ದರೂ ಸಹ ಪ್ರಕರಣದ ಸಂಬಂಧ ಎಫ್‌ಐಆರ್ ದಾಖಲಿಸಿಕೊಳ್ಳಲು ವಿಫಲರಾಗಿದ್ದು ಈ ನಿಷ್ಕ್ರಿಯತೆಗೆ ಕಾರಣ ಏನೆಂಬುದೂ ಕೂಡ ತನಿಖೆಯಿಂದ ಬಹಿರಂಗವಾಗಬೇಕಿದೆ ಎಂದು ಅವರು ಅರ್ಜಿಯಲ್ಲಿ ಕೋರಿದ್ದಾರೆ.
ತಾನು ನೀಡಿದ ದೂರು ಆಧರಿಸಿ ಎಫ್‌ಐಆರ್ ದಾಖಲಿಸಿಕೊಳ್ಳಲು ಮಲಬಾರ್ ಹಿಲ್ ಪೊಲೀಸ್ ಠಾಣೆ ವಿಫಲವಾಗಿದ್ದು ಹೀಗಾಗಿ ತಾವು ಠಾಣೆಗೆ ಸಲ್ಲಿಸಿದ ಲಿಖಿತ ದೂರನ್ನು ಪರಿಗಣಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಬೇಕೆಂದು ಅವರು ಕೋರಿದ್ದಾರೆ. ‘ಬಾರ್ ಅಂಡ್ ಬೆಂಚ್’ ಜೊತೆ ಮಾತನಾಡಿದ ಜೈಶ್ರೀ ಕೂಡಲೇ ತನಿಖೆ ಆರಂಭಿಸದಿದ್ದರೆ ಪ್ರಭಾವಿ ವ್ಯಕ್ತಿಗಳು ಸಾಕ್ಷ್ಯ ನಾಶಮಾಡಲು ಯತ್ನಿಸಬಹುದು. ಅರ್ಜಿಯನ್ನು ತುರ್ತು ವಿಚಾರಣೆಗೆ ಪರಿಗಣಿಸುವಂತೆ ಕೋರಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮತ್ತೊಂದೆಡೆ ಹೇಮಂತ್ ಬಾಬುರಾವ್ ಪಾಟೀಲ್ ಎಂಬುವವರು ಕೂಡ ಹೈಕೋರ್ಟ್‌ಗೆ ಇದೇ ರೀತಿಯ ಅರ್ಜಿ ಸಲ್ಲಿಸಿದ್ದು ನ್ಯಾಯಾಂಗದ ನೇತೃತ್ವದಲ್ಲಿ ಸ್ವತಂತ್ರ ತನಿಖಾ ಸಂಸ್ಥೆ ಪ್ರಕರಣದ ತನಿಖೆ ನಡೆಸಬೇಕು. ಸೆಕ್ಷನ್ 166 ರ ಅಡಿಯಲ್ಲಿ ಸಿಂಗ್, ದೇಶಮುಖ್ ಮತ್ತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಬೇಕು ಎಂದು ವಿನಂತಿಸಿದ್ದಾರೆ.