ʼಪ್ರಚಾರ ಹಿತಾಸಕ್ತಿ ಮನವಿʼ ಎಂದು ರಾಜಕಾರಣಿಗಳಿಗೆ ತರಾಟೆ; ಹಿರಿಯ ಕಾಂಗ್ರೆಸ್‌ ನಾಯಕರ ಮನವಿ ವಜಾಗೊಳಿಸಿದ ಹೈಕೋರ್ಟ್‌

ವಿಧಾನ ಪರಿಷತ್‌ ವಿಪಕ್ಷ ನಾಯಕ ಎಸ್‌ ಆರ್‌ ಪಾಟೀಲ್‌ ಹಾಗೂ ಹಿರಿಯ ಕಾಂಗ್ರೆಸ್‌ ನಾಯಕ ಎಚ್‌ ಕೆ ಪಾಟೀಲ್‌ ಸಲ್ಲಿಸಿದ್ದ ಪಿಐಎಲ್‌ಗಳನ್ನು ವಜಾಗೊಳಿಸಿದ ಪೀಠ. ಮಾಜಿ ಸ್ಪೀಕರ್ ಕೆ ಆರ್‌ ರಮೇಶ್‌ ಕುಮಾರ್‌ ಸಲ್ಲಿಸಿದ್ದ ಪಿಐಎಲ್ ಪರಿಗಣಿಸಿದ ಪೀಠ.
ʼಪ್ರಚಾರ ಹಿತಾಸಕ್ತಿ ಮನವಿʼ ಎಂದು ರಾಜಕಾರಣಿಗಳಿಗೆ ತರಾಟೆ; ಹಿರಿಯ ಕಾಂಗ್ರೆಸ್‌ ನಾಯಕರ ಮನವಿ ವಜಾಗೊಳಿಸಿದ ಹೈಕೋರ್ಟ್‌
Congress, Karnataka HC

ರಾಜಕಾರಣಿಗಳು “ಪ್ರಚಾರ ಹಿತಾಸಕ್ತಿ ಮನವಿ” ಸಲ್ಲಿಸಿದ್ದಾರೆ ಎಂದು ಗುರುವಾರ ವ್ಯಾಖ್ಯಾನಿಸಿರುವ ಕರ್ನಾಟಕ ಹೈಕೋರ್ಟ್‌, ಅದನ್ನು ಗಂಭೀರವಾಗಿ ಆಕ್ಷೇಪಿಸಿದೆ. ಕಾಂಗ್ರೆಸ್‌ ಮುಖಂಡ ಹಾಗೂ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಎಸ್‌ ಆರ್‌ ಪಾಟೀಲ್‌ ಹಾಗೂ ಹಿರಿಯ ನಾಯಕ ಹಾಗೂ ಮಾಜಿ ಕಾನೂನು ಸಚಿವ ಎಚ್‌ ಕೆ ಪಾಟೀಲ್‌ ಸಲ್ಲಿಸಿದ್ದ ಮನವಿಗಳನ್ನು ನ್ಯಾಯಾಲಯವು ವಜಾಗೊಳಿಸಿದೆ. ಮಾಜಿ ಸ್ಪೀಕರ್, ಶಾಸಕ ಕೆ ಆರ್‌ ರಮೇಶ್‌ ಕುಮಾರ್‌ ಸಲ್ಲಿಸಿದ್ದ ಪಿಐಎಲ್‌ ರೂಪದ ಮೂರನೇ ಅರ್ಜಿಯನ್ನು ಪರಿಗಣಿಸಿರುವ ಪೀಠವು ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ.

ರಾಜ್ಯದಲ್ಲಿ ಕೋವಿಡ್‌ ಪರಿಸ್ಥಿತಿ ನಿರ್ವಹಣೆಗೆ ಸಂಬಂಧಿಸಿದಂತೆ ಬರೆಯಲಾಗಿದ್ದ ಎರಡು ಪತ್ರಗಳನ್ನು ಆಧರಿಸಿ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಮನವಿಯ ವಿಚಾರಣೆ ನಡೆಸುವಾಗ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಅರವಿಂದ್‌ ಕುಮಾರ್‌ ವಿಭಾಗೀಯ ಪೀಠವು ರಾಜ್ಯದಲ್ಲಿ ಕೋವಿಡ್‌ ನಿರ್ವಹಣೆ ಕುರಿತು ವಿಭಿನ್ನ ಪಕ್ಷಗಳ ರಾಜಕಾರಣಿಗಳು ನ್ಯಾಯಾಲಯದ ಮೆಟ್ಟಿಲೇರುತ್ತಿದ್ದಾರೆ ಎಂದಿದೆ.

“ರಾಜಕಾರಣಿಗಳು ಏತಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರುತ್ತಿದ್ದಾರೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ. ಕಳೆದ ಹದಿನಾಲ್ಕು ತಿಂಗಳುಗಳಿಂದ ನಾವು ಆದೇಶಗಳನ್ನು ಹೊರಡಿಸುತ್ತಿದ್ದೇವೆ. ವಲಸಿಗರ ವಿಚಾರ ಬಂದಾಗ ಒಬ್ಬೇ ಒಬ್ಬ ರಾಜಕಾರಣಿ ನ್ಯಾಯಾಲಯಕ್ಕೆ ಬರಲಿಲ್ಲ… ಇಂದು ಮೂವರು ರಾಜಕಾರಣಿಗಳು ಮನವಿಗಳನ್ನು ಸಲ್ಲಿಸಿದ್ದಾರೆ. 800 ಪುಟಗಳಿಗೂ ಹೆಚ್ಚಾದ ಆದೇಶವನ್ನು ನಾವು ಹೊರಡಿಸಿದ್ದೇವೆ. ಈಗ ರಾಜಕಾರಣಿಗಳು ಮನವಿಗಳನ್ನು ಸಲ್ಲಿಸಲು ಆರಂಭಿಸಿದ್ದಾರೆ” ಎಂದಿದೆ.

ಗದಗ ವಿಧಾನಸಭಾ ಕ್ಷೇತ್ರದ ಶಾಸಕ ಎಚ್‌ ಕೆ ಪಾಟೀಲ್‌ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸುವಾಗ ಪೀಠವು “ಅರ್ಜಿಯಲ್ಲಿ ವಿಸ್ತೃತ ಮತ್ತು ಬೀಸು ಮನವಿಗಳನ್ನು ಮಾಡಲಾಗಿದೆ, ಈ ಅರ್ಜಿಯನ್ನು ನಾವು ಹೇಗೆ ವಿಚಾರಣೆಗೆ ಪರಿಗಣಿಸಬೇಕು?" ಎಂದಿತು. “ವಿಧಾನಸಭಾ ಸದಸ್ಯರಾಗಿರುವ ನೀವು ಜನರಿಗಾಗಿ ಏನು ಮಾಡಿದ್ದೀರಿ? ನಿಮ್ಮ ಕ್ಷೇತ್ರದಲ್ಲಿ ಆಮ್ಲಜನಕ ಘಟಕ ಸ್ಥಾಪಿಸಲು ಪ್ರಯತ್ನ ಮಾಡಿದ್ದೀರಾ?... ಜನರಿಗೆ ಹಾಸಿಗೆ ಕಲ್ಪಿಸಿದ್ದೀರಾ? ರಾಜಕಾರಣಿಯಾದ ನೀವು ರಿಟ್‌ ಮೂಲಕ ನ್ಯಾಯಿಕ ಆದೇಶ ಕೋರುವುದಕ್ಕೂ ಮುನ್ನ ಮೊದಲಿಗೆ ರಾಜ್ಯದ ಜನತೆಗೆ ನೀವು ಏನಾದರೂ ಮಾಡಿರಬೇಕಿತ್ತು” ಎಂದು ಮೌಖಿಕವಾಗಿ ಹೇಳಿದೆ.

“ವಿಶೇಷ ಸ್ಥಾನದಲ್ಲಿರುವ ನೀವು ವಿಧಾನಸಭೆಯಲ್ಲಿ ಈ ವಿಚಾರಗಳನ್ನು ಪ್ರಸ್ತಾಪಿಸಬೇಕಿತ್ತು. ಅದನ್ನು ಮಾಡದೇ ರಿಟ್‌ ಮನವಿ ಹಿಡಿದುಕೊಂಡು ನ್ಯಾಯಾಲಯಕ್ಕೆ ಬಂದಿದ್ದೀರಿ. ಅತಿಹೆಚ್ಚು ದಂಡ ವಿಧಿಸಿ ಅದನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಪಾವತಿಸುವಂತೆ ಆದೇಶಿಸಲು ಇದು ಸೂಕ್ತವಾದ ಪ್ರಕರಣ. ಇದು ಪ್ರಚಾರ ಹಿತಾಸಕ್ತಿ ಮನವಿಯೇ ವಿನಾ ಸಾರ್ವಜನಿಕ ಹಿತಾಸಕ್ತಿ ಮನವಿಯಲ್ಲ” ಎಂದು ಹೇಳಿ ಎಚ್‌ ಕೆ ಪಾಟೀಲ್‌ ಸಲ್ಲಿಸಿದ್ದ ಮನವಿಯನ್ನು ಪೀಠ ವಜಾಗೊಳಿಸಿತು.

ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕರಾದ ಎಸ್‌ ಆರ್‌ ಪಾಟೀಲ್‌ ಅವರು ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ಮೂಲಕ ಸಲ್ಲಿಸಿದ್ದ ಮನವಿಯಲ್ಲಿ ಬಾಗಲಕೋಟೆಯಲ್ಲಿ ಖಾಸಗಿ ನರ್ಸಿಂಗ್‌ ಹೋಮ್‌ಗಳು ಹೆಚ್ಚು ರೋಗಿಗಳಿಗೆ ಪ್ರವೇಶ ಕಲ್ಪಿಸಿದ್ದಕ್ಕೆ ಅವುಗಳ ವಿರುದ್ಧ ಕಾನೂನು ಕ್ರಮಕೈಗೊಂಡಿರುವುದನ್ನು ಪ್ರಶ್ನಿಸಿದ್ದರು. “ನೀವು ಖಾಸಗಿ ವ್ಯಕ್ತಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಕೈಗೆತ್ತುಕೊಂಡಿದ್ದೀರಿ. ಖಾಸಗಿ ಆಸ್ಪತ್ರೆಗಳ ವಿಚಾರವನ್ನು ವಿಧಾನ ಪರಿಷತ್‌ ಸದಸ್ಯರು ಪ್ರಸ್ತಾಪಿಸುವುದನ್ನು ನಾವು ನಿರೀಕ್ಷಿಸಿರಲಿಲ್ಲ. ಆಸ್ಪತ್ರೆಗಳಿಗೆ ಸಮಸ್ಯೆಯಾಗಿದ್ದರೆ ಅವರು ನೇರವಾಗಿ ನ್ಯಾಯಾಲಯದ ಕದತಟ್ಟಬಹುದು” ಎಂದು ಪೀಠ ಹೇಳಿತು.

ಬಾಗಲಕೋಟೆಯ ಎಲ್ಲಾ ಆಸ್ಪತ್ರೆಗಳಿಗೂ 14 ಕೆಎಲ್‌ ಆಮ್ಲಜನಕ ಪೂರೈಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂಬ ಮನವಿಗೂ ಪೀಠ ಹೆಚ್ಚು ಪ್ರಾಮುಖ್ಯತೆ ನೀಡಲಿಲ್ಲ. “ಜಿಲ್ಲೆಯ ಪ್ರತಿ ಆಸ್ಪತ್ರೆಗೂ 14 ಕೆಎಲ್‌ ಆಮ್ಲಜನಕ ಪೂರೈಸಬೇಕೆ ಎಂಬ ವಿಚಾರವನ್ನು ನಾವು ನಿರ್ಧರಿಸಲಾಗದು. ಕೆಲವು ಆಸ್ಪತ್ರೆಗಳಿಗೆ 1 ಕೆಎಲ್‌ ಆಮ್ಲಜನಕ, ಇನ್ನು ಕೆಲವಕ್ಕೆ ಹೆಚ್ಚು ಆಮ್ಲಜನಕ ಅಗತ್ಯವಿರಬಹುದು. ಬಾಗಲಕೋಟೆಯ ಪ್ರತಿಯೊಂದು ಆಸ್ಪತ್ರೆಗೂ 14 ಕೆಎಲ್‌ ಆಮ್ಲಜನಕ ಪೂರೈಸುವಂತೆ ನಾವು ಸರ್ಕಾರಕ್ಕೆ ನಿರ್ದೇಶಿಸಲಾಗದು” ಎಂದಿತು.

Also Read
ಲಸಿಕೆ ಕೊರತೆ ಇರುವಾಗ ಎರಡನೇ ಡೋಸ್ ಹೇಗೆ ನೀಡುತ್ತೀರಿ: ಕೇಂದ್ರ, ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಪ್ರಶ್ನೆ

“ವಿಧಾನ ಪರಿಷತ್‌ನಲ್ಲಿ ನೀವು ವಿಪಕ್ಷ ನಾಯಕರು. ಅತ್ಯಂತ ಮಹತ್ವದ ಸ್ಥಾನದಲ್ಲಿರುವ ನೀವು ಈ ವಿಚಾರವನ್ನು ಪರಿಷತ್‌ನಲ್ಲಿ ಏಕೆ ಎತ್ತಲಿಲ್ಲ. ಈ ಮನವಿಗಳನ್ನು ಪುರಸ್ಕರಿಸಲಾಗದು. ಖಾಸಗಿ ಆಸ್ಪತ್ರೆಗಳನ್ನು ಹಿಂಸಿಸಲಾಗುತ್ತಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಅವರನ್ನು ಸಂಬಂಧಪಟ್ಟವರಿಗೆ ಮನವಿ ನೀಡುವಂತೆ ತಿಳಿಸಿ” ಎಂದಿತು.

ಸಂಪರ್ಕವೇ ಇಲ್ಲದ ಗ್ರಾಮಗಳಲ್ಲಿರುವ ಜನರ ಸ್ವ್ಯಾಬ್‌ ಮಾದರಿಯನ್ನು ಪರೀಕ್ಷೆಗೆ ಸಂಗ್ರಹಿಸಲು ಮತ್ತು ಮೊಬೈಲ್‌ ಪ್ರಯೋಗಾಲಯದ ವ್ಯವಸ್ಥೆ ಮಾಡುವ ಸಂಬಂಧ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಮಾಜಿ ಸ್ಪೀಕರ್, ಶಾಸಕ ಕೆ ಆರ್‌ ರಮೇಶ್‌ ಕುಮಾರ್‌ ಅವರು ಸಲ್ಲಿಸಿದ್ದ ಮನವಿಯನ್ನು ಪೀಠ ವಿಚಾರಣೆಗೆ ಪರಿಗಣಿಸಿದೆ.

“ಅರ್ಜಿದಾರರು ವಿಧಾನಸಭಾ ಸದಸ್ಯರಾಗಿದ್ದಾರೆ. ರಾಜ್ಯದ ಸಂಪರ್ಕವೇ ಇಲ್ಲದ ಪ್ರದೇಶಗಳಲ್ಲಿ ನೆಲೆಸಿರುವ ಜನರ ಸ್ವ್ಯಾಬ್‌ ಮಾದರಿಯನ್ನು ಪರೀಕ್ಷೆಗಾಗಿ ಪಡೆದುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಬೇಕು ಮತ್ತು ಮೊಬೈಲ್‌ ಪ್ರಯೋಗಾಲಯ ಆರಂಭಿಸಬೇಕು ಎಂದು ಅವರು ಕೋರಿದ್ದಾರೆ. ಸಂಪರ್ಕವೇ ಇಲ್ಲದ ಪ್ರದೇಶಗಳ ಜನರ ಸ್ವ್ಯಾಬ್‌ ಮಾದರಿ ಸಂಗ್ರಹಿಸಬೇಕು ಎಂಬುದರಲ್ಲಿ ಯಾವುದೇ ತಕರಾರು ಇಲ್ಲ. ಮೇ 25ರಂದು ನಡೆಯುವ ವಿಚಾರಣೆಯ ಸಂದರ್ಭದಲ್ಲಿ ಇದನ್ನು ಪ್ರಮುಖ ಮನವಿಯಲ್ಲಿ ಪರಿಗಣಿಸಬೇಕು. ಅಷ್ಟರೊಳಗೆ ರಾಜ್ಯ ಸರ್ಕಾರವು ಈ ವಿಚಾರದ ಕುರಿತು ಪ್ರತಿಕ್ರಿಯೆ ಸಲ್ಲಿಸಬೇಕು” ಎಂದು ಪೀಠವು ಹೇಳಿದೆ.

No stories found.
Kannada Bar & Bench
kannada.barandbench.com