ಸುದ್ದಿಗಳು

ನಕಲಿ ಜಾತಿ ಪ್ರಮಾಣ ಪತ್ರ ನೀಡಿದ ಆರೋಪ: ಉದ್ಯೋಗದಿಂದ ಸಮೀರ್ ವಾಂಖೆಡೆ ವಜಾಗೊಳಿಸಲು ಬಾಂಬೆ ಹೈಕೋರ್ಟ್‌ಗೆ ಮನವಿ

Bar & Bench

ಭಾರತೀಯ ಕಂದಾಯ ಸೇವೆಗೆ (ಐಆರ್‌ಎಸ್‌) ಎನ್‌ಸಿಬಿ ಅಧಿಕಾರಿ ಸಮೀರ್‌ ವಾಂಖೆಡೆ ಅವರು ಪರಿಶಿಷ್ಟ ಜಾತಿ ಮೀಸಲಾತಿಯಡಿ ನೇಮಕವಾಗಿರುವುದನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. [ಅಶೋಕ್ ಮಹಾದೇವ್ ಕಾಂಬ್ಳೆ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಪರಿಶಿಷ್ಟ ಜಾತಿ ಕೋಟಾದಡಿ ಐಆರ್‌ಎಸ್‌ಗೆ ಸೇರ್ಪಡೆಗೊಳ್ಳುವಾಗ ವಾಂಖೆಡೆ ತಮ್ಮ ನಿಜವಾದ ಜಾತಿ ಮತ್ತು ಧರ್ಮವನ್ನು ಬಹಿರಂಗಪಡಿಸಿಲ್ಲ ಎಂದು ಅರ್ಜಿದಾರ, ಸಾಮಾಜಿಕ ಕಾರ್ಯಕರ್ತ ಅಶೋಕ್ ಮಹಾದೇವ ಕಾಂಬಳೆ ಆರೋಪಿಸಿದ್ದಾರೆ.

ವಾಂಖೆಡೆ ತಾವು ಮುಸ್ಲಿಂ ಎಂಬ ವಿಚಾರವನ್ನು ಮರೆಮಾಚಿ ಜಾತಿ/ಧರ್ಮವನ್ನು ತಪ್ಪಾಗಿ ಉಲ್ಲೇಖಿಸಿ ನಾಗರಿಕ ಸೇವೆಗೆ ಪ್ರವೇಶ ಪಡೆದಿದ್ದಾರೆ ಎಂದು ಅರ್ಜಿದಾರ ಸಾಮಾಜಿಕ ಕಾರ್ಯಕರ್ತ ಅಶೋಕ್ ಮಹಾದೇವ ಕಾಂಬಳೆ ಆರೋಪಿಸಿದ್ದಾರೆ. ವಾಂಖೆಡೆ ಅವರ ತಂದೆ ದಾವೂದ್ ಅಲಿಯಾಸ್‌ ಧ್ಯಾನ್‌ದೇವ್ ವಾಂಖೆಡೆ ಇಸ್ಲಾಂಗೆ ಮತಾಂತರಗೊಂಡ ನಂತರ ಜಹೀದಾ ಬಾನೊ ಅವರನ್ನು ವಿವಾಹವಾಗಿದ್ದು ಸಮೀರ್‌ ಪರಿಶಿಷ್ಟ ಜಾತಿ ಮೀಸಲಾತಿಯ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ವಿವಿಧ ದಾಖಲೆಗಳನ್ನು ಉಲ್ಲೇಖಿಸಿ ಕಾಂಬಳೆ ಹೇಳಿದ್ದಾರೆ.

1993ರಲ್ಲಿ ಧ್ಯಾನದೇವ್ ವಾಂಖೆಡೆ ಅವರ ಹೆಸರನ್ನು ಬದಲಾಯಿಸುತ್ತಿರುವುದಾಗಿ ಘೋಷಣೆ ಮಾಡಲಾಗಿತ್ತು ಆದರೆ ಆ ಘೋಷಣೆಯ ಆಧಾರದ ಮೇಲೆ ವಾಂಖೆಡೆಯ ಧರ್ಮದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹೀಗಾಗಿ ಸಬ್-ರಿಜಿಸ್ಟ್ರಾರ್ ಜನನ ಪ್ರಮಾಣಪತ್ರದಲ್ಲಿ ದಾವೂದ್ ವಾಂಖೆಡೆಯ ಹೆಸರನ್ನು ಧ್ಯಾನ್‌ದೇವ್ ವಾಂಖೆಡೆ ಎಂದು ಉಲ್ಲೇಖಿಸಿದ್ದು ಸಮೀರ್‌ ಎಸ್‌ಸಿ ವಿದ್ಯಾರ್ಥಿ ಕೋಟಾದಡಿ ಕಾಲೇಜು ಪ್ರವೇಶ ಪಡೆಯಲಿಕ್ಕಾಗಿ ಹೀಗೆ ಮಾಡಲಾಗಿದೆ ಎಂದು ಅವರು ದೂರಿದ್ದಾರೆ.

ಸಮೀರ್‌ ಅವರು ನಿಖಾ ಆಚರಣೆ ಮೂಲಕ ಡಾ. ಶಬಾನಾ ಖುರೇಷಿ ಅವರನ್ನು ವಿವಾಹವಾದರು ಎಂಬ ಅಂಶವನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಒಬ್ಬ ವ್ಯಕ್ತಿ ಮುಸ್ಲಿಂ ಅಲ್ಲದಿದ್ದರೆ, ಅವನು ಮುಸ್ಲಿಂ ಹುಡುಗಿಯನ್ನು ಮದುವೆಯಾಗಲು ಸಾಧ್ಯವಿಲ್ಲ. ಹೀಗಾಗಿ ವಾಂಖೆಡೆ ಅವರನ್ನು ನಾಗರಿಕ ಸೇವೆಯಿಂದ ವಜಾಗೊಳಿಸಬೇಕು ಎಂದು ಅರ್ಜಿದಾರರು ವಾದಿಸಿದ್ದಾರೆ.

ಸಮೀರ್‌ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಜಾತಿ ಪರಿಶೀಲನಾ ಸಮಿತಿಗೆ ಕಾಂಬ್ಳೆ ಲಿಖಿತ ದೂರು ನೀಡಿದ್ದಾರೆ. ತನ್ನ ಧರ್ಮ ಯಾವುದೆಂದು ಬಹಿರಂಗಪಡಿಸದ ಸಮೀರ್‌ ಅವರ ನೇಮಕಾತಿ ಕುರಿತಂತೆ ಪರಿಶೀಲನೆ ನಡೆಸದ ಕೇಂದ್ರ ಲೋಕಸೇವಾ ಆಯೋಗದ ನಿಲುವಿಗೆ ಕೂಡ ಅರ್ಜಿ ಅಸಮಾಧಾನ ವ್ಯಕ್ತಪಡಿಸಿದೆ.

ಪ್ರತಿವಾದಿಗಳ ಕಚೇರಿಯಿಂದ ಸಂಬಂಧಪಟ್ಟ ದಾಖಲೆ ಮತ್ತು ನಡಾವಳಿಗಳನ್ನು ಪಡೆಯಬೇಕು, ಸಮೀರ್‌ ಜಾತಿ ಖಚಿತಪಡಿಸಿಕೊಳ್ಳುವಂತೆ ಜಾತಿ ಪ್ರಮಾಣಪತ್ರ ಪರಿಶೀಲನಾ ಸಮಿತಿಗೆ ನಿರ್ದೇಶಿಸಬೇಕು. ಅವರ ನೇಮಕಾತಿ ರದ್ದುಪಡಿಸಿ ತಪ್ಪು ಮಾಹಿತಿ ನೀಡಿದ ಅವರ ವಿರುದ್ಧ ಕ್ರಿಮಿನಲ್‌ ಕ್ರಮಕ್ಕೆ ನಿರ್ದೇಶಿಸಬೇಕು. ಜಾತಿ ಮತ್ತು ಧರ್ಮದ ಪರಿಶೀಲನೆ ನಡೆದ ಬಳಿಕ ಅವರನ್ನು ನಾಗರಿಕ ಸೇವೆಯಿಂದ ವಜಾಗೊಳಿಸಬೇಕು ಎಂದು ಅರ್ಜಿ ವಿನಂತಿಸಿದೆ.