Sonam Wangchuk , Delhi HCInstagram 
ಸುದ್ದಿಗಳು

ಪರಿಸರ ಹೋರಾಟಗಾರ ಸೋನಮ್ ವಾಂಗ್‌ಚುಕ್‌ ಬಂಧನ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ

ಜಮ್ಮು ಕಾಶ್ಮೀರವನ್ನು 2019ರಲ್ಲಿ ಕೇಂದ್ರಾಡಳಿತ ಪ್ರದೇಶವಾಗಿ ರೂಪಿಸಿದಾಗ ಪ್ರತ್ಯೇಕಗೊಂಡ ಲಡಾಖ್ ಪ್ರದೇಶವನ್ನು ಸಂವಿಧಾನದ ಆರನೇ ಪರಿಚ್ಛೇದಕ್ಕೆ ಸೇರಿಸುವಂತೆ ಒತ್ತಾಯಿಸಿ ವಾಂಗ್‌ಚುಕ್‌ ಪಾದಯಾತ್ರೆ ನಡೆಸಿದ್ದರು.

Bar & Bench

ಸೋಮವಾರ ರಾತ್ರಿ ದೆಹಲಿಯ ಸಿಂಘು ಗಡಿಯಲ್ಲಿ ಬಂಧಿತರಾಗಿರುವ ಪರಿಸರ ಹೋರಾಟಗಾರ, ಶಿಕ್ಷಣ ತಜ್ಞ ಹಾಗೂ ಚಿಂತಕ ಸೋನಮ್ ವಾಂಗ್‌ಚುಕ್ ಮತ್ತಿತರರನ್ನು ಬಿಡುಗಡೆ ಮಾಡುವಂತೆ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ಜಮ್ಮು ಕಾಶ್ಮೀರವನ್ನು 2019ರಲ್ಲಿ ಕೇಂದ್ರಾಡಳಿತ ಪ್ರದೇಶವಾಗಿ ರೂಪಿಸಿದ ಹಿನ್ನೆಲೆಯಲ್ಲಿ ಲಡಾಖ್ ಪ್ರದೇಶವನ್ನು ಸಂವಿಧಾನದ ಆರನೇ ಪರಿಚ್ಛೇದಕ್ಕೆ ಸೇರಿಸುವಂತೆ ಒತ್ತಾಯಿಸಲು  ವಾಂಗ್‌ಚುಕ್‌ ಹಾಗೂ ಅವರ ಬೆಂಬಲಿಗರು ಲೇಹ್‌ನಿಂದ ದೆಹಲಿವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದರು.

ಸ್ಥಳೀಯರ ಹಕ್ಕು ಮತ್ತು ಅಸ್ಮಿತೆಯನ್ನು ಗುರುತಿಸಿ ಸಂರಕ್ಷಿಸುವುದಕ್ಕಾಗಿ ಬುಡಕಟ್ಟು ಪ್ರದೇಶಗಳಲ್ಲಿ ಸ್ವಾಯತ್ತ ಆಡಳಿತ ರೂಪಿಸಲು ಕ್ರಮ ಕೈಗೊಳ್ಳುವಂತೆ ಸಂವಿಧಾನದ ಆರನೇ ಪರಿಚ್ಛೇದ ತಿಳಿಸುತ್ತದೆ. ಪ್ರಸ್ತುತ, ಇದು ಈಶಾನ್ಯ ಭಾರತದ ಅಸ್ಸಾಂ, ಮೇಘಾಲಯ, ತ್ರಿಪುರ ಮತ್ತು ಮಿಜೋರಾಂಗಳಿಗೆ ಮಾತ್ರ ಈ ಪರಿಚ್ಛೇದ ಅನ್ವಯವಾಗುತ್ತಿದೆ.

ಲಡಾಖ್‌ನ ಪರಿಸರ ರಕ್ಷಿಸುವಂತೆ ಈ ಹಿಂದೆ ವಾಂಗ್‌ಚುಕ್‌ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಕಳೆದ ತಿಂಗಳು ವಾಂಗ್‌ಚುಕ್‌ ಹಾಗೂ ಇತರರು ದೆಹಲಿಗೆ ಪಾದಯಾತ್ರೆ ಆರಂಭಿಸಿದ್ದರು. ಆದರೆ ದೆಹಲಿ ಪ್ರವೇಶಿಸುವ ಮುನ್ನವೇ ಅವರನ್ನು ಅವರ ಬೆಂಬಲಿಗರ ಸಹಿತ ಬಂಧಿಸಲಾಗಿತ್ತು. ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಜನ್ಮ ದಿನವಾದ ಅಕ್ಟೋಬರ್ 2 ರಂದು ರಾಜ್‌ಘಾಟ್‌ನಲ್ಲಿ ಪಾದಯಾತ್ರೆ ಮುಕ್ತಾಯಗೊಳಿಸಲು ಅವರು ನಿರ್ಧರಿಸಿದ್ದರು.

ವಾಂಗ್‌ಚುಕ್‌ ಬಿಡುಗಡೆ ಕೋರಿದ್ದ ಮನವಿಯನ್ನು ತುರ್ತು ವಿಚಾರಣೆ ನಡೆಸುವಂತೆ ವಕೀಲ ವಿಕ್ರಮ್‌ ಹೆಗ್ಡೆ ಅವರು ಮಾಡಿದ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ಪೀಠ ತಿರಸ್ಕರಿಸಿತು. ಅಕ್ಟೋಬರ್ 3ರಂದು ವಿಚಾರಣೆ ನಡೆಯುವ ಸಾಧ್ಯತೆ ಇದೆ.

 ವಾಂಗ್‌ಚುಕ್‌ ಅವರನ್ನು ಬಿಡುಗಡೆ ಮಾಡುವ ಜೊತೆಗೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ಕಾರ್ಯಕರ್ತರಿಗೆ ದೆಹಲಿ ಪ್ರವೇಶಿಸಲು ಅನುಮತಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ವಾಂಗ್‌ಚುಕ್‌ ಅವರು ಪರಿಸರ ಸಂರಕ್ಷಣೆ ಮತ್ತು ಪ್ರಜಾಸತ್ತಾತ್ಮಕ ಅಸ್ಮಿತೆಗಾಗಿ ನಡೆಯುತ್ತಿರುವ ಆಂದೋಲನದಲ್ಲಿ ನಿಕಟವಾಗಿ ತೊಡಗಿಕೊಂಡಿದ್ದಾರೆ ಎಂದು ವಿವರಿಸಲಾಗಿದೆ.