ಭಾರತದಲ್ಲಿ ವಿಚಾರಣಾಧೀನ ಕೈದಿಗಳಿಗೆ ಮತದಾನದ ಹಕ್ಕು ನಿರಾಕರಿಸಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಅರ್ಜಿ ಸಲ್ಲಿಸಲಾಗಿದೆ [ ಸುನೀತಾ ಶರ್ಮಾ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಶುಕ್ರವಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ಭಾರತೀಯ ಚುನಾವಣಾ ಆಯೋಗದ (ಇಸಿಐ) ಪ್ರತಿಕ್ರಿಯೆಯನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ವಿನೋದ್ ಚಂದ್ರನ್ ಅವರಿದ್ದ ಪೀಠ ಕೇಳಿದೆ.
1951ರ ಪ್ರಜಾ ಪ್ರಾತಿನಿಧ್ಯ ಕಾಯಿದೆಯ ಸೆಕ್ಷನ್ 62 (5)ರ ಅಡಿಯಲ್ಲಿ ಕೈದಿಗಳು ಮತದಾನ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸುವುದು ನ್ಯಾಯವಿರೋಧಿಯಾದುದು ಎಂದು ದೂರಿ ವಕೀಲೆ ಸುನೀತಾ ಶರ್ಮಾ ಅವರು ವಕೀಲ ಪ್ರಶಾಂತ್ ಭೂಷಣ್ ಅವರ ಮೂಲಕ ಮನವಿ ಸಲ್ಲಿಸಿದ್ದಾರೆ.
ಯಾವುದೇ ವ್ಯಕ್ತಿ ಜೈಲಿನಲ್ಲಿ ಬಂಧಿತನಾಗಿದ್ದರೆ ಆತನಿಗೆ ವಿಧಿಸಿರುವುದು ಜೈಲು ಶಿಕ್ಷೆಯಾಗಿರಲಿ ತಾತ್ಕಾಲಿಕ ಬಂಧನವಾಗಿರಲಿ ಅಥವಾ ಇನ್ನಾವುದೇ ಶಿಕ್ಷೆಯಾಗಿರಲಿ ಅಥವಾ ಕಾನೂನುಬದ್ಧವಾಗಿ ಪೊಲೀಸರ ವಶದಲ್ಲಿದ್ದರೂ ಕೂಡ ಅವರು ಯಾವುದೇ ಚುನಾವಣೆಯಲ್ಲಿ ಮತ ಚಲಾಯಿಸುವಂತಿಲ್ಲ ಎಂದು ಸೆಕ್ಷನ್ ಹೇಳುತ್ತದೆ. ಆದರೆ ಅಪರಾಧಕ್ಕೆ ಶಿಕ್ಷೆಗೊಳಗಾಗದ ಕೈದಿಗಳಿಗೂ ಮತದಾನವನ್ನು ನಿರಾಕರಿಸಿರುವುದು ನ್ಯಾಯೋಚಿತವಲ್ಲ ಎಂದು ಸುನೀತಾ ವಾದಿಸಿದ್ದಾರೆ.
ಕಾಯಿದೆಯ ಸೆಕ್ಷನ್‌ನಲ್ಲಿ ಸ್ಪಷ್ಟತೆಯ ಕೊರತೆ ಇದ್ದು ಅನ್ಯಾಯದಿಂದ ಕೂಡಿದೆ. ಕಾನೂನಾತ್ಮಕ ಆಡಳಿತ ಇರುವೆಡೆ ಸಾರ್ವಜನಿಕ ವಿಶ್ವಾಸಕ್ಕೆ ಇದು ಧಕ್ಕೆ ಉಂಟುಮಾಡುತ್ತದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಭಾರತದಲ್ಲಿ ಶೇ 75%ಕ್ಕೂ ಬಂಧಿತರು ವಿಚಾರಣಾಧೀನ ಕೈದಿಗಳಾಗಿದ್ದಾರೆ. ಇವರಲ್ಲಿ ಕೆಲವರು ದಶಕಗಳ ಕಾಲ ಕಾರಾಗೃಹದಲ್ಲಿದ್ದಾರೆ. ಶೇ . 80 ರಿಂದ 90ರಷ್ಟು ಪ್ರಕರಣಗಳಲ್ಲಿ ಇವರು ನಿರ್ದೋಷಿ ಎಂದು ಸಾಬೀತಾಗಿ ಬಿಡುಗಡೆಯಾಗುತ್ತಾರೆ. ಆದರೂ ಅವರಿಗೆ ಮತದಾನದ ಮೂಲಭೂತ ಹಕ್ಕನ್ನು ನಿರಾಕರಿಸಲಾಗುತ್ತದೆ ಎಂದು ಅರ್ಜಿ ಆತಂಕ ವ್ಯಕ್ತಪಡಿಸಿದೆ.
ಕಾಯಿದೆಯ ಸೆಕ್ಷನ್ 8ರಲ್ಲಿ ಗಂಭೀರ ಅಪರಾಧ ಎಸಗದಿದ್ದರೆ ಕ್ರಿಮಿನಲ್ ಅಪರಾಧಗಳಲ್ಲಿ ಶಿಕ್ಷೆಗೊಳಗಾದವರು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿದೆ. ಹೀಗಿರುವಾಗ ವಿಚಾರಣಾಧೀನ ಕೈದಿಗಳಿಗೆ ಮತದಾನದ ಹಕ್ಕನ್ನು ಏಕೆ ನಿರಾಕರಿಸಲಾಗುತ್ತದೆ ಎಂದು ಅರ್ಜಿದಾರರು ಪ್ರಶ್ನಿಸಿದ್ದಾರೆ.
ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು ಇತ್ಯಾದಿಗಳಲ್ಲಿ ಇರುವವರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಅನುವು ಮಾಡಿಕೊಡಲು ಇಸಿಐ ಈ ಹಿಂದೆ "ಮೊಬೈಲ್ ವೋಟಿಂಗ್" ಯೋಜನೆ ಕೈಗೆತ್ತಿಕೊಂಡಿತ್ತು. ಇದೇ ವಿಧಾನ ಬಳಸಿ ವಿಚಾರಣಾಧೀನ ಕೈದಿಗಳ ಮತದಾನಕ್ಕೂ ಅವಕಾಶ ಕಲ್ಪಿಸಬೇಕು ಎಂದು ಅರ್ಜಿ ಹೇಳಿದೆ. ದೇಶದಲ್ಲಿ 1,350 ಜೈಲುಗಳಿದ್ದು ಅಲ್ಲಿಯೇ ಮತದಾನ ಕೇಂದ್ರ ಸ್ಥಾಪಿಸಬೇಕು ಎಂದು ಕೂಡ ಹೇಳಿರುವ ಅದು ಅಂಚೆ ಮತದಾನದತ್ತಲೂ ಗಮನ ಸೆಳೆದಿದೆ.
ಮತದಾನದ ಹಕ್ಕು ಸಂವಿಧಾನದ ಅಡಿಯಲ್ಲಿ ಮೂಲಭೂತ ಹಕ್ಕಲ್ಲ, ಶಾಸನಬದ್ಧ ಹಕ್ಕು ಎಂದು ಅನುಕೂಲ್ ಚಂದ್ರ ಪ್ರಧಾನ್ ಮತ್ತು ಭಾರತ ಒಕ್ಕೂಟ ಪ್ರಕರಣದಲ್ಲಿ ಕಾಯಿದೆಯ ಸೆಕ್ಷನ್ 62 (5) ರ ಸಿಂಧುತ್ವ ಎತ್ತಿಹಿಡಿದಿತ್ತು. ಆದರೆ ಮತದಾನದ ಹಕ್ಕು ಕೇವಲ ಸಾಂವಿಧಾನಿಕ ಹಕ್ಕಲ್ಲ, ಬದಲಿಗೆ ಸಂವಿಧಾನದ ಭಾಗ III ರ ಅಡಿಯಲ್ಲಿ ಬರುತ್ತದೆ, ಅಂದರೆ ಅದು ಮೂಲಭೂತ ಹಕ್ಕಿಗೆ ಸಮ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ಆದ್ದರಿಂದ ವಿಚಾರಣಾಧೀನ ಕೈದಿಗಳಿಗೆ ಮತದಾನದ ಹಕ್ಕು ನೀಡುವುದಕ್ಕಾಗಿ ಮಾರ್ಗಸೂಚಿಗಳನ್ನು ಹೊರಡಿಸಬೇಕು ಎಂದು ಅರ್ಜಿ ಕೋರಿದೆ.