ವಿವೇಚನಾರಹಿತವಾಗಿ ಪರಿಸರ ನಾಶ ಮಾಡದೆ ಸುಸ್ಥಿರ ಅಭಿವೃದ್ಧಿಗೆ ಮುಂದಾಗುವುದು ಅಗತ್ಯ: ನ್ಯಾಯಮೂರ್ತಿ ಬಿ ಆರ್‌ ಗವಾಯಿ

ವಯನಾಡ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತದಿಂದ ಸಾವನ್ನಪ್ಪಿದವರಿಗೆ ನ್ಯಾ. ಗವಾಯಿ ಅವರು ಶ್ರದ್ಧಾಂಜಲಿ ಅರ್ಪಿಸಿದರು.
Justice BR Gavai
Justice BR Gavai
Published on

ಬುದ್ಧಿ ಇಲ್ಲದೆ ಪರಿಸರ ನಾಶ ಮಾಡುವ ಬದಲು ಸುಸ್ಥಿರ ಅಭಿವೃದ್ಧಿಗೆ ಮುಂದಾಗಬೇಕಿದೆ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಬಿ ಆರ್‌ ಗವಾಯಿ ತಿಳಿಸಿದರು.

ಕಾಮನ್‌ವೆಲ್ತ್ ಕಾನೂನು ಶಿಕ್ಷಣ ಸಂಘದ ವತಿಯಿಂದ (CLEA) ಕೇರಳದ ಕುಮಾರಕೊಮ್‌ನಲ್ಲಿ ಶನಿವಾರ ಆಯೋಜಿಸಲಾಗಿದ್ದ "ಕಾನೂನು ಮತ್ತು ತಂತ್ರಜ್ಞಾನ: ಸುಸ್ಥಿರ ಸಾರಿಗೆ, ಪ್ರವಾಸೋದ್ಯಮ ಮತ್ತು ತಾಂತ್ರಿಕ ಆವಿಷ್ಕಾರಗಳು" ಕುರಿತ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

Also Read
ವಯನಾಡ್‌ ಭೂಕುಸಿತ: ಸಂತ್ರಸ್ತರ ಪುನರ್ವಸತಿ, ಮುಂಜಾಗರೂಕತಾ ಕ್ರಮದ ಕುರಿತು ಪ್ರತಿ ಶುಕ್ರವಾರ ಕೇರಳ ಹೈಕೋರ್ಟ್‌ ವಿಚಾರಣೆ

ಕೇರಳದ ವಯನಾಡ್‌ ಜಿಲ್ಲೆಯ ಮುಂಡಕೈನಲ್ಲಿ ಈಚಗೆ ಸಂಭವಿಸಿದ ಭೂಕುಸಿತದಲ್ಲಿ 230ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದವರಿಗೆ ನ್ಯಾಯಮೂರ್ತಿಗಳು  ಶ್ರದ್ಧಾಂಜಲಿ ಅರ್ಪಿಸಿದರು.

ನ್ಯಾ. ಗವಾಯಿ ಅವರ ಭಾಷಣದ ಪ್ರಮುಖಾಂಶಗಳು

  • ಮಾನವ ದುರಾಸೆಯ ಪರಿಣಾಮ ಇಲ್ಲಿಂದ ಸುಮಾರು 100 ಕಿ.ಮೀ ದೂರದಲ್ಲಿ ದುರಂತವೊಂದು ಘಟಿಸಿದೆ ಇಂತಹ ಸಂದರ್ಭದಲ್ಲಿ ಈ ಬಗೆಯ ಸಮ್ಮೇಳನ ನಡೆಸುವುದು ಮುಖ್ಯ.

  • ಅಭಿವೃದ್ಧಿ ಮತ್ತು ಪರಿಸರ ಕಾಳಜಿಗಳ ನಡುವೆ ಸಂಘರ್ಷಉಂಟಾದ ಕಾರಣಕ್ಕೆ ಕಳೆದ ದಶಕದಲ್ಲಿ ನಾವು ಅನೇಕ ದುರಂತಗಳನ್ನು ಅನುಭವಿಸಿದ್ದೇವೆ.

  • ಪ್ರಗತಿಗೆ ಅಭಿವೃದ್ಧಿ ಅಗತ್ಯವಾಗಿದ್ದು ಪರಿಸರದೊಂದಿಗೆ ಅಭಿವೃದ್ಧಿ ಸಮತೋಲನಗೊಳಿಸಲು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಒಟ್ಟಾಗಿ ಕೆಲಸ ನಿರ್ವಹಿಸಬೇಕು.

  • ದುರಾಶೆ ಮಿತಿ ಮೀರಿ ಹೋದರೆ ಭವಿಷ್ಯದ ಪೀಳಿಗೆಯ ಬಗ್ಗೆ ಕಾಳಜಿ ಇಲ್ಲದಂತಾಗುತ್ತದೆ. ಕಳೆದ ಎರಡು ದಶಕಗಳಲ್ಲಿ ಸುಸ್ಥಿರ ಅಭಿವೃದ್ಧಿಗೆ ಮಹತ್ವ ದೊರೆತಿದೆ.

  • ಪರಿಸರವನ್ನು ರಕ್ಷಿಸಲು ಪ್ರಭುತ್ವಕ್ಕೆ ಸಂವಿಧಾನ ಅಗತ್ಯವಾದರೂ ನಿಸರ್ಗದ ರಕ್ಷಣೆ ಜನರ ಮೂಲಭೂತ ಕರ್ತವ್ಯ.

  • ಒಂದೆಡೆ ವಿದ್ಯುತ್‌ ಉತ್ಪಾದನೆಗಾಗಿ ಅಣೆಕಟ್ಟು ನಿರ್ಮಿಸಲು ಅನುಮತಿ ನೀಡಬೇಕು ಎಂದು ನ್ಯಾಯಾಲಯಕ್ಕೆ ಬರುವ ಮನವಿಗಳು ಒಂದೆಡೆಯಾದರೆ ಇದರಿಂದ ಈಗಾಗಲೇ ದುರ್ಬಲವಾಗಿರುವ ಪರಿಸರ ವ್ಯವಸ್ಥೆಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬ ಕಳವಳಗಳಿವೆ.

  • ಕಳೆದ ಒಂದು ದಶಕದಲ್ಲಿ ಪರಿಸರ ನ್ಯಾಯಶಾಸ್ತ್ರ ಕಣ್ತೆರೆದಿದೆ.

  • ಹವಾಮಾನ ಬದಲಾವಣೆಯ ದುಷ್ಪರಿಣಾಮಗಳನ್ನು ಗಂಭೀರವಾಗಿ ಪರಿಶೀಲಿಸಬೇಕಾಗಿದೆ.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸುಪ್ರೀಂ ಕೋರ್ಟ್‌ನ ಮತ್ತೊಬ್ಬ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಸಾರಿಗೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಹೊಸ ಕಾನೂನುಗಳನ್ನು ಜಾರಿಗೊಳಿಸುವ ಅಗತ್ಯವಿದೆ ಎಂದು ಹೇಳಿದರು.

ಕೇರಳ ಹೈಕೋರ್ಟ್‌ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎ ಮುಹಮ್ಮದ್ ಮುಸ್ತಾಕ್ , ಭಾರತದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ  ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Kannada Bar & Bench
kannada.barandbench.com