NCW Chairperson Rekha Sharma 
ಸುದ್ದಿಗಳು

ಲವ್ ಜಿಹಾದ್‌ ಹೇಳಿಕೆ: ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರ ಪದಚ್ಯುತಿ ಕೋರಿ ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ

ಮಹಿಳೆಯರ ವಿರುದ್ಧದ ಅಪರಾಧವನ್ನು ತಡೆಯುವ ಹೊಣೆಗಾರಿಕೆ ಇರುವವರು ಹೊಂದಿರಬೇಕಾದ ಮನಸ್ಥಿತಿಯನ್ನು ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು ಹೊಂದಿಲ್ಲ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

Bar & Bench

ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು ಲವ್‌ ಜಿಹಾದ್ ಬಗ್ಗೆ ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಉಲ್ಲೇಖಿಸಿರುವುದನ್ನು ಆಕ್ಷೇಪಿಸಿ, ಅವರನ್ನು ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸುವಂತೆ ಕೋರಿ ಬಾಂಬೆ ಹೈಕೋರ್ಟಿನಲ್ಲಿ ಅರ್ಜಿಯೊಂದು ಸಲ್ಲಿಕೆಯಾಗಿದೆ.

ಹೋರಾಟಗಾರ ಸಾಕೇತ್‌ ಗೋಖಲೆ ಅರ್ಜಿಯನ್ನು ಸಲ್ಲಿಸಿದ್ದು, ಮಹಿಳೆಯರ ವಿರುದ್ಧದ ಅಪರಾಧಗಳನ್ನು ತಡೆಗಟ್ಟುವ ಹೊಣೆಗಾರಿಕೆ ಹೊತ್ತವರು ಹೊಂದಿರಬೇಕಾದ ಮನಸ್ಥಿತಿಯನ್ನು ಶರ್ಮಾ ಅವರು ಹೊಂದಿಲ್ಲ ಎಂದು ಅರ್ಜಿಯಲ್ಲಿ ಆರೋಪಿಸಿದ್ದಾರೆ.

ರಾಷ್ಟ್ರೀಯ ಮಹಿಳಾ ಆಯೋಗ ಕಾಯಿದೆ, 1990ರ ನಿಬಂಧನೆಗಳ ಅಡಿ ಸಂವಿದಾನದ 14, 21, ಮತ್ತು 25ನೇ ವಿಧಿಯನ್ನು ಉಲ್ಲಂಘಿಸಿರುವ ಕಾರಣಕ್ಕಾಗಿ ರೇಖಾ ಶರ್ಮಾ ಅವರನ್ನು ಪದಚ್ಯುತಿಗೊಳಿಸುವಂತೆ ನಿರ್ದೇಶಿಸಲು ನ್ಯಾಯಾಲಯವನ್ನು ಅರ್ಜಿದಾರರು ಕೋರಿದ್ದಾರೆ. ನೂತನ ಮಹಿಳಾ ಆಯೋಗದ ಕಾಯಿದೆಯನ್ವಯ ತಮ್ಮ ಕರ್ತವ್ಯ ನಿರ್ವಹಿಸಲು ನಿರಾಕರಿಸಿದಲ್ಲಿ ಅಥವಾ ಅಧ್ಯಕ್ಷರ ಹೊಣೆಗಾರಿಕೆಯನ್ನು ನಿಭಾಯಿಸಲು ಅಸಮರ್ಥರಾದಲ್ಲಿ ಕೇಂದ್ರ ಸರ್ಕಾರವು ಅಂತಹವರನ್ನು ಪದಚ್ಯುತಿಗೊಳಿಸಬಹುದಾಗಿದೆ.

ವಿವಾದಿತ ಟ್ವೀಟ್‌:

ರೇಖಾ ಶರ್ಮಾ ಅವರು ಮಹಾರಾಷ್ಟ್ರದ ರಾಜ್ಯಪಾಲರಾದ ಭಗತ್‌ ಸಿಂಗ್ ಕೊಶ್ಯಾರಿ ಅವರನ್ನು ಭೇಟಿ ಮಾಡಿದ್ದ ಬಗ್ಗೆ ಆಯೋಗದ ಅಧಿಕೃತ ಟ್ವಿಟರ್‌ ಖಾತೆಯಿಂದ ಟ್ವೀಟ್‌ ಮಾಡಲಾಗಿತ್ತು. ಈ ವೇಳೆ, ಶರ್ಮಾ ಅವರು ಭಗತ್‌ ಸಿಂಗ್ ಕೋಶ್ಯಾರಿ ಅವರೊಂದಿಗೆ ಮಹಿಳಾ ಸುರಕ್ಷತೆಯ ಬಗ್ಗೆ ಚರ್ಚಿಸಿದರು. ರಾಜ್ಯದಲ್ಲಿ ಮುಚ್ಚಿಹೋಗಿರುವ ಒನ್‌ ಸ್ಟಾಪ್‌ ಸೆಂಟರ್‌, ಕೋವಿಡ್‌ ಕೇಂದ್ರಗಳಲ್ಲಿ ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ, ಅತ್ಯಾಚಾರದ ಬಗ್ಗೆ ಹಾಗೂ ಲವ್‌ ಜಿಹಾದ್‌ ಪ್ರಕರಣಗಳ ಹೆಚ್ಚಳದ ಬಗ್ಗೆ ರಾಜ್ಯಪಾಲರ ಗಮನಸೆಳೆಯಲಾಯಿತು ಎಂಬುದಾಗಿ ಟ್ವೀಟ್‌ನಲ್ಲಿ ತಿಳಿಸಲಾಗಿತ್ತು. ಆಯೋಗದ ಈ ಟ್ವೀಟ್‌ ಬಗ್ಗೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿತ್ತು.

ಅಂತರಧರ್ಮೀಯ ವಿವಾಹದ ಮೂಲಕ ದಂಪತಿಗಳು ತಮ್ಮ ವೈಯಕ್ತಿಕ ಧಾರ್ಮಿಕ ನಂಬಿಕೆಗಳನ್ನು ಮುಕ್ತವಾಗಿ ಆಚರಿಸುವ ಸ್ವಾತಂತ್ರ್ಯದಲ್ಲಿ ಆಯೋಗದ ಅಧ್ಯಕ್ಷೆಯು ಲವ್‌ ಜಿಹಾದ್‌ ಎನ್ನುವ ‘ಆಧಾರಹೀನ ಪರಿಕಲ್ಪನೆಯ’ಯ ಮೂಲಕ ಮಧ್ಯಪ್ರವೇಶಿಸಿದ್ದಾರೆ ಎಂದು ಗೋಖಲೆ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ. ಮುಂದುವರೆದು ಅರ್ಜಿಯಲ್ಲಿ ಹೀಗೆ ಹೇಳಲಾಗಿದೆ:

ತಮ್ಮ ಅಧಿಕೃತ ಟ್ವಿಟರ್‌ ಖಾತೆಯಿಂದ ಆಯೋಗದ ಅಧ್ಯಕ್ಷರು ನೀಡಿರುವ ಹೇಳಿಕೆಯು ಅನೌಪಚಾರಿಕ ಸಂವಾದವಾಗುವುದಿಲ್ಲ ಬದಲಿಗೆ ಅಂತರ ಧರ್ಮೀಯ ವಿವಾಹಗಳನ್ನು ರಾಕ್ಷಸೀಕರಿಸುವ ಅಧಿಕೃತ ನೀತಿಯೊಂದರ ಸೂಚನೆಯಾಗಿದೆ.
ಬಾಂಬೆ ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಅರ್ಜಿಯಲ್ಲಿನ ಹೇಳಿಕೆ

ಇಂತಹ ಹಲವು ಸ್ತ್ರೀವಿರೋಧಿ, ಪಕ್ಷಪಾತಿ ಟ್ವೀಟ್‌ಗಳನ್ನು ಶರ್ಮಾ ಅವರು ಮಾಡಿದ್ದು ಈ ಸಂಬಂಧ ಈವರೆಗೆ ಕೇಂದ್ರ ಸರ್ಕಾರವು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗೋಖಲೆ ಅರ್ಜಿಯಲ್ಲಿ ವಿವರಿಸಿದ್ದಾರೆ. ಆಯೋಗದ ಅಧ್ಯಕ್ಷರಾಗಿ, ಜಾತ್ಯತೀತವಾಗಿ, ಪಕ್ಷಪಾತರಹಿತವಾಗಿ ತಮ್ಮ ಕಾರ್ಯವನ್ನು ನಿರ್ವಹಿಸುವಲ್ಲಿ ಮಹಿಳಾ ಆಯೋಗದ ಅಧ್ಯಕ್ಷರು ಸೋತಿದ್ದಾರೆ ಎಂದು ಅವರು ಅರ್ಜಿಯಲ್ಲಿ ಅಪಾದಿಸಿದ್ದಾರೆ.