ಉಜ್ಜಯಿನಿಯ ತಕಿಯಾ ಮಸೀದಿ ತೆರವು ಕಾರ್ಯಾಚರಣೆ ಎತ್ತಿಹಿಡಿದು ಮಧ್ಯಪ್ರದೇಶ ಹೈಕೋರ್ಟ್ ಈಚೆಗೆ ನೀಡಿದ್ದ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ.
ಮಧ್ಯಪ್ರದೇಶ ಸರ್ಕಾರವು ಪಕ್ಕದ ಮಹಾಕಾಲ ದೇವಸ್ಥಾನದ ವಾಹನ ನಿಲುಗಡೆ ಪ್ರದೇಶವನ್ನು ವಿಸ್ತರಿಸಲು 200 ವರ್ಷಗಳಷ್ಟು ಹಳೆಯದಾದ ಮಸೀದಿಯನ್ನು ಕೆಡವಿದೆ ಎಂದು ಮಸೀದಿಯಲ್ಲಿ ನಿಯಮಿತವಾಗಿ ಪ್ರಾರ್ಥನೆ ಮಾಡುತ್ತಿದ್ದ ಹದಿಮೂರು ನಿವಾಸಿಗಳು ಸಲ್ಲಿಸಿದ್ದ ಅರ್ಜಿಯಲ್ಲಿ , ಆರೋಪಿಸಲಾಗಿದೆ.
ಮಸೀದಿಯನ್ನು 1985ರಲ್ಲಿ ವಕ್ಫ್ ಆಸ್ತಿ ಎಂದು ಗುರುತಿಸಲಾಗಿತ್ತು. ಕಳೆದ 200 ವರ್ಷಗಳಿಂದ ಈ ವರ್ಷದ ಜನವರಿಯವರೆಗೆ ಅದನ್ನು ಸಕ್ರಿಯವಾಗಿ ಬಳಸಲಾಗುತ್ತಿತ್ತು. ನಂತರ ಅದನ್ನು ಕಾನೂನುಬಾಹಿರವಾಗಿ ಮತ್ತು ಮನಸೋಇಚ್ಛೆಯಾಗಿ ಕೆಡವಲಾಗಿದೆ ಎಂದು ಅರ್ಜಿ ಆರೋಪಿಸಿದೆ.
ಹೀಗಾಗಿ ತೆರವು ಕಾರ್ಯಾಚರಣೆ 1991ರ ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯಿದೆ, 1995ರ ವಕ್ಫ್ ಕಾಯಿದೆ (ಈಗಿನ ಏಕೀಕೃತ ವಕ್ಫ್ ನಿರ್ವಹಣೆ, ಸಬಲೀಕರಣ, ದಕ್ಷತೆ ಮತ್ತು ಅಭಿವೃದ್ಧಿ ಕಾಯಿದೆ- 1995), ಮತ್ತು ಭೂಸ್ವಾಧೀನ, ಪುನರ್ವಸತಿ,ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆಯ ಹಕ್ಕು ಕಾಯಿದೆ- 2013ನ್ನು ಉಲ್ಲಂಘಿಸಿದೆ ಎಂದು ಅದು ದೂರಿದೆ.
ಕಟ್ಟಡ ಕೆಡವುವ ಮೊದಲು ರಾಜ್ಯ ಸರ್ಕಾರ ನಡೆಸಿದ ಭೂಸ್ವಾಧೀನ ಪ್ರಕ್ರಿಯೆ ಅಕ್ರಮಗಳಿಂದ ಕೂಡಿದೆ ಇದಲ್ಲದೆ, ಸರ್ಕಾರ " ಸುಳ್ಳು ಸ್ವಾಧೀನ ವಾದ ಸೃಷ್ಟಿಸಲು" ಈ ಪ್ರದೇಶದಲ್ಲಿನ ಅನಧಿಕೃತ ನಿವಾಸಿಗಳು ಮತ್ತು ಅತಿಕ್ರಮಣದಾರರಿಗೆ ಸ್ವಾಧೀನಕ್ಕಾಗಿ ಪರಿಹಾರ ನೀಡಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಈ ಹಿಂದೆ ಮಸೀದಿ ಮರುನಿರ್ಮಿಸುವಂತೆ ಕೋರಿ ಮಧ್ಯಪ್ರದೇಶ ಹೈಕೋರ್ಟ್‌ಗೆ ಮನವಿದಾರರು ಅರ್ಜಿ ಸಲ್ಲಿಸಿದ್ದರೂ ಹೈಕೋರ್ಟ್ ಏಕ ಸದಸ್ಯ ಪೀಠ ಮತ್ತು ವಿಭಾಗೀಯ ಪೀಠ ವಜಾಗೊಳಿಸಿದ್ದವು. ಪರಿಣಾಮ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಮಧ್ಯಂತರ ಪರಿಹಾರವಾಗಿ, ಹೈಕೋರ್ಟ್ ನೀಡಿರುವ ತೀರ್ಪುಗಳನ್ನು ತಡೆಹಿಡಿಯಬೇಕು. ರಾಜ್ಯ ಸರ್ಕಾರ ಸ್ಥಳದಲ್ಲಿ ಯಾವುದೇ ಬದಲಾವಣೆ ಇಲ್ಲವೇ ನಿರ್ಮಾಣ ಕಾರ್ಯ ನಡೆಸದಂತೆ ತಡೆ ನೀಡಬೇಕು. ಜೊತೆಗೆ ತೆರವು ಕಾರ್ಯಾಚರಣೆ ಕುರಿತು ಸ್ವತಂತ್ರ ತನಿಖೆಗೆ ಆದೇಶಿಸಬೇಕು ಎಂದು ಅವರು ಸರ್ವೋಚ್ಚ ನ್ಯಾಯಾಲಯವನ್ನು ಕೋರಿದ್ದಾರೆ.