Rajdeep Sardesai, Supreme Court
Rajdeep Sardesai, Supreme Court 
ಸುದ್ದಿಗಳು

ಪತ್ರಕರ್ತ ರಾಜದೀಪ್ ಸರ್ದೇಸಾಯಿ ವಿರುದ್ಧ ನ್ಯಾಯಾಂಗ ನಿಂದನಾ ಪ್ರಕ್ರಿಯೆ ಆರಂಭಿಸಲು ಸುಪ್ರೀಂ ಕೋರ್ಟ್‌ನಲ್ಲಿ ಮನವಿ

Bar & Bench

ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಿರುದ್ಧದ ನ್ಯಾಯಾಂಗ ನಿಂದನಾ ಪ್ರಕರಣದ ಶಿಕ್ಷೆಯ ಪ್ರಮಾಣದ ತೀರ್ಪು ಮತ್ತು ನ್ಯಾಯಾಂಗಕ್ಕೆ ಸಂಬಂಧಿಸಿದ ವಿಚಾರಗಳನ್ನು ಟ್ವೀಟ್‌ಗಳ ಮೂಲಕ ವಿಮರ್ಶಿಸಿದ್ದ ಹಿರಿಯ ಪತ್ರಕರ್ತ ರಾಜದೀಪ್ ಸರ್ದೇಸಾಯಿ ವಿರುದ್ಧ ನ್ಯಾಯಾಂಗ ನಿಂದನಾ ಪ್ರಕ್ರಿಯೆ ಆರಂಭಿಸಲು ಅರ್ಜಿದಾರರಾದ ಆಸ್ಥಾ ಖುರಾನಾ ಅನುಮತಿ ಕೋರಿದ್ದಾರೆ.

ಭೂಷಣ್ ವಿರುದ್ಧದ ನ್ಯಾಯಾಂಗ ನಿಂದನಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ತೀರ್ಪನ್ನು ಟ್ವೀಟ್ ಮೂಲಕ ಟೀಕಿಸಿದ್ದ 'ಇಂಡಿಯಾ ಟುಡೇ’ ಸುದ್ದಿ ನಿರೂಪಕ ರಾಜದೀಪ್ ಸರ್ದೇಸಾಯಿ ಅವರ ನಡೆ “ಕೀಳು ಪ್ರಚಾರದ ಗೀಳು” ಎಂದು ಅರ್ಜಿಯಲ್ಲಿ ದೂರಲಾಗಿದೆ. ಅಡ್ವೊಕೇಟ್ ಆನ್ ರೆಕಾರ್ಡ್‌ ವಕೀಲರಾದ ಓಂ ಪ್ರಕಾಶ್ ಪರಿಹಾರ್ ಮತ್ತು ದುಷ್ಯಂತ್ ತಿವಾರಿ ಅವರ ಮೂಲಕ ಅಸ್ಥಾ ಖುರಾನಾ ಸುಪ್ರೀಂ ಕೋರ್ಟ್‌ನಲ್ಲಿ ಈ ಅರ್ಜಿ ಸಲ್ಲಿಸಿದ್ದಾರೆ.

ಸರ್ದೇಸಾಯಿ ವಿರುದ್ಧದ ನ್ಯಾಯಾಂಗ ನಿಂದನಾ ಪ್ರಕ್ರಿಯೆ ಆರಂಭಿಸಲು ಸುಪ್ರೀಂ ಕೋರ್ಟ್ ನಿಯಮಗಳ ಅನ್ವಯ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರ ಒಪ್ಪಿಗೆ ಕೋರಿಯೂ ಅರ್ಜಿದಾರರು ಪತ್ರ ಬರೆದಿದ್ದಾರೆ.

ನಿಂದನಾ ಪ್ರಕರಣದಲ್ಲಿ ಭೂಷಣ್‌ಗೆ ₹1 ಜುಲ್ಮಾನೆ ವಿಧಿಸಿದ್ದ ಸುಪ್ರೀಂ ಕೋರ್ಟ್ ತೀರ್ಪನ್ನು ಟೀಕಿಸಿ ಸರ್ದೇಸಾಯಿ ಅವರು ಟ್ವೀಟ್ ಮಾಡಿರುವುದನ್ನು ಅರ್ಜಿದಾರರು ತಮ್ಮ ಆರೋಪಕ್ಕೆ ಪೂರಕವಾಗಿ ಬಳಿಸಿಕೊಂಡಿದ್ದಾರೆ.

ನಿಂದನಾ ಅರ್ಜಿಯಲ್ಲಿ ಸರ್ದೇಸಾಯಿ ಅವರು ಮಾಡಿರುವ ಮತ್ತೊಂದು ಟ್ವೀಟ್‌ನ್ನು ಉಲ್ಲೇಖಿಸಲಾಗಿದೆ. ಇದರಲ್ಲಿ ಸರ್ದೇಸಾಯಿ ಅವರು ವಕೀಲರೊಬ್ಬರನ್ನು ವಕೀಲಿಕೆ ಮಾಡುವುದರಿಂದ ಡಿಬಾರ್ ಮಾಡಲಾಗದು ಎಂದು ಹೇಳಿರುವುದನ್ನು ಉಲ್ಲೇಖಿಸಲಾಗಿದೆ.

ಮೂರನೇ ಟ್ವೀಟ್‌ನಲ್ಲಿ ಭೂಷಣ್ ಪ್ರಕರಣದ ತೀರ್ಪನ್ನು ಕಾಶ್ಮೀರದಲ್ಲಿ ಬಂಧನಕ್ಕೊಳಗಾಗಿದ್ದವರು ಸಲ್ಲಿಸಿದ್ದ ಬಾಕಿ ಉಳಿದಿರುವ ಹೇಬಿಯಸ್ ಕಾರ್ಪಸ್ ಅರ್ಜಿಗಳಿಗೆ ಹೋಲಿಕೆ ಮಾಡಿದ್ದ ಸರ್ದೇಸಾಯಿ ಅವರ ಅಭಿಪ್ರಾಯವನ್ನು ಉಲ್ಲೇಖಿಸಲಾಗಿದೆ.

ಮಗದೊಂದು ಟ್ವೀಟ್‌ನಲ್ಲಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರ ನಡತೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.

ರಾಜಸ್ಥಾನದ ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಇತ್ತೀಚೆಗೆ “ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಸಾಧಾರಣ ಬಹುಮುಖಿ ಪ್ರತಿಭಾವಂತ ಎಂದು ಹೊಗಳಿದ್ದ ನಿವೃತ್ತ ನ್ಯಾಯಮೂರ್ತಿ ಅರುಣ್ ಮಿಶ್ರಾ” ಅವರನ್ನು ಇಲ್ಲೇಖಿಸಿ ಸರ್ದೇಸಾಯಿ ಟ್ವೀಟ್ ಮಾಡಿದ್ದನ್ನು ನಿಂದನಾ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಸದರಿ ಟ್ವೀಟನ್ನು ಬಳಿಕ ಅಳಿಸಿ ಹಾಕಲಾಗಿತ್ತು. ಆದರೆ, ಅದು ಮಾಧ್ಯಮದಲ್ಲಿ ವ್ಯಾಪಕ ಪ್ರಚಾರ ಪಡೆದುಕೊಂಡಿತ್ತು. ಇದು “ನ್ಯಾಯಾಂಗದ ಕ್ರಮಬದ್ಧತೆ”ಯ ಪ್ರಶ್ನೆ ಹುಟ್ಟುಹಾಕಿತ್ತು ಎಂದು ದೂರುದಾರರು ಆರೋಪಿಸಿದ್ದಾರೆ.

ಅಯೋಧ್ಯಾ ಭೂವಿವಾದದ ತೀರ್ಪು ಪ್ರಕಟಿಸುವುದಕ್ಕೂ ಮುನ್ನ ಸುಪ್ರೀಂ ಕೋರ್ಟ್‌‌ನ ಅಂದಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕರ ಜೊತೆ ಸಭೆ ನಡೆಸಿದ್ದನ್ನು ಟ್ವೀಟ್ ಮೂಲಕ ರಾಜದೀಪ್ ಸರ್ದೇಸಾಯಿ ಪ್ರಶ್ನಿಸಿದ್ದರು. ಈ ಟ್ವೀಟನ್ನು ಅರ್ಜಿದಾರರು ಪ್ರಶ್ನಿಸಿದ್ದರು.

ಪತ್ರಕರ್ತ ರಾಜದೀಪ್ ಸರ್ದೇಸಾಯಿ ಅವರ ಈ ಎಲ್ಲಾ ಟ್ವೀಟ್‌ಗಳು ಜನರ ಮನದಲ್ಲಿ ನ್ಯಾಯಾಲಯದ ಬಗ್ಗೆ ನಂಬಿಕೆ ನಾಶಪಡಿಸುವ ಮತ್ತು ವಿವಾದಾತ್ಮಕಗೊಳಿಸುವಂತಿವೆ ಎಂದು ದೂರುದಾರರು ಆರೋಪಿಸಿದ್ದಾರೆ. ಮುಂದುವರೆದು ಅರ್ಜಿದಾರರು ಸರ್ದೇಸಾಯಿ ಅವರನ್ನು “ನ್ಯಾಯಾಂಗ ನಿಂದನಾ ಚಾಳಿ” ಹೊಂದಿರುವಾತ ಎಂದಿದ್ದಾರೆ.

ರಾಜದೀಪ್‌ ಸರ್ದೇಸಾಯಿ ಅವರು “ಉದ್ದೇಶಪೂರ್ವಕವಾಗಿ ನ್ಯಾಯಾಲಯದ ಅದೇಶ ಮತ್ತು ತೀರ್ಪುಗಳಿಗೆ ಅವಿಧೇಯತೆ” ತೋರಿದ್ದಾರೆ ಎಂದು ಆರೋಪಿಸಿ ನ್ಯಾಯಾಂಗ ನಿಂದನಾ ಕಾಯಿದೆ-1971ರ ಸೆಕ್ಷನ್ 2(1)(c)ರ ಅಡಿ ನ್ಯಾಯಾಂಗ ನಿಂದನಾ ಪ್ರಕ್ರಿಯೆ ಆರಂಭಿಸಲು ಅನುಮತಿ ಕೋರಿದ್ದಾರೆ.