ತಮ್ಮ ಧರ್ಮವನ್ನು ಪ್ರತಿನಿಧಿಸುವ ಬುರ್ಖಾ, ನಖಾಬ್, ಪದಕ, ಟೊಪ್ಪಿಗೆ ಅಥವಾ ಸ್ಟೋಲ್‌ಗಳಂತಹ ಬಟ್ಟೆ ಧರಿಸುವುದನ್ನು ನಿರ್ಬಂಧಿಸಿ ಮುಂಬೈನ ಕಾಲೇಜೊಂದು ವಿಧಿಸಿದ್ದ ನಿರ್ಬಂಧ ಎತ್ತಿಹಿಡಿದಿದ್ದ ಬಾಂಬೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ .
ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿರುವ ಪೀಠ ಪ್ರಕರಣ ಆಲಿಸಲು ಸಮ್ಮತಿಸಿದ್ದು ಶೀಘ್ರವೇ ವಿಚಾರಣಾ ದಿನಾಂಕ ನಿಗದಿಪಡಿಸುವುದಾಗಿ ಹೇಳಿದೆ.
ಜೂನ್ 4ರ ಹೊಸ ಶೈಕ್ಷಣಿಕ ವರ್ಷದಿಂದ ವಸ್ತ್ರ ಸಂಹಿತೆ ಜಾರಿಗೆ ತರಲು ಚೆಂಬೂರ್ ಟ್ರಾಂಬೆ ಎಜುಕೇಶನ್ ಸೊಸೈಟಿಯ ಎನ್ ಜಿ ಆಚಾರ್ಯ ಮತ್ತು ಡಿ ಕೆ ಮರಾಠೆ ಕಾಲೇಜು ಉದ್ದೇಶಿಸಿದ್ದವು. ಇದನ್ನು ಪ್ರಶ್ನಿಸಿ ಈ ಎರಡೂ ಕಾಲೇಜುಗಳ ಒಂಬತ್ತು ವಿದ್ಯಾರ್ಥಿಗಳು ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಆದರೆ, ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿತ್ತು . ಕಾಲೇಜು ಆಡಳಿತ ಮಂಡಳಿಯ ನಿರ್ದೇಶನ ವಿದ್ಯಾರ್ಥಿಯ ಧರ್ಮ ಬಹಿರಂಗಪಡಿಸುವುದನ್ನು ತಡೆಯುವ ಗುರಿ ಹೊಂದಿದ್ದು ಅವರು ತಮ್ಮ ಶಿಕ್ಷಣದ ಮೇಲೆ ಗಮನಹರಿಸಲು ಅನುವು ಮಾಡಿಕೊಡುತ್ತದೆ ಎಂದು ನ್ಯಾಯಮೂರ್ತಿಗಳಾದ ಎ ಎಸ್ ಚಂದೂರ್‌ಕರ್ ಮತ್ತು ರಾಜೇಶ್ ಪಾಟೀಲ್ ಅವರಿದ್ದ ಪೀಠ ತಿಳಿಸಿತ್ತು.
"ವಿದ್ಯಾರ್ಥಿಗಳ ಉಡುಗೆಯು ಅವನ / ಅವಳ ಧರ್ಮವನ್ನು ಬಹಿರಂಗಪಡಿಸಬಾರದು ಎಂಬುದು ಈ ನಿರ್ಧಾರದ ಹಿಂದಿನ ಉದ್ದೇಶವಾಗಿದೆ. ಇದು ವಿದ್ಯಾರ್ಥಿಗಳು ತಮ್ಮ ಹೆಚ್ಚಿನ ಆಸಕ್ತಿಯನ್ನು ಜ್ಞಾನಾರ್ಜನೆಯತ್ತ ನೆಡುವ ನಿಟ್ಟಿನಲ್ಲಿ ಇರಿಸಿದ ಹೆಜ್ಜೆಯಾಗಿದೆ" ಎಂದು ನ್ಯಾಯಾಲಯ ಹೇಳಿತ್ತು.
ಮತ್ತೊಂದೆಡೆ, ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸದಂತೆ ನಿಷೇಧಿಸಲು ರಾಜ್ಯದ ಸರ್ಕಾರಿ ಕಾಲೇಜುಗಳಿಗೆ ಅಧಿಕಾರ ನೀಡಿ 2022ರಲ್ಲಿ ಕರ್ನಾಟಕ ಸರ್ಕಾರ ಹೊರಡಿಸಿದ್ದ ಆದೇಶದ ಸಿಂಧುತ್ವ ಕುರಿತು ಸುಪ್ರೀಂ ಕೋರ್ಟ್ ಇನ್ನಷ್ಟೇ ಅಂತಿಮ ತೀರ್ಪು ನೀಡಬೇಕಿದೆ.
ಹಿಜಾಬ್ ನಿಷೇಧವನ್ನು ಕರ್ನಾಟಕ ಹೈಕೋರ್ಟ್ ಮಾರ್ಚ್ 2022ರಲ್ಲಿ ಎತ್ತಿ ಹಿಡಿದಿತ್ತು, ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠ ಅಕ್ಟೋಬರ್ 2022ರಲ್ಲಿ ಭಿನ್ನ ತೀರ್ಪು ನೀಡಿತ್ತು. ಹೀಗಾಗಿ ಪ್ರಕರಣವನ್ನು ಸರ್ವೋಚ್ಚ ನ್ಯಾಯಾಲಯದ ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿತ್ತು. ಪ್ರಕರಣ ಸದ್ಯ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ.