West Bengal, Calcutta HC 
ಸುದ್ದಿಗಳು

ಮುರ್ಷಿದಾಬಾದ್ ಹಿಂಸಾಚಾರದ ತನಿಖೆ: ತರಾತುರಿಯಲ್ಲಿ ಪಿಐಎಲ್ ಸಲ್ಲಿಸಲಾಗಿದೆ ಎಂದ ಸುಪ್ರೀಂ; ಬದಲಾವಣೆಗೆ ಸೂಚನೆ

ಅರ್ಜಿದಾರರಲ್ಲಿ ಒಬ್ಬರು ತಮ್ಮ ಮನವಿಯಲ್ಲಿ ಬಳಸಿದ ಭಾಷೆಗೆ ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿತು.

Bar & Bench

ವಕ್ಫ್ (ತಿದ್ದುಪಡಿ) ಕಾಯಿದೆ ವಿರುದ್ಧದ ಪ್ರತಿಭಟನೆ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಭುಗಿಲೆದ್ದ ಕೋಮು ಹಿಂಸಾಚಾರದ ಬಗ್ಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸಬೇಕೆಂದು ಕೋರಿದ್ದ ಅರ್ಜಿದಾರರಲ್ಲಿ ಒಬ್ಬರನ್ನು ಸುಪ್ರೀಂ ಕೋರ್ಟ್ ಸೋಮವಾರ ತರಾಟೆಗೆ ತೆಗೆದುಕೊಂಡಿದೆ.

ವಕೀಲ ಶಶಾಂಕ್ ಶೇಖರ್ ಝಾ ಅವರು ತರಾತುರಿಯಲ್ಲಿ ಅರ್ಜಿಯನ್ನು ಸಲ್ಲಿಸಿದ್ದಾರೆ ಮತ್ತು ಕೆಲವು ಸರ್ಕಾರಿ ಅಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದರೂ ಆ ವ್ಯಕ್ತಿಗಳನ್ನು ಅರ್ಜಿಯಲ್ಲಿ ಕಕ್ಷಿದಾರರನ್ನಾಗಿ ಸೇರಿಸಿಲ್ಲ ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್ ಕೋಟಿಶ್ವರ್ ಸಿಂಗ್ ಅವರಿದ್ದ ಪೀಠ ಆಕ್ಷೇಪಿಸಿತು‌.

ಅರ್ಜಿಯನ್ನು ತಿದ್ದುಪಡಿ‌ ಮಾಡಿ ಸಲ್ಲಿಸುವುದಾಗಿ ಝಾ ಹೇಳಿದಾಗ ನ್ಯಾಯಾಲಯ "ಅದಕ್ಕಾಗಿಯೇ ನೀವು ತುಂಬಾ ಆತುರದಲ್ಲಿದ್ದೀರಿ ಎಂದು ಹೇಳಿದೆವು. ಧ್ವನಿಯಿಲ್ಲದವರಿಗೆ ನ್ಯಾಯ ಒದಗಿಸುವುದು ಒಳ್ಳೆಯದು ಆದರೆ ಸರಿಯಾದ ರೀತಿಯಲ್ಲಿ ಮಾಡಿ. ಈ ರೀತಿ ಅಲ್ಲ" ಎಂದು ಪೀಠ ಆಕ್ಷೇಪಿಸಿತು.

ಅರ್ಜಿದಾರರು ತಮ್ಮ ಅರ್ಜಿಗಳಲ್ಲಿ ಬಳಸಿದ ಭಾಷೆಗೂ ಪೀಠವು ಅಸಮಾಧಾನ ವ್ಯಕ್ತಪಡಿಸಿತು. ಅಂತಿಮವಾಗಿ ನ್ಯಾಯಾಲಯ ಝಾ ಅವರಿಗೆ ಮನವಿ ಹಿಂಪಡೆಯಲು ಅನುಮತಿ ನೀಡಿತು. ಉತ್ತಮ ಸಾಕ್ಷ್ಯ ಮತ್ತು ಪ್ರತಿಕ್ರಿಯೆ ಜೊತೆ ಹೊಸ ಅರ್ಜಿ ಸಲ್ಲಿಸುವ ಸ್ವಾತಂತ್ರ್ಯ ನೀಡಿತು.

ಸಿಜೆಐ ಸಂಜೀವ್ ಖನ್ನಾ ಅವರ ವಿರುದ್ಧ ಮಾಡಲಾಗಿದ್ದ ಟೀಕೆಗಳಿಗೆ ಸಂಬಂಧಿಸಿದ ಅಂಶಗಳನ್ನು ಸಹ ತಮ್ಮ ಅರ್ಜಿಯಲ್ಲಿ ಸೇರಿಸಬೇಕೆಂದು ಮತ್ತೊಬ್ಬ ವಕೀಲರಾದ ವಿಶಾಲ್ ತಿವಾರಿ ಅವರು ಖುದ್ದು ವಿನಂತಿಸಿದ ಹಿನ್ನೆಲೆಯಲ್ಲಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಕೂಡ ಹಿಂಪಡೆಯಲು ಅನುಮತಿಸಲಾಯಿತು.

ವಕ್ಫ್ (ತಿದ್ದುಪಡಿ) ಕಾಯಿದೆಯ ವಿರುದ್ಧದ ಪ್ರತಿಭಟನೆ ನಂತರ ಪಶ್ಚಿಮ ಬಂಗಾಳದಲ್ಲಿ ಭುಗಿಲೆದ್ದ ಕೋಮು ಹಿಂಸಾಚಾರದ ತನಿಖೆಗಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಐದು ಸದಸ್ಯರ ನ್ಯಾಯಾಂಗ ತನಿಖಾ ಆಯೋಗ ರಚಿಸುವಂತೆ ಕೋರಿ ತಿವಾರಿ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಕಾಯಿದೆ ವಿರೋಧಿಸಿ ಮುರ್ಷಿದಾಬಾದ್‌ನಲ್ಲಿ ಭುಗಿಲೆದ್ದ ಹಿಂಸಾಚಾರದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಅರೆಸೇನಾ ಪಡೆ ನಿಯೋಜಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ಕುರಿತು ಯಾವುದೇ ತುರ್ತು ನಿರ್ದೇಶನ ನೀಡಲು ಸುಪ್ರೀಂ ಕೋರ್ಟ್ ಇಂದು ಬೆಳಗ್ಗೆ ನಿರಾಕರಿಸಿತ್ತು.