Delhi High Court
Delhi High Court 
ಸುದ್ದಿಗಳು

ಮೂಲಭೂತ ಹಕ್ಕುಗಳ ಸಂಪೂರ್ಣ ನಿರ್ಲಕ್ಷ್ಯ: ಐಟಿ ನಿಯಮ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ ವಕೀಲ

Siddesh M S

ಮಾಹಿತಿ ತಂತ್ರಜ್ಞಾನ (ಮಧ್ಯಸ್ಥ ವೇದಿಕೆಗಳಿಗೆ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ಸಂಹಿತೆ) ನಿಯಮ-2021 ಸಿಂಧುತ್ವ ಪ್ರಶ್ನಿಸಿ ವಕೀಲರೊಬ್ಬರು ದೆಹಲಿ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದು, ಐಟಿ ಕಾಯಿದೆಯ ನಿಯಮ 3 ಮತ್ತು 4 ಅನ್ನು ಕೇಂದ್ರೀಕರಿಸಿ ಅರ್ಜಿ ಹಾಕಲಾಗಿದೆ.

ವಾಟ್ಸಾಪ್, ಇನ್‌ಸ್ಟಾಗ್ರಾಂ, ಟ್ವಿಟರ್ ಮುಂತಾದ ಸಾಮಾಜಿಕ ಮಾಧ್ಯಮ ಮಧ್ಯಸ್ಥ ವೇದಿಕೆ (ಎಸ್‌ಎಂಐ) ಬಳಕೆದಾರನಾಗಿ ಈ ನಿಯಮಗಳು ತನ್ನ ಮೂಲಭೂತ ಹಕ್ಕುಗಳನ್ನು ಸಂಪೂರ್ಣವಾಗಿ ಕಡೆಗಣಿಸಿವೆ ಎಂದು ವಕೀಲ ಉದಯ್ ಬೇಡಿ ವಾದಿಸಿದ್ದಾರೆ.

ಆಕ್ಷೇಪಾರ್ಹವಾದ ಈ ನಿಯಮಗಳು ಸಂವಿಧಾನದ 14 (ಸ್ವೇಚ್ಛೆಯ ವಿರುದ್ಧದ ಹಕ್ಕು ಒಳಗೊಂಡ ಸಮಾನತೆಯ ಹಕ್ಕು), 19 (ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ) ಮತ್ತು 21ನೇ ವಿಧಿಯನ್ನು (ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು) ಉಲ್ಲಂಘಿಸುತ್ತವೆ ಎಂದು ಅರ್ಜಿದಾರರು ವಾದಿಸಿದ್ದಾರೆ.

2021ರ ಐಟಿ ನಿಯಮಾವಳಿಗಳ 3ನೇ ನಿಯಮ ಮಧ್ಯಸ್ಥ ವೇದಿಕೆಗಳು ಸೂಕ್ತ ಕಾರ್ಯತತ್ಪರತೆಗೆ ಅನ್ವಯಿಸುತ್ತದೆ. ನಿಯಮ 4 ಮಹತ್ವದ ಸಾಮಾಜಿಕ ಮಾಧ್ಯಮ ಮಧ್ಯಸ್ಥ ವೇದಿಕೆಗಳು ಗಮನಹರಿಸಬೇಕಾದ ಹೆಚ್ಚುವರಿ ಕಾರ್ಯತತ್ಪರತೆಗೆ ಸಂಬಂಧಿಸಿದ್ದಾಗಿದೆ. ಮಧ್ಯಸ್ಥ ವೇದಿಕೆಗಳ / ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿನ ದೂರುಗಳನ್ನು ಈ ಮಧ್ಯಸ್ಥ ವೇದಿಕೆಗಳು ಹೇಗೆ ನಿರ್ವಹಿಸಲು ನಿರೀಕ್ಷಿಸಲಾಗಿದೆ ಎನ್ನುವುದನ್ನು ಈ ನಿಯಮಗಳು ತಿಳಿಸುತ್ತವೆ.

ಈ ನಿಯಮಾವಳಿಗಳ ಜಾರಿಯೊಂದಿಗೆ “ಎಸ್‌ಎಂಐಗಳ ನಿಯಮಿತ ಬಳಕೆದಾರರಾಗಿರುವ ಅರ್ಜಿದಾರರಿಗೆ ಇನ್ನು ಮುಂದೆ ತನ್ನ ಗೆಳೆಯರು ಮತ್ತು ಗ್ರಾಹಕರೊಂದಿಗಿನ ಸಂವಹನದಲ್ಲಿ ಗೌಪ್ಯತೆಯ ರಕ್ಷಣೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ಮತ್ತು ರಾಜ್ಯದ ಅನಿಯಂತ್ರಿತ ಕ್ರಮದಿಂದ ರಕ್ಷಣೆ ದೊರೆಯುವುದಿಲ್ಲ” ಎಂದು ಬೇಡಿ ವಾದಿಸಿದ್ದಾರೆ.

ಈ ನಿಯಮಗಳನ್ನು ಅಪನಂಬಿಕೆಯಿಂದ ಮತ್ತು ಅಧಿಕಾರಗಳ ಬೇರ್ಪಡಿಸುವ ಸಿದ್ಧಾಂತವನ್ನು ಕಡೆಗಣಿಸಿ ರೂಪಿಸಲಾಗಿದೆ. ಪ್ರಜಾಪ್ರಭುತ್ವ ಸರ್ಕಾರದಲ್ಲಿರುವ ನಿಯಂತ್ರಣ ಮತ್ತು ಸಮತೋಲನಕ್ಕೆ ವಿರುದ್ಧವಾಗಿ ರೂಪಿಸಲಾಗಿದೆ ಎಂದು ಬೇಡಿ ತಗಾದೆ ಎತ್ತಿದ್ದಾರೆ.

ಖಾಸಗಿ ವ್ಯಕ್ತಿಗಳಿಂದ ಸ್ವೀಕರಿಸಲಾದ ದೂರಿಗೆ ಸಂಬಂಧಿಸದಂತೆ ಕಾರ್ಯಪ್ರವೃತ್ತವಾಗಲು ಕೇಂದ್ರ ಸರ್ಕಾರವು ಖಾಸಗಿ ಎಸ್‌ಎಂಐಗಳಿಗೆ ಅಧಿಕಾರ ನೀಡಿದೆ. ಅಲ್ಲದೇ, ನಿಯಮ 3 (1) (ಬಿ) ಮತ್ತು 3 (1) (ಡಿ)ನಲ್ಲಿ ನಿಬಂಧನೆಗಳಿಗೆ ಒಳಪಟ್ಟರೆ ಅವರ ವೇದಿಕೆಯಲ್ಲಿ ಲಭ್ಯವಿರುವ ಯಾವುದೇ ಮಾಹಿತಿ ಪಡೆಯದಂತೆ ಮಾಡಲು ಸ್ವಯಂಪ್ರೇರಿತವಾಗಿ ಕ್ರಮ ಕೈಗೊಳ್ಳಬಹುದಾಗಿದೆ. ಹೀಗೆ ಮಾಡುವ ಮೂಲಕ ಕೇಂದ್ರ ಸರ್ಕಾರವು ಶ್ರೇಯಾ ಸಿಂಘಾಲ್‌ ವರ್ಸಸ್‌ ಭಾರತ ಸರ್ಕಾರದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪನ್ನು ಉಲ್ಲಂಘಿಸುವ ಯತ್ನ ಮಾಡಿದೆ ಎಂದು ಹೇಳಿದ್ದಾರೆ.

ಈ ಆಧಾರದಲ್ಲಿ, ಐಟಿ ಕಾಯಿದೆಯ ನಿಯಮ 3 ಮತ್ತು 4 ಅನ್ನು ವಜಾ ಮಾಡುವಂತೆ ಬೇಡಿಯವರು ಹೈಕೋರ್ಟ್‌ಗೆ ಕೋರಿದ್ದಾರೆ. ಇಷ್ಟರ ಮಟ್ಟಿಗೆ ಅರ್ಜಿದಾರರ ಮೂಲಭೂತ ಹಕ್ಕುಗಳನ್ನು ಈ ಐಟಿ ನಿಯಮಗಳು ಉಲ್ಲಂಘಿಸುತ್ತಿದ್ದು, ಮಾಹಿತಿ ತಂತ್ರಜ್ಞಾನ ಕಾಯಿದೆಯ ಮಿತಿಗಳನ್ನು ಮೀರಲಾಗುತ್ತಿದೆ ಎಂದು ವಾದಿಸಿದ್ದಾರೆ.

ಡಿಜಿಟಲ್‌ ಮಾಧ್ಯಮಗಳಾದ ದಿ ವೈರ್‌, ಆಲ್ಟ್‌ ನ್ಯೂಸ್‌, ದಿ ಕ್ವಿಂಟ್‌ ಮತ್ತು ಪಿಟಿಐ ಸಂಸ್ಥೆಗಳು ಐಟಿ ನಿಯಮಗಳನ್ನು ಪ್ರಶ್ನಿಸಿ ಈಗಾಗಲೇ ಮನವಿ ಸಲ್ಲಿಸಿವೆ. ಈ ಸಂಬಂಧ ಪ್ರತಿಕ್ರಿಯಿಸಲು ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಕಾಲಾವಕಾಶ ನೀಡಿದೆ.

ಮದ್ರಾಸ್‌, ಕೇರಳ ಮತ್ತು ಬಾಂಬೆ ಹೈಕೋರ್ಟ್‌ಗಳಲ್ಲೂ ಐಟಿ ನಿಯಮಗಳನ್ನು ಪ್ರಶ್ನಿಸಿ ಮನವಿ ಸಲ್ಲಿಸಲಾಗಿದೆ. ಹಲವು ಮನವಿಗಳು ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ಮನವಿಗಳನ್ನು ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸುವಂತೆ ಕೋರಿ ಕೇಂದ್ರ ಸರ್ಕಾರವು ಮನವಿ ಸಲ್ಲಿಸಿದೆ. ಆದರೆ, ಇದುವರೆಗೆ ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಯಾವುದೇ ತಡೆ ನೀಡಿಲ್ಲ.