ಸುದ್ದಿಗಳು

ಸಿಬಿಐ ನಿರ್ದೇಶಕ ಹುದ್ದೆಯಿಂದ ಎಸ್ ಕೆ ಜೈಸ್ವಾಲ್‌ ವಜಾ ಕೋರಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ

ಜೈಸ್ವಾಲ್ ಅವರ ವಿಶ್ವಾಸಾರ್ಹತೆ ಅನುಮಾನಾಸ್ಪದವಾಗಿರುವ ಹಿನ್ನೆಲೆಯಲ್ಲಿ ಸಿಬಿಐ ಮುಖ್ಯಸ್ಥರಾಗಿ ಮುಂದುವರೆಯುವುದನ್ನು ಅರ್ಜಿದಾರರಾದ ಮಹಾರಾಷ್ಟ್ರದ ನಿವೃತ್ತ ಸಹಾಯಕ ಪೊಲೀಸ್ ಕಮಿಷನರ್ ರಾಜೇಂದ್ರಕುಮಾರ್ ತ್ರಿವೇದಿ ಪ್ರಶ್ನಿಸಿದ್ದಾರೆ.

Bar & Bench

ಸಿಬಿಐ ನಿರ್ದೇಶಕರಾಗಿ ಸುಬೋಧ್ ಕುಮಾರ್ ಜೈಸ್ವಾಲ್ ಅವರನ್ನು ಮುಂದುವರೆಸಿರುವುದನ್ನು ರದ್ದುಗೊಳಿಸುವಂತೆ ಕೋರಿ ಬಾಂಬೆ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಲಾಗಿದೆ. ಜೈಸ್ವಾಲ್‌ ಅವರಿಗೆ ಭ್ರಷ್ಟಾಚಾರ ನಿಗ್ರಹ ಪ್ರಕರಣಗಳ ತನಿಖೆಯಲ್ಲಿ ಅನುಭವವಿಲ್ಲ ಮತ್ತು ಅವರ ವಿಶ್ವಾಸಾರ್ಹತೆ ಅನುಮಾನಾಸ್ಪದವಾಗಿದೆ ಎಂಬ ಕಾರಣಕ್ಕಾಗಿ ಸಿಬಿಐ ಮುಖ್ಯಸ್ಥರಾಗಿ ಅವರು ಮುಂದುಯವರೆಯದಂತೆ ಮಹಾರಾಷ್ಟ್ರದ ನಿವೃತ್ತ ಸಹಾಯಕ ಪೊಲೀಸ್ ಕಮಿಷನರ್ ಆಗಿರುವ ಅರ್ಜಿದಾರ ರಾಜೇಂದ್ರಕುಮಾರ್ ತ್ರಿವೇದಿ ಮನವಿ ಸಲ್ಲಿಸಿದ್ದಾರೆ.

ಕೇಂದ್ರೀಯ ವಿಚಕ್ಷಣಾ ಆಯೋಗ (ಸಿವಿಸಿ) ಕಾಯಿದೆಯ ನಿಬಂಧನೆಗಳ ಪ್ರಕಾರ ನಿರ್ದೇಶಕರಾಗಿ ನೇಮಕಗೊಳ್ಳುವ ವ್ಯಕ್ತಿ, ನಿಸ್ಪೃಹ ವಿಶ್ವಾಸಾರ್ಹತೆಯೊಂದಿಗೆ ಭ್ರಷ್ಟಾಚಾರ ವಿರೋಧಿ ಪ್ರಕರಣಗಳ ತನಿಖೆಯಲ್ಲಿ ಅನುಭವ ಹೊಂದಿರುವ ಹಿರಿಯ-ಐಪಿಎಸ್ ಅಧಿಕಾರಿಯಾಗಿರಬೇಕು ಎಂದು ಕಾನೂನು ಸಂಸ್ಥೆ ʼತಳೇಕರ್ ಅಂಡ್‌ ಅಸೋಸಿಯೇಟ್ಸ್ʼ ಮೂಲಕ ಸಲ್ಲಿಸಿದ ಮನವಿಯಲ್ಲಿ ತ್ರಿವೇದಿ ಅವರು ಪ್ರಸ್ತಾಪಿಸಿದ್ದಾರೆ. ಜೈಸ್ವಾಲ್‌ ನೇಮಕ ಸಿವಿಸಿ ಕಾಯಿದೆಯ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.

ಹಿರಿಯ ಐಪಿಎಸ್ ಅಧಿಕಾರಿ ಪರಮ್ ಬೀರ್ ಸಿಂಗ್ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆನ್ನಲಾದ ನಕಲಿ ಛಾಪಾ ಕಾಗದ ಹಗರಣದ ತನಿಖೆಗಾಗಿ ಜೈಸ್ವಾಲ್‌ ಮುಖ್ಯಸ್ಥರಾಗಿದ್ದ ವಿಶೇಷ ತನಿಖಾ ಸಮಿತಿಯ ವಿರುದ್ಧ ಆರೋಪಗಳು ಕೇಳಿ ಬಂದಿದ್ದವು ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ. ಪ್ರಸ್ತುತ ಅವರು ಮುಖ್ಯಸ್ಥರಾಗಿರುವ ಸಿಬಿಐಗೆ ಪರಮ್‌ ಬೀರ್ ಸಿಂಗ್ ವಿರುದ್ಧದ ಪ್ರಕರಣದ ತನಿಖೆ ವರ್ಗಾಯಿಸಿರುವುದಕ್ಕೆ ಅರ್ಜಿದಾರರು ತಗಾದೆ ಎತ್ತಿದ್ದಾರೆ.

ಬಹುಕೋಟಿ ರೂಪಾಯಿ ಛಾಪಾಕಾಗದ ಹಗರಣದ ರೂವಾರಿ ತೆಲಗಿಗೆ ಸಂಬಂಧಿಸಿದ ಜಾಮೀನು ಆದೇಶದಲ್ಲಿ ಸುಪ್ರೀಂಕೋರ್ಟ್‌ ಹಗರಣದಲ್ಲಿ ಜೈಸ್ವಾಲ್‌ ಪಾತ್ರ ಇರುವುದನ್ನು ಗಮನಿಸಿದೆ. ಆದರೆ ನಿರ್ದೇಶಕರ ನೇಮಕ ಸಮಿತಿಗೆ ಸುಪ್ರೀಂಕೋರ್ಟ್‌ನ ಈ ಅವಲೋಕನವನ್ನು ತಿಳಿಸಿರಲಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಜೈಸ್ವಾಲ್‌ ನೇಮಕಾತಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಬೇಕು. ಅವರು ಯಾವ ಅಧಿಕಾರದ ಅಡಿಯಲ್ಲಿ ಸಿಬಿಐ ನಿರ್ದೇಶಕ ಹುದ್ದೆಯನ್ನು ಹೊಂದಿದ್ದಾರೆ ಎಂಬುದನ್ನು ಸಾಬೀತುಪಡಿಸಲು ʼಕೊ ವಾರೆಂಟೊ ರಿಟ್ʼ ಹೊರಡಿಸಬೇಕು ಹಾಗೂ ಜೈಸ್ವಾಲ್‌ ನೇಮಕ ರದ್ದುಗೊಳಿಸಬೇಕು ಎಂದು ಅರ್ಜಿಯಲ್ಲಿ ವಿನಂತಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಹಾಗೂ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರಿದ್ದ ತ್ರಿಸದಸ್ಯ ಸಮಿತಿಯ ಶಿಫಾರಸನ್ನು ಆಧರಿಸಿ ಸಂಪುಟ ನೇಮಕಾತಿ ಸಮಿತಿ ಜೈಸ್ವಾಲ್‌ ಹೆಸರನ್ನು ಸಿಬಿಐ ನಿರ್ದೇಶಕ ಹುದ್ದೆಗೆ ಅಂತಿಮಗೊಳಿಸಿತ್ತು. ಸಂಸ್ಥೆಯ ಮುಖ್ಯಸ್ಥರಾಗಿ ಅವರು ಎರಡು ವರ್ಷದ ಸೇವಾವಧಿ ಹೊಂದಿದ್ದಾರೆ.