ಪತ್ರಕರ್ತರನ್ನು ಗುರಿಯಾಗಿಸಿಕೊಂಡು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆಯನ್ನು (ಯುಎಪಿಎ) ಬಳಸಲಾಗುತ್ತಿದೆ ಎಂದು ಆರೋಪಿಸಿ ಪತ್ರಕರ್ತರ ಸಂಸ್ಥೆಯೊಂದು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ [ಫೌಂಡೇಶನ್ ಫಾರ್ ಮೀಡಿಯಾ ಪ್ರೊಫೆಷನಲ್ಸ್ ಇನ್ನಿತರರು ಮತ್ತು ಸಂಪುಟ ಕಾರ್ಯದರ್ಶಿ ಮೂಲಕ ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ ]
ಕಾಯಿದೆಯನ್ನು ಯಾವ ರೀತಿಯಲ್ಲಿ ಮತ್ತು ಯಾರ ಪ್ರಕರಣದಲ್ಲಿ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ತಿಳಿಸುವ ಪೂರಕ ಅಫಿಡವಿಟ್ ಸಲ್ಲಿಸುವಂತೆ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ಪೀಠ ಅರ್ಜಿ ಸಲ್ಲಿಸಿರುವ ಫೌಂಡೇಶನ್ ಫಾರ್ ಮೀಡಿಯಾ ಪ್ರೊಫೆಷನಲ್ಸ್‌ಗೆ ತಿಳಿಸಿತು.
ಕಾಯಿದೆಯೊಂದನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬುದನ್ನು ಊಹಿಸಲೂ ಆಗದು. ದಯವಿಟ್ಟು ಉದಾಹರಣೆ ನೀಡಿ ಎಂದು ಮುಖ್ಯ ನ್ಯಾಯಮೂರ್ತಿ ಮನಮೋಹನ್ ಸೂಚಿಸಿದರು.
ಅರ್ಜಿದಾರರ ಸಂಘಟನೆಯನ್ನು ಪ್ರತಿನಿಧಿಸುವ ಹಿರಿಯ ವಕೀಲ ಅರವಿಂದ್ ದಾತಾರ್ , "ಕಾನೂನುಬಾಹಿರ ಕೂಟ", "ಕಾನೂನುಬಾಹಿರ ಚಟುವಟಿಕೆ" ಮತ್ತು "ವಿಶ್ವಾಸ ದ್ರೋಹವನ್ನು" ವ್ಯಾಖ್ಯಾನಿಸುವ ಯುಎಪಿಎ ನಿಯಮಾವಳಿಯನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ವ್ಯಾಖ್ಯಾನಗಳು ಎಲ್ಲೆ ಮೀರಿದ್ದು ಅನಿಯಂತ್ರಿತವಾಗಿವೆ. 2014 ರಿಂದ, 89% ಯುಎಪಿಎ ಪ್ರಕರಣಗಳು ಬಾಕಿ ಉಳಿದಿದ್ದು ಶೇ 5ರಷ್ಟು ಪ್ರಕರಣಗಳಲ್ಲಿ ಮಾತ್ರ ಶಿಕ್ಷೆ ವಿಧಿಸಲಾಗಿದೆ ಎಂದು ತಿಳಿಸಿದರು.
ಆದರೆ ಯಾರಾದರೂ ನಿರ್ದಿಷ್ಟ ಪತ್ರಕರ್ತರ ವಿರುದ್ಧ ಕಾಯಿದೆಯನ್ನು ಬಳಸಲಾಗಿದೆಯೇ? ಊಹೆಯನ್ನು ಆಧರಿಸಿ ತೀರ್ಮಾನಿಸಲಾಗದು ಎಂದು ನ್ಯಾಯಾಲಯ ಹೇಳಿತು. ಅರ್ಜಿದಾರರು ಉದಾಹರಣೆಗಳನ್ನು ದಾಖಲೆಯಲ್ಲಿ ಸಲ್ಲಿಸಲಿದ್ದಾರೆ ಎಂದ ದಾತಾರ್, ಯುಎಪಿಎ ಅಡಿ ಕಠಿಣ ಜಾಮೀನು ಷರತ್ತು ವಿಧಿಸುತ್ತಿರುವುದನ್ನು ಪ್ರಸ್ತಾಪಿಸಿದರು.
ಅರ್ಜಿದಾರರು ಉದಾಹರಣೆಗಳನ್ನು ದಾಖಲೆಯಲ್ಲಿ ಇಡುತ್ತಾರೆ ಎಂದು ಹಿರಿಯ ವಕೀಲ ದಾತಾರ್ ಸಲ್ಲಿಸಿದರು. ತಮ್ಮ ವಾದಗಳನ್ನು ಮುಂದುವರಿಸುತ್ತಾ ದಾತಾರ್ ಅವರು ಯುಎಪಿಎ ಅಡಿಯಲ್ಲಿ ಜಾಮೀನಿನ ಕಠಿಣ ನಿಬಂಧನೆಗಳನ್ನು ಸಹ ಪ್ರಸ್ತಾಪಿಸಿದರು.
ಬಾಂಬೆ ಮತ್ತು ಗುವಾಹಟಿ ಹೈಕೋರ್ಟ್‌ಗಳು ಯುಎಪಿಎಗೆ ಸಂಬಂಧಿಸಿದಂತೆ ಇದೇ ರೀತಿಯ ಅರ್ಜಿಗಳನ್ನು ಪುರಸ್ಕರಿಸಿವೆ ಎಂದು ಅವರು ತಿಳಿಸಿದರು. ಹೆಚ್ಚುವರಿ ಅಫಿಡವಿಟ್ ಸಲ್ಲಿಸಲು ಅರ್ಜಿದಾರರಿಗೆ ಕಾಲಾವಕಾಶ ನೀಡಿದ ಪೀಠ, ವಿಚಾರಣೆಯನ್ನು ಡಿಸೆಂಬರ್ 11ಕ್ಕೆ ಮುಂದೂಡಿತು.