ರಾಷ್ಟ್ರೀಯ ಮಾರುಕಟ್ಟೆ ನಿಯಂತ್ರಕವಾದ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ಅನುಮೋದಿತ ಮಧ್ಯವರ್ತಿಯನ್ನು ಬಾಕಿದಾರ (ಡಿಫಾಲ್ಟರ್) ಎಂದು ಘೋಷಿಸಿದ ನಂತರ, ಎನ್‌ಎಸ್‌ಇಯಲ್ಲಿರುವ ತನ್ನ ಷೇರುಗಳನ್ನು ಹಿಂದಿರುಗಿಸುವಂತೆ ಕೋರಿ ಬಾಂಬೆ ಹೈಕೋರ್ಟ್‌ಗೆ ಇದೇ ಮೊದಲ ಬಾರಿಗೆ ಅರ್ಜಿ ಸಲ್ಲಿಸಲಾಗಿದೆ. [ಪುಷ್ಪಾ ಶಾ ಮತ್ತಿತರರು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಇನ್ನಿತರರ ನಡುವಣ ಪ್ರಕರಣ].
ಎನ್‌ಎಸ್‌ಇ ಪರವಾಗಿ ಬುಧವಾರ ವಾದ ಮಂಡಿಸಿದ ಹಿರಿಯ ವಕೀಲ ವೆಂಕಟೇಶ್ ಧೋಂಡ್, ನ್ಯಾಯಮೂರ್ತಿಗಳಾದ ಎಸ್ ವಿ ಗಂಗಾಪುರವಾಲಾ ಮತ್ತು ಆರ್ ಎನ್ ಲಡ್ಡಾ ಅವರಿದ್ದ ಪೀಠ ನೀಡಿದ ಅರ್ಜಿಗೆ ಪ್ರತಿಕ್ರಿಯಿಸಲು ಸಮಯ ಕೋರಿದರು. ಅರ್ಜಿ ನವೆಂಬರ್ 17, 2022ರಂದು ವಿಚಾರಣೆಗೆ ಬರಲಿದೆ.
ಅರ್ಜಿದಾರರಾದ ಪುಷ್ಪಾ ಶಾ ಮತ್ತು ಅವರ ಮಗಳು ಪೂಜಾ ಶಾ, ಎನ್‌ಎಸ್‌ಇಯ 'ಅನುಮೋದಿತ ಮಧ್ಯವರ್ತಿ'ಯಾದ ಅನುಗ್ರಹ ಸ್ಟಾಕ್ ಬ್ರೋಕಿಂಗ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಸ್ಟಾಕ್ ಬಾರೋಯಿಂಗ್ ಅಂಡ್ ಎಂಡಿಂಗ್ ಯೋಜನೆ (ಎಸ್‌ಎಲ್‌ಬಿಎಂ) ಗ್ರಾಹಕರಾಗಿ ತೊಡಗಿಕೊಂಡಿದ್ದರು. ಅವರು ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ನ ತಮ್ಮ ಷೇರುಗಳನ್ನು ಅನುಗ್ರಹಕ್ಕೆ ಸಾಲವಾಗಿ ನೀಡಿದರು. ಅವರು 2 ತಿಂಗಳ ನಂತರ, ಯೋಜನೆಯಿಂದ ಹೊರಗುಳಿದುದ್ದರಿಂದ ಮಧ್ಯವರ್ತಿ ಅನುಗ್ರಹದೊಂದಿಗೆ ತಮ್ಮ ಒಪ್ಪಂದ ನವೀಕರಿಸಿರಲಿಲ್ಲ.
ನವೆಂಬರ್ 2020ರಲ್ಲಿ, ಅನುಗ್ರಹವನ್ನು ಎನ್‌ಎಸ್‌ಇ ಬಾಕಿದಾರ ಘಟಕವೆಂದು ಘೋಷಿಸಿತು. ಹೀಗಾಗಿ ಷೇರು ಮಾರುಕಟ್ಟೆ ಕಾರ್ಯಗಳಲ್ಲಿ ಭಾಗವಹಿಸುವುದರಿಂದ ತಾವು ದೂರ ಉಳಿದಿದ್ದಾಗಿ ಅರ್ಜಿಯಲ್ಲಿ ತಿಳಿಸಲಾಗಿದೆ.
ಅಂತಹ ಪ್ರಕಟಣೆಯ ನಂತರ, ಅರ್ಜಿದಾರರು ತಮ್ಮ ಷೇರುಗಳನ್ನು ಸೆಂಟ್ರಲ್ ಡಿಪಾಸಿಟರಿ ಸರ್ವಿಸಸ್ (ಇಂಡಿಯಾ) ಲಿಮಿಟೆಡ್‌ಗೆ (ಸಿಎಸ್‌ಡಿಎಲ್) ಹಿಂದಿರುಗಿಸುವಂತೆ ಎನ್‌ಎಸ್‌ಇ ಮತ್ತು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಅನೇಕ ಬಾರಿ ವಿನಂತಿಸಿದರು. ಎಲ್ಲಾ ಪರಿಹಾರೋಪಾಯಗಳೂ ಬರಿದಾದಂತೆ, ಅರ್ಜಿದಾರರು ಐಡಿಎಫ್‌ಸಿ ಬ್ಯಾಂಕ್‌ನ ಷೇರುಗಳನ್ನು ತಮ್ಮ ಖಾತೆಗಳಿಗೆ ವರ್ಗಾಯಿಸುವಂತೆ ಕೋರಿ ಹೈಕೋರ್ಟ್‌ಗೆ ತೆರಳಿದರು.
ಷೇರುಗಳನ್ನು ಹಿಂತಿರುಗಿಸುವುದಲ್ಲದೆ 2 ವರ್ಷಗಳಿಂದ ತಮ್ಮ ಷೇರುಗಳನ್ನು ಬಳಸಲು ಸಾಧ್ಯವಾಗದ ಕಾರಣ ನಷ್ಟ ಪರಿಹಾರ ಮತ್ತು ಕಾನೂನು ಶುಲ್ಕವನ್ನು ಕೂಡ ಪಾವತಿಸಬೇಕು ಎಂದು ಕೋರಿದ್ದಾರೆ.
ನವೆಂಬರ್‌ನಲ್ಲಿ ಬಾಕಿದಾರ ಎಂದು ಘೋಷಿಸಲಾಗಿದ್ದ ಟ್ರೇಡಿಂಗ್ ಸದಸ್ಯರ ಮೂಲಕ ಎಸ್‌ಎಲ್‌ಬಿಎಂ ಯೋಜನೆಯಲ್ಲಿ ಭಾಗವಹಿಸಿದ್ದರಿಂದ ಎನ್‌ಎಸ್‌ಇ ತಮ್ಮ ಕೋರಿಕೆಯನ್ನು ತಿರಸ್ಕರಿಸಿದೆ. ಆದರೆ 2020ರ ಅಕ್ಟೋಬರ್‌ನಲ್ಲಿ ತಮ್ಮ ಒಪ್ಪಂದವನ್ನು ನವೀಕರಿಸಿಲ್ಲ ಮತ್ತು ಅನುಗ್ರಹ ತಮ್ಮ ಅನುಮತಿ ಇಲ್ಲದೆ ಷೇರುಗಳನ್ನು ಬಳಸಿದೆ ಎಂದು ಅರ್ಜಿದಾರು ದೂರಿದ್ದಾರೆ.
ಸ್ಟಾಕ್ ಲೆಂಡಿಂಗ್ ಮತ್ತು ಬಾರೋಯಿಂಗ್ ಯೋಜನೆಯಡಿ ಪರಿಹಾರ ಪಡೆಯಲು ಹೂಡಿಕೆದಾರರಿಗೆ ಯಾವುದೇ ಅವಕಾಶವಿಲ್ಲ. ಇದರಿಂದಾಗಿ ಅವರಿಗೆ ಪರಿಹಾರ ಪಡೆಯಲು ಕಷ್ಟವಾಯಿತು ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.
ಎನ್‌ಎಸ್‌ಇ ಸೆಬಿ ಸುತ್ತೋಲೆಗಳು ಮತ್ತು ಬೈ ಲಾಗಳ ಅಡಿಯಲ್ಲಿ ಒದಗಿಸಲಾದ ಮಧ್ಯವರ್ತಿಗಳ ನಡುವಿನ ಒಪ್ಪಂದದ ಪ್ರಕಾರ ಎನ್‌ಎಸ್‌ಇ ತಮ್ಮ ಷೇರುಗಳನ್ನು ಹಿಂದಿರುಗಿಸಲು ಬದ್ಧವಾಗಿರಬೇಕು. ಮಾರುಕಟ್ಟೆ ನಿಯಂತ್ರಕವಾಗಿ, ಎನ್‌ಎಸ್‌ಇ ಹೂಡಿಕೆದಾರರ ಹಕ್ಕುಗಳ ರಕ್ಷಕ ಎಂದು ಅರ್ಜಿದಾರರು ವಾದಿಸಿದ್ದಾರೆ.
[ಅರ್ಜಿಯ ಪ್ರತಿಯನ್ನು ಇಲ್ಲಿ ಓದಿ]