ಸುದ್ದಿಗಳು

ಅಗ್ನಿಪಥ್ ಯೋಜನೆ ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆ: ಎಸ್ಐಟಿ ತನಿಖೆ ಕೋರಿ ಸುಪ್ರೀಂ ಕೋರ್ಟ್‌ಗೆ ಮನವಿ

Bar & Bench

ನಾಲ್ಕು ವರ್ಷಗಳ ಅವಧಿಗೆ ಯುವಕರನ್ನು ಸೇನೆಗೆ ಸೇರಿಸಿಕೊಳ್ಳುವ ಅಗ್ನಿಪಥ್‌ ಯೋಜನೆ ವಿರುದ್ಧ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆ ಬಗ್ಗೆ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ತನಿಖೆ ನಡೆಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ಪ್ರಕರಣವನ್ನು ತುರ್ತಾಗಿ ಪಟ್ಟಿ ಮಾಡುವಂತೆ ಕೋರಿ ಮಂಗಳವಾರ ನ್ಯಾಯಮೂರ್ತಿಗಳಾದ ಸಿ ಟಿ ರವಿಕುಮಾರ್ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಪ್ರಕರಣವನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರ ಮುಂದಿರಿಸುವಂತೆ ಪೀಠವು ನಿರ್ದೇಶಿಸಿತು.

ಹಿಂಸಾಚಾರದ ಬಗ್ಗೆ ಎಸ್‌ಐಟಿ ತನಿಖೆ ಕೋರಿರುವುದರ ಜೊತೆಗೆ, ಈ ಯೋಜನೆಯಿಂದ ರಾಷ್ಟ್ರೀಯ ಭದ್ರತೆ ಮತ್ತು ಸೇನೆಯ ಮೇಲೆ ಉಂಟಾಗುವ ಪ್ರಭಾವವನ್ನು ಅಧ್ಯಯನ ಮಾಡಲು ನ್ಯಾಯಾಂಗ ಸಮಿತಿ ರಚಿಸುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ.

ಈ ಮಧ್ಯೆ ಯೋಜನೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ವಕೀಲ ಎಂ ಎಲ್‌ ಶರ್ಮಾ ಅವರು ನಿನ್ನೆ ಅರ್ಜಿಯೊಂದನ್ನು ಸಲ್ಲಿಸಿದ್ದಾರೆ. ರಕ್ಷಣಾ ಸಚಿವಾಲಯ ಯೋಜನೆ ಸಂಬಂಧ ಜೂನ್ 14, 2022ರಂದು ಹೊರಡಿಸಿದ್ದ ಅಧಿಸೂಚನೆ ರದ್ದುಗೊಳಿಸುವಂತೆ ಅವರು ವಿನಂತಿಸಿದ್ದಾರೆ.