ತಾವು ಬಾಂಗ್ಲದೇಶದಿಂದ ಅಕ್ರಮವಾಗಿ ಭಾರತಕ್ಕೆ ಬಂದ ವಿದೇಶಿಗರು ಎಂಬ ದೃಢೀಕರಿಸದ ಆರೋಪ ಆಧರಿಸಿ ಪಶ್ಚಿಮ ಬಂಗಾಳ ಮುಸ್ಲಿಂ ವಲಸೆ ಕಾರ್ಮಿಕರನ್ನು ಬಂಧಿಸಲಾಗುತ್ತಿದೆ ಎಂಬ ದೂರಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಗುರುವಾರ ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರಗಳ ಪ್ರತಿಕ್ರಿಯೆ ಕೇಳಿದೆ [ ಪಶ್ಚಿಮ ಬಂಗಾಳ ವಲಸೆ ಕಾರ್ಮಿಕರ ಕಲ್ಯಾಣ ಮಂಡಳಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ವಿದೇಶಿಯರು ಅಕ್ರಮವಾಗಿ ಭಾರತಕ್ಕೆ ನುಸುಳುವ ಅಪಾಯದ ವಾಸ್ತವಾಂಶವನ್ನು ನ್ಯಾಯಾಲಯ ನಿರ್ಲಕ್ಷಿಸಲಾಗದು ಎಂದು ಮೌಖಿಕವಾಗಿ ತಿಳಿಸಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠ ವಲಸೆ ಕಾರ್ಮಿಕರ ಮೂಲ ಸ್ಥಳ ಪರಿಶೀಲಿಸಲು ಮುಂದಾಗಬೇಕು ಎಂದಿತು.
"ನಾವು ನೆಲದ ವಾಸ್ತವಗಳನ್ನು ಕಡೆಗಣಿಸಲು ಸಾಧ್ಯವಿಲ್ಲ. ಯಾರಾದರೂ ನುಸುಳುಕೋರರಾಗಿದ್ದು, ಅವರು ಅಕ್ರಮವಾಗಿ ಪ್ರವೇಶಿಸಿದರೆ? ಆ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುವುದು? ಬಂಧಿಸದೆ ಹೋದರೆ ಅವರು ಕಣರೆಯಾಗುತ್ತಾರೆ ಎಂಬುದು ಸ್ಪಷ್ಟ. ಮೂಲ ಕುರಿತಾದ ಗುರುತಿನ ಚೀಟಿಗಳನ್ನು ಬೇರೊಂದು ರಾಜ್ಯದ ಅಧಿಕಾರಿಗಳು ಸ್ವೀಕರಿಸಬಹುದು” ಎಂದಿತು.
ಮೇ 2025ರಲ್ಲಿ ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ ಪತ್ರ ಶಂಕಿತ ಅಕ್ರಮ ವಲಸಿಗರ ಅಂತರರಾಜ್ಯ ಪರಿಶೀಲನೆ ಮತ್ತು ಬಂಧನಕ್ಕೆ ಅಧಿಕಾರ ನೀಡಿದೆ. ಬಂಗಾಳಿ ಭಾಷಿಕ ಮುಸ್ಲಿಮರನ್ನು ಧರ್ಮದ ಕಾರಣಕ್ಕಾಗಿಯೋ ಅಥವಾ ಅವರು ಬಂಗಾಳಿ ಮತಾನಾಡುತ್ತಾರೆ ಎಂಬ ಕಾರಣಕ್ಕಾಗಿಯೋ ಅವರನ್ನು ಬೇರೆ ರಾಜ್ಯಗಳು ಬಂಧಿಸುತ್ತಿವೆ. ಇದು ಸಂವಿಧಾನದ 21ನೇ ವಿಧಿಯಡಿ ಒದಗಿಸಲಾದ ಹಕ್ಕುಗಳ ಉಲ್ಲಂಘನೆ ಎಂದು ಪಶ್ಚಿಮ ಬಂಗಾಳ ವಲಸೆ ಕಾರ್ಮಿಕರ ಕಲ್ಯಾಣ ಮಂಡಳಿ ವಕೀಲ ಕುನಾಲ್ ಚಟರ್ಜಿ ಅವರ ಮೂಲಕ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ಕೇಂದ್ರ ಸರ್ಕಾರ ತಾನು ನೀಡಿರುವ ನಿರ್ದೇಶನ ಹಿಂಪಡೆಯಬೇಕು ಬೇರೆ ರಾಜ್ಯಗಳು ಬಂಗಾಳಿ ವಲಸೆ ಕಾರ್ಮಿಕರನ್ನು ಅಕ್ರಮವಾಗಿ ಬಂಧಿಸದಂತೆ ತಡೆ ನೀಡಬೇಕು. ವಿದೇಶಿಯರೆಂಬ ಅನುಮಾನದ ಮೇಲೆ ಈಗಾಗಲೇ ಬಂಧನಕ್ಕೊಳಗಾಗಿರುವ ಅಂತಹ ವಲಸೆ ಕಾರ್ಮಿಕರನ್ನು ಬಿಡುಗಡೆ ಎಂದು ಅದು ನ್ಯಾಯಾಲಯವನ್ನು ಕೋರಿತ್ತು.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಪ್ರಶಾಂತ್ ಭೂಷಣ್ ರಾಜ್ಯ ಸರ್ಕಾರಗಳು ಬಂಗಾಳಿ ಮುಸ್ಲಿಮರನ್ನು ಯಾದೃಚ್ಛಿಕವಾಗಿ ಬಂಧಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಈ ಹಂತದಲ್ಲಿ ನ್ಯಾಯಾಲಯ, ವಲಸೆ ಕಾರ್ಮಿಕರು ಭಾರತೀಯರು ಎಂಬುದನ್ನು ಸುಲಭವಾಗಿ ದೃಢೀಕರಿಸುವುದಕ್ಕಾಗಿ ತವರು ರಾಜ್ಯವನ್ನು ಸುಲಭವಾಗಿ ಪರಿಶೀಲಿಸಲು ವ್ಯವಸ್ಥೆ ಜಾರಿಗೆ ತರಬೇಕು ಎಂದಿತು.
ಅಲ್ಲದೆ ಕೇಂದ್ರ ಸರ್ಕಾರ, ಓಡಿಶಾ, ರಾಜಸ್ಥಾನ, ಮಹಾರಾಷ್ಟ್ರ, ದೆಹಲಿ, ಬಿಹಾರ, ಉತ್ತರ ಪ್ರದೇಶ, ಛತ್ತೀಸ್‌ಗಢ, ಹರಿಯಾಣ ಹಾಗೂ ಪಶ್ಚಿಮ ಬಂಗಾಳ ಸೇರಿ 9 ರಾಜ್ಯಗಳಿಗೆ ನೋಟಿಸ್ ನೀಡಿದ ಅದು ಅರ್ಜಿಗೆ ಪ್ರತಿಕ್ರಿಯಿಸುವಂತೆ ಸೂಚಿಸಿತು. ಪ್ರಕರಣದ ಮುಂದಿನ ವಿಚಾರಣೆ 2025ರ ಆಗಸ್ಟ್ 25ರಂದು ನಡೆಯಲಿದೆ.
ಬಂಗಾಳಿ ಮಾತನಾಡುವ ಮುಸ್ಲಿಂ ವಲಸೆ ಕಾರ್ಮಿಕರನ್ನು ಬಂಧಿಸದಂತೆ ಮಧ್ಯಂತರ ಆದೇಶ ನೀಡುವಂತೆ ಭೂಷಣ್ ಮನವಿ ಮಾಡಿದರಾದರೂ ಸರ್ಕಾರಿ ಅಧಿಕಾರಿಗಳ ವಾದ ಆಲಿಸದೆ ತಾನು ಮಧ್ಯಂತರ ಆದೇಶ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿತು. ಏಕಪಕ್ಷೀಯವಾಗಿ ತಡೆ ನೀಡಿದರೆ ನಿಜವಾದ ಅಕ್ರಮ ವಲಸಿಗರ ವಿರುದ್ಧ ಕ್ರಮ ಕೈಗೊಳ್ಳಲು ಅಡ್ಡಿಯಾಗಬಹುದು ಎಂದು ಅದು ಹೇಳಿತು.