High Court of Karnataka  
ಸುದ್ದಿಗಳು

ದೃಷ್ಟಿದೋಷ ಇರುವವರಿಗೆ ಮೀಸಲಾತಿ ಕಲ್ಪಿಸಲು ವಿಫಲ; ಹೈಕೋರ್ಟ್‌ನಲ್ಲಿ ಸಿವಿಲ್ ನ್ಯಾಯಾಧೀಶರ ನೇಮಕಾತಿ ಅಧಿಸೂಚನೆ ಪ್ರಶ್ನೆ

ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ವಿಭಾಗೀಯ ಪೀಠವು ಹೈಕೋರ್ಟ್‌ನ ಆಡಳಿತ ವಿಭಾಗ ಮತ್ತು ರಾಜ್ಯ ಸರ್ಕಾರಕ್ಕೆ ಸೋಮವಾರ ನೋಟಿಸ್‌ ಜಾರಿ ಮಾಡಿದೆ.

Bar & Bench

ಕರ್ನಾಟಕದಲ್ಲಿ 94 ಸಿವಿಲ್‌ ನ್ಯಾಯಾಧೀಶರ ಹುದ್ದೆ ನೇಮಕಾತಿಗೆ ಹೊರಡಿಸಿರುವ ಅಧಿಸೂಚನೆಯಲ್ಲಿ ಪೂರ್ಣ ದೃಷ್ಟಿದೋಷ ಮತ್ತು ಅಲ್ಪ ದೃಷ್ಟಿದೋಷ ಹೊಂದಿರುವ ಅಭ್ಯರ್ಥಿಗಳಿಗೆ ಹುದ್ದೆಗಳನ್ನು ಮೀಸಲಿಡಲಾಗಿಲ್ಲ ಎಂಬುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮನವಿಗೆ ಸಂಬಂಧಿಸಿದಂತೆ ಸೋಮವಾರ ಹೈಕೋರ್ಟ್‌ನ ಆಡಳಿತ ವಿಭಾಗ ಮತ್ತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದ್ದು, ಪ್ರತಿಕ್ರಿಯಿಸುವಂತೆ ಆದೇಶಿಸಿದೆ.

ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ವಿಭಾಗೀಯ ಪೀಠವು ರಿಜಿಸ್ಟ್ರಾರ್‌ ಜನರಲ್‌ ಮತ್ತು ಸಿವಿಲ್‌ ನ್ಯಾಯಾಧೀಶರ ನೇಮಕಾತಿ ಸಮಿತಿ (ಹೈಕೋರ್ಟ್‌ ಸಮಿತಿ), ರಾಜ್ಯ ಸರ್ಕಾರ ಮತ್ತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ವಿಭಾಗಕ್ಕೆ ನೋಟಿಸ್‌ ಜಾರಿ ಮಾಡಿದೆ.

94 ಸಿವಿಲ್‌ ನ್ಯಾಯಾಧೀಶರ ಹುದ್ದೆ ನೇಮಕಾತಿಗೆ ಹೊರಡಿಸಿರುವ ಅಧಿಸೂಚನೆಯಲ್ಲಿ ಹೈಕೋರ್ಟ್‌ ಸಮಿತಿಯು ವಿಶೇಷ ಚೇತನರ ಹಕ್ಕುಗಳ ಕಾಯಿದೆ 2016ರ ನಿಬಂಧನೆಗಳನ್ನು ಉಲ್ಲಂಘಿಸಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಶೇ. 4ರಷ್ಟು ಹುದ್ದೆಗಳನ್ನು ವಿಶೇಷ ಚೇತನರಿಗೆ ಮೀಸಲಿಡಬೇಕಿದ್ದು, ಈ ಪೈಕಿ 1/4ನೇ ಭಾಗದಷ್ಟು ಸೀಟುಗಳನ್ನು ಅಂಧತ್ವ ಮತ್ತು ಕಡಿಮೆ ದೃಷ್ಟಿದೋಷ ಇರುವವರಿಗೆ ಮೀಸಲಿಡಬೇಕು ಎಂದು 2016ರ ಕಾಯಿದೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಗಾದೆ ಎತ್ತಲಾಗಿದೆ.

ಮೂಳೆ ಮತ್ತು ಕೀಲುಗಳ ಸಮಸ್ಯೆಗಳನ್ನು ಹೊಂದಿರುವ ವಿಶೇಷ ಚೇತನರಿಗೆ ಮಾತ್ರ ಶೇ. 1ರಷ್ಟು ಹುದ್ದೆಗಳನ್ನು ಸಿವಿಲ್‌ ನ್ಯಾಯಾಧೀಶರ ನೇಮಕಾತಿಯಲ್ಲಿ ಮೀಸಲಿಡಲಾಗಿದೆಯೇ ವಿನಾ ಅಂಧತ್ವ ಮತ್ತು ಕಡಿಮೆ ದೃಷ್ಟಿದೋಷ ಇರುವವರಿಗೆ ಯಾವುದೇ ಮೀಸಲಾತಿ ಕಲ್ಪಿಸಲಾಗಿಲ್ಲ ಎಂದು ಅರ್ಜಿದಾರರು ಎತ್ತಿ ತೋರಿದ್ದಾರೆ.

“ಒಂದನೇ ಪ್ರತಿವಾದಿಯು ಶೇ. 1ರಷ್ಟು ಹುದ್ದೆಗಳನ್ನು ಮೂಳೆ ಮತ್ತು ಕೀಲು ಸಮಸ್ಯೆ ಇರುವ ವಿಶೇಷಚೇತನರಿಗೆ ಮೀಸಲಿಟ್ಟಿದ್ದು, ಅಂಧತ್ವ ಮತ್ತು ಕಡಿಮೆ ದೃಷ್ಟಿದೋಷ ಹೊಂದಿರುವ ಅಭ್ಯರ್ಥಿಗಳಿಗೆ ಯಾವುದೇ ಮೀಸಲಾತಿ ಕಲ್ಪಿಸಿಲ್ಲ. ಈ ಹುದ್ದೆಗಳಿಗೆ ಅವರು ಅರ್ಹರು ಎಂದು ಕೇಂದ್ರ ಸರ್ಕಾರದ ತಜ್ಞರ ಸಮಿತಿ ಹೇಳಿದ್ದರೂ ಹೈಕೋರ್ಟ್‌ ಆಡಳಿತ ವಿಭಾಗದ ನಿರ್ಧಾರವು ಅಸಮಂಜಸವಾಗಿದೆ” ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಅಂಧತ್ವ ಮತ್ತು ಕಡಿಮೆ ದೃಷ್ಟಿದೋಷ ಹೊಂದಿರುವ ಅಭ್ಯರ್ಥಿಗಳು ಸಿವಿಲ್‌ ನ್ಯಾಯಾಧೀಶರ ಹುದ್ದೆಗೆ ಪರಿಗಣಿಸಲು ಅರ್ಹರಾಗಿದ್ದಾರೆ ಎಂದು ಅರ್ಜಿದಾರರ ಪರ ಹಿರಿಯ ವಕೀಲೆ ಜಯ್ನಾ ಕೊಠಾರಿ ಹೇಳಿದರು. ಎ ಗುಂಪಿಗೆ ಸೇರುವ ಸಿವಿಲ್‌ ನ್ಯಾಯಾಧೀಶರ ಹುದ್ದೆಯು ಅಂಧರು ಮತ್ತು ಕಡಿಮೆ ದೃಷ್ಟಿದೋಷ ಹೊಂದಿರುವವರಿಗೆ ಅನ್ವಯಿಸುತ್ತದೆ ಎಂದು ಕೇಂದ್ರ ಸರ್ಕಾರವು ಪ್ರಸಕ್ತ ವರ್ಷದ ಜನವರಿ 4ರಂದು ಹೊರಡಿಸಿರುವ ಅಧಿಸೂಚನೆ ಆಧರಿಸಿ ಅವರು ವಾದಿಸಿದರು. ಇದರ ಜೊತೆಗೆ ತಮ್ಮ ವಾದಕ್ಕೆ ಕೊಠಾರಿ ಅವರು ವಿಕಾಸ್‌ ಕುಮಾರ್‌ ವರ್ಸಸ್‌ ಯುಪಿಎಸ್‌ಸಿ ಮತ್ತು ಇತರರು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪನ್ನು ಉಲ್ಲೇಖಿಸಿದ್ದಾರೆ.

ಪ್ರತಿವಾದಿಗಳಿಗೆ ನೋಟಿಸ್‌ ಜಾರಿಗೊಳಿಸುವಾಗ ನ್ಯಾಯಾಲಯವು ಅಧಿಸೂಚನೆಗೆ ಸಂಬಂಧಿಸಿದಂತೆ ಅರ್ಜಿ ಆಹ್ವಾನದ ದಿನಾಂಕ ಮುಗಿದಿದೆ ಎಂದಿದೆ. “ದಿನಾಂಕವನ್ನು ವಿಸ್ತರಿಸಲಾಗದು… ಹಾಗೆ ಮಾಡಿದರೆ ಅದು ಮಲಿಕ್‌ ಮಜರ್‌ ಸುಲ್ತಾನ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪಿಗೆ ವಿರುದ್ಧವಾಗಲಿದೆ. ಎಲ್ಲಾ ನೇಮಕಾತಿಗಳ ಮೇಲೂ ಸುಪ್ರೀಂ ಕೋರ್ಟ್‌ ನಿಗಾ ಇಡಲಿದೆ. ಕೆಲವು ಪ್ರಕರಣಗಳಲ್ಲಿ ರಿಜಿಸ್ಟ್ರಾರ್‌ ಜನರಲ್‌ಗಳಿಗೆ ಸುಪ್ರೀಂ ಕೋರ್ಟ್‌ ಸಮನ್ಸ್‌ ನೀಡಿದ್ದೂ ಇದೆ. ಹಿಂದೆ ಏನಾಗಿದೆ ಎಂದು ನಿಮಗೆ ಗೊತ್ತಿದೆ” ಎಂದು ಪೀಠ ಹೇಳಿದೆ.

ಅಂಧತ್ವ ಮತ್ತು ಕಡಿಮೆ ದೃಷ್ಟಿದೋಷ ಹೊಂದಿರುವವರು ತಂತ್ರಜ್ಞಾನದ ಸಹಾಯದಿಂದ ಇತರರಂತೆ ಹಲವು ಜವಾಬ್ದಾರಿಗಳನ್ನು ನಿಭಾಯಿಸಲು ಅರ್ಹರಾಗಿದ್ದಾರೆ ಎಂಬುದನ್ನು ಅರಿಯುವಲ್ಲಿ ಪ್ರತಿವಾದಿಗಳು ವಿಫಲವಾಗಿದ್ದಾರೆ ಎಂದು ಅರ್ಜಿದಾರರು ಹೇಳಿದ್ದಾರೆ. ಈ ಎಲ್ಲಾ ಆಧಾರಗಳ ಹಿನ್ನೆಲೆಯಲ್ಲಿ ಅಧಿಸೂಚನೆ ರದ್ದುಗೊಳಿಸುವಂತೆ ಅರ್ಜಿದಾರರು ಮನವಿ ಮಾಡಿದ್ದಾರೆ.

ಈಗ 94 ಸಿವಿಲ್‌ ನ್ಯಾಯಾಧೀಶರ ಹುದ್ದೆಗೆ ಅಧಿಸೂಚನೆ ಹೊರಡಿಸಿರುವುದರಲ್ಲಿ ಶೇ. 4ರಷ್ಟು ಮೀಸಲಾತಿ ಕಲ್ಪಿಸಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡುವಂತೆಯು ಮನವಿಯಲ್ಲಿ ಕೋರಲಾಗಿದೆ. ಜೂನ್‌ 28ಕ್ಕೆ ವಿಚಾರಣೆ ಮುಂದೂಡಲಾಗಿದೆ.