Supreme Court, BR Patil Yatnal 
ಸುದ್ದಿಗಳು

ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಆಯ್ಕೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಕಾಂಗ್ರೆಸ್‌ನ ಮುಷರಿಫ್‌

ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ಕಾಂಗ್ರೆಸ್‌ನ ಅಬ್ದುಲ್‌ ಹಮೀದ್‌ಖಾಜಾ ಸಾಬ್‌ ಮುಷರಿಫ್‌ ಅವರ ಅರ್ಜಿ ವಜಾ ಮಾಡಿ, ₹1 ಲಕ್ಷ ದಂಡ ವಿಧಿಸಿತ್ತು.

Bar & Bench

ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿರುವ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ಆಯ್ಕೆ ಪ್ರಶ್ನಿಸಿ ಸಲ್ಲಿಕೆಯಾಗಿರುವ ಮೇಲ್ಮನವಿ ಸಂಬಂಧ ಶುಕ್ರವಾರ ಸುಪ್ರೀಂ ಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

ದೋಷ ಸರಿಪಡಿಸದೇ ಅನುದ್ದೇಶಿತವಾಗಿ ಅರ್ಜಿ ಸಲ್ಲಿಸಲಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ಕಾಂಗ್ರೆಸ್‌ ಪರಾಜಿತ ಅಭ್ಯರ್ಥಿ ಅಬ್ದುಲ್‌ ಹಮೀದ್‌ಖಾಜಾ ಸಾಬ್‌ ಮುಷರಿಫ್‌ಗೆ ₹1 ಲಕ್ಷ ದಂಡ ವಿಧಿಸಿ ಅರ್ಜಿ ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಉಜ್ಜಲ್‌ ಭುಯಾನ್‌ ಅವರ ವಿಭಾಗೀಯ ಪೀಠ ನಡೆಸಿತು.

ಹೈಕೋರ್ಟ್‌ ವಿಧಿಸಿರುವ ₹1 ಲಕ್ಷ ದಂಡದ ಮೊತ್ತವನ್ನು ಬದಿಗೆ ಸರಿಸಲು ನಿರಾಕರಿಸಿರುವ ಪೀಠವು ಮೇಲ್ಮನವಿಯನ್ನು ವಿಚಾರಣೆಗೆ ಪರಿಗಣಿಸಿ, ಯತ್ನಾಳ್‌ಗೆ ನೋಟಿಸ್‌ ಜಾರಿ ಮಾಡಿದೆ.

ಪ್ರಕರಣದಲ್ಲಿ ಹೈಕೋರ್ಟ್‌ ಸಮಗ್ರ ದೃಷ್ಟಿಕೋನದಿಂದ ನಿರ್ಧಾರ ಕೈಗೊಳ್ಳಬೇಕಿತ್ತು ಎಂದು ಕಾಂಗ್ರೆಸ್‌ ನಾಯಕ ಮುಷರಿಫ್‌ ಆಕ್ಷೇಪಿಸಿದ್ದಾರೆ. ಮುಷರಿಫ್‌ ಅವರನ್ನು ಹಿರಿಯ ವಕೀಲ ಸಂಜಯ್‌ ಹೆಗ್ಡೆ, ವಕೀಲರಾದ ಅನಂತ ಪ್ರಸಾದ್‌ ಮಿಶ್ರಾ, ರಹಮತುಲ್ಲಾ ಕೊತ್ವಾಲ್‌ ಮತ್ತು ಸಿದ್ದಿಕಾ ಆಯಿಶಾ ಪ್ರತಿನಿಧಿಸಿದ್ದರು.

ಲಘುಧಾಟಿಯಲ್ಲಿ ಹೇಳುವುದಾದರೆ, ಇಂತಹ ಪ್ರಕರಣಗಳಲ್ಲಿ ಯಾವುದೇ ಕೃತ್ಯ, ಯಾವುದೇ ಮೂರ್ಖತನದ ಕೃತ್ಯವೂ ಸಹ ಪರಿಹರಿಸಬಹುದಾದ ದೋಷವಾಗಿರುತ್ತದೆ ಎಂದು ಸಂಜಯ್‌ ಹೆಗ್ಡೆ ಅವರು ಮೇಲ್ಮನವಿ ಆಲಿಸುವಂತೆ ಕೋರುವ ಸಂದರ್ಭದಲ್ಲಿ ವಾದಿಸಿದರು.

ಕಳೆದ ವರ್ಷ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ವಿಜಯಪುರ ನಗರ ಕ್ಷೇತ್ರದಲ್ಲಿ ಯತ್ನಾಳ್‌ ವಿರುದ್ಧ ಸ್ಪರ್ಧಿಸಿ ಪರಭಾವಗೊಂಡಿದ್ದ ಮುಷರಿಫ್‌ ಅವರು ಯತ್ನಾಳ್‌ ಆಯ್ಕೆ ಪ್ರಶ್ನಿಸಿ ಹೈಕೋರ್ಟ್‌ನ ಕಲಬುರ್ಗಿ ಪೀಠದಲ್ಲಿ ಚುನಾವಣಾ ಅರ್ಜಿ ಸಲ್ಲಿಸಿದ್ದರು.

ಅರ್ಜಿಯಲ್ಲಿ ಕೆಲವು ಲೋಪಗಳನ್ನು ಸರಿಪಡಿಸದೇ ಇದ್ದುದರಿಂದ ಹೈಕೋರ್ಟ್‌ ಮುಷರಿಫ್‌ ಅವರ ಅರ್ಜಿ ವಜಾ ಮಾಡಿತ್ತು. ಪ್ಲೀಡಿಂಗ್‌ ಮತ್ತು ಪ್ರತಿವಾದಿ ಯತ್ನಾಳ್‌ಗೆ ನೀಡಿರುವ ಅರ್ಜಿಯ ನಕಲು ಪ್ರತಿಯಲ್ಲಿ ಸಹಿ ವ್ಯತ್ಯಾಸವಿದೆ. ಈ ಮೂಲಕ ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್‌ 81(3) ಉಲ್ಲಂಘಿಸಲಾಗಿದೆ ಎಂದು ಹೈಕೋರ್ಟ್‌ ಅರ್ಜಿ ವಜಾ ಮಾಡಿತ್ತು.

“ಸಹಿ ವ್ಯತ್ಯಾಸವು ಗಂಭೀರ ವಿಚಾರವಾಗಿದ್ದು, ಇದು ಪಕ್ಷಕಾರರ ಹಕ್ಕು ಮತ್ತು ಜವಾಬ್ದಾರಿಗೆ ಸಂಬಂಧಿಸಿರುವುದರಿಂದ ಆ ಬಗ್ಗೆ ನ್ಯಾಯಾಲಯವು ನಿರ್ಭಾವ ಹೊಂದಲಾಗದು. ಮುಷರಿಫ್‌ ಅವರು ನಿಯಮಗಳ ಅಡಿ ಫಾರ್ಮ್‌ 25ರ ಅಫಿಡವಿಟ್‌ ಸಲ್ಲಿಸಿರಲಿಲ್ಲ. ಸಮಾಜದಲ್ಲಿ ಜವಾಬ್ದಾರಿಯುತ ವ್ಯಕ್ತಿಯಾದ ಅರ್ಜಿದಾರರು ಚುನಾವಣಾ ಅರ್ಜಿಯನ್ನು ಇಷ್ಟು ಉಪೇಕ್ಷೆಯಿಂದ ಸಲ್ಲಿಸಬಾರದು” ಎಂದು ಹೇಳಿ, ಒಂದು ಲಕ್ಷ ರೂಪಾಯಿ ದಂಡ ವಿಧಿಸಿತ್ತು.

ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿರುವ ಮೇಲ್ಮನವಿಯಲ್ಲಿ ಮುಷರಿಫ್‌ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಇಂತಹ ನೋಟ ಹೊಂದುವ ಅಗತ್ಯವಿರಲಿಲ್ಲ. ಹೈಕೋರ್ಟ್‌ ಸೆಕ್ಷನ್‌ 81 (3) ರ ಉದ್ದೇಶವನ್ನು ಪರಿಶೀಲಿಸಬೇಕಿತ್ತು ಎಂದು ವಾದಿಸಿದ್ದಾರೆ. ಅಲ್ಲದೆ, ಹೈಕೋರ್ಟ್‌ಗೆ ಸಲ್ಲಿಸಲಾಗಿದ್ದ ಅರ್ಜಿ ಹಾಗೂ ಯತ್ನಾಳ್‌ ಅವರಿಗೆ ನೀಡಲಾಗಿದ್ದ ಅರ್ಜಿಯ ಪ್ರತಿಯಲ್ಲಿನ ವಿಷಯದಲ್ಲಿ ಯಾವುದೇ ವ್ಯತ್ಯಾಸಗಳಿರಲಿಲ್ಲ ಎಂದು ವಾದಿಸಿದ್ದಾರೆ.