ಅಪರಾಧ ಪ್ರಕ್ರಿಯೆಯಲ್ಲಿ ಆರೋಪಿಗಳಾಗಿರುವವರ ಮನೆ ಅಥವಾ ಅಂಗಡಿಗಳನ್ನು ನೆಲಸಮ ಮಾಡುವ ಕಾನೂನುಬಾಹಿರ ಕ್ರಮ ಕೈಗೊಳ್ಳದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ಗೆ ಎರಡು ಅರ್ಜಿಗಳನ್ನು ಸಲ್ಲಿಸಲಾಗಿದೆ.
ರಾಜಸ್ಥಾನದ ರಶೀದ್ ಖಾನ್ ಮತ್ತು ಮಧ್ಯಪ್ರದೇಶದ ಮೊಹಮ್ಮದ್ ಹುಸೇನ್ ಅವರು ಸಲ್ಲಿಸಿದ್ದ ಅರ್ಜಿಗಳನ್ನು ಶುಕ್ರವಾರ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠದೆದುರು ಮಂಡಿಸಿದ ಹಿರಿಯ ವಕೀಲ ಸಿಯು ಸಿಂಗ್ ಮತ್ತು ವಕೀಲ ಫೌಜಿಯಾ ಶಕಿಲ್ ಅವರು ಪ್ರಕರಣವನ್ನು ತುರ್ತಾಗಿ ವಿಚಾರಣೆ ನಡೆಸಲು ಕೋರಿದರು. ಸೆಪ್ಟಂಬರ್ 2 ರಂದು ವಿಚಾರಣೆ ನಡೆಸಲು ಪೀಠ ಸಮ್ಮತಿಸಿದೆ.
ಉದಯಪುರ ಜಿಲ್ಲಾಡಳಿತ 2024ರ ಆಗಸ್ಟ್ 17ರಂದು ತನ್ನ ಮನೆ ಕೆಡವಿದೆ ಎಂಬುದಾಗಿ ದೂರಿ ಉದಯಪುರದ 60 ವರ್ಷದ ಆಟೋ ಚಾಲಕ ಖಾನ್ ಅರ್ಜಿ ಸಲ್ಲಿಸಿದ್ದಾರೆ.
ಮುಸ್ಲಿಂ ಶಾಲಾ ವಿದ್ಯಾರ್ಥಿಯೊಬ್ಬ ತನ್ನ ಹಿಂದೂ ಸಹಪಾಠಿಯನ್ನು ಇರಿದ ಕಾರಣಕ್ಕೆ ಉದಯಪುರದಲ್ಲಿ ಕೋಮು ಘರ್ಷಣೆ ಉಂಟಾಗಿತ್ತು. ಘಟನೆಯಲ್ಲಿ ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ನಿಷೇಧಾಜ್ಞೆ ಜಾರಿಯಾಗಿ ಮಾರುಕಟ್ಟೆ ಬಂದ್ ಮಾಡಲಾಗಿತ್ತು. ಖಾನ್ ಆ ಶಾಲಾ ಬಾಲಕನ ತಂದೆಯಾಗಿದ್ದಾರೆ.
ʼಬುಲ್ಡೋಜರ್ ನ್ಯಾಯಾಲಯʼ ಎಂಬ ಅತಿರೇಕದ ಕ್ರಮ ಬಳಸಿ ತಮ್ಮ ಮನೆಯನ್ನು ಅಕ್ರಮವಾಗಿ ಮತ್ತು ನಿರಂಕುಶ ರೀತಿಯಲ್ಲಿ ಹಾಗೂ ದುರುದ್ದೇಶಪೂರ್ವಕವಾಗಿ ನೆಲಸಮ ಮಾಡಲಾಗಿದೆ ಎಂದು ಖಾನ್ ದೂರಿದ್ದರು.
ಮತ್ತೊಂದೆಡೆ ಮಧ್ಯಪ್ರದೇಶದ ಮೊಹಮ್ಮದದ್ ಹುಸೇನ್ ಅವರು ತಮ್ಮ ಮನೆ ಮತ್ತು ಅಂಗಡಿ ನೆಲಸಮಗೊಳಿಸಿದ ರಾಜ್ಯ ಸರ್ಕಾರದ ಕ್ರಮವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ.
ಈ ಹಿಂದೆ ನೂರ್ ಕೋಮು ಹಿಂಸಾಚಾರದ ಹಿನ್ನೆಲೆಯಲ್ಲಿ ಮುಸ್ಲಿಂ ಮನೆಗಳನ್ನು ಕೆಡವಿದ್ದಕ್ಕೆ ಆಕ್ಷೇಪಿಸಿ ಜಾಮಿಯತ್ ಉಲಾಮಾ- ಇ- ಹಿಂದ್ ಸಲ್ಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆಯೇ ಈ ಅರ್ಜಿಗಳನ್ನೂ ಸಲ್ಲಿಸಲಾಗಿದೆ.