President Droupadi Murmu and new Parliament Building 
ಸುದ್ದಿಗಳು

ರಾಷ್ಟ್ರಪತಿ ದ್ರೌಪದಿ ಮುರ್ಮು ನೂತನ ಸಂಸತ್ ಭವನ ಉದ್ಘಾಟಿಸಲಿ: ಸುಪ್ರೀಂ ಕೋರ್ಟ್‌ಗೆ ಮನವಿ

ಲೋಕಸಭೆ ಸಚಿವಾಲಯ ನೀಡಿರುವ ಹೇಳಿಕೆ ಮತ್ತು ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮಕ್ಕೆ ಲೋಕಸಭೆಯ ಪ್ರಧಾನ ಕಾರ್ಯದರ್ಶಿ ನೀಡಿರುವ ಆಹ್ವಾನ ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

Bar & Bench

ನವದೆಹಲಿಯಲ್ಲಿ ನಿರ್ಮಿಸಲಾಗಿರುವ ನೂತನ ಸಂಸತ್ ಭವನವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟಿಸುವಂತೆ ಲೋಕಸಭೆ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ನೂತನ ಸಂಸತ್ ಭವನವನ್ನು ಮೇ 28ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.

ಮೇ 18ರಂದು ಲೋಕಸಭೆಯ ಸಚಿವಾಲಯ ಹೊರಡಿಸಿದ ಪ್ರಕಟಣೆ ಮತ್ತು ಹೊಸ ಕಟ್ಟಡದ ಉದ್ಘಾಟನಾ ಕಾರ್ಯಕ್ರಮಕ್ಕೆ ಲೋಕಸಭೆಯ ಪ್ರಧಾನ ಕಾರ್ಯದರ್ಶಿ ನೀಡಿರುವ ಆಹ್ವಾನ ಪತ್ರಿಕೆಗಳಲ್ಲಿ ಭಾರತೀಯ ಸಂವಿಧಾನವನ್ನು ಉಲ್ಲಂಘಿಸಲಾಗಿದೆ ಎಂದು ವಕೀಲರಾದ ಸಿ ಆರ್ ಜಯಾ ಸುಕಿನ್ ಅವರು ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ.

ಅರ್ಜಿಯ ಪ್ರಮುಖಾಂಶಗಳು

  • ರಾಷ್ಟ್ರಪತಿ ಪ್ರಥಮ ಪ್ರಜೆಯಾಗಿದ್ದು ಸಂಸತ್ತಿನ ಮುಖ್ಯಸ್ಥರಾಗಿದ್ದಾರೆ. ದೇಶಕ್ಕೆ ಸಂಬಂಧಿಸಿದ ಎಲ್ಲಾ ಪ್ರಮುಖ ನಿರ್ಧಾರಗಳನ್ನು ಭಾರತದ ರಾಷ್ಟ್ರಪತಿಗಳ ಹೆಸರಿನಲ್ಲಿ ತೆಗೆದುಕೊಳ್ಳಲಾಗುತ್ತದೆ.

  • ಭಾರತದ ರಾಷ್ಟ್ರಪತಿ, ರಾಜ್ಯಸಭೆ ಮತ್ತು ಲೋಕಸಭೆಯನ್ನು ಒಳಗೊಂಡಿರುವ ಅಂತಸ್ತು ದೇಶದ ಶಾಸಕಾಂಗದ ಸರ್ವೋಚ್ಚ ಅಧಿಕಾರ ಹೊಂದಿದೆ. ಸಂಸತ್ತಿನ ಅಧಿವೇಶನವನ್ನು ಕರೆಯುವ, ಮುಂದೂಡುವ ಅಥವಾ ಲೋಕಸಭೆಯನ್ನು ವಿಸರ್ಜಿಸುವ ಅಧಿಕಾರ ರಾಷ್ಟ್ರಪತಿ ಅವರಿಗೆ ಇದೆ.

  • ಭಾರತೀಯ ಸಂವಿಧಾನದ 79ನೇ ವಿಧಿಯ ಪ್ರಕಾರ, ರಾಷ್ಟ್ರಪತಿಗಳು ಸಂಸತ್ತಿನ ಅವಿಭಾಜ್ಯ ಅಂಗವಾಗಿದ್ದಾರೆ. ಹೀಗಾಗಿ ಅವರನ್ನು ಉದ್ಘಾಟನೆಯಿಂದ ದೂರ ಇಡಬಾರದು. ಹಾಗೆ ಅವರನ್ನು ದೂರವಿಟ್ಟಿರುವುದು ಲೋಕಸಭೆ ಸಚಿವಾಲಯದ ದುರುದ್ದೇಶದ ಕ್ರಮವನ್ನು ತೋರಿಸುತ್ತದೆ.

  •  ಪ್ರಕಟಣೆ ಮತ್ತು ಆಹ್ವಾನ ಪತ್ರಿಕೆಗಳನ್ನು ಸೂಕ್ತ ವಿವೇಚನೆಯಿಲ್ಲದೆ ಹೊರಡಿಸಲಾಗಿದೆ.

  • ರಾಷ್ಟ್ರಪತಿಯವರಿಂದಲೇ ನೂತನ ಸಂಸತ್‌ ಭವನ ಉದ್ಘಾಟಿಸಲು ಅವಕಾಶ ಮಾಡಿಕೊಡಲು ಪ್ರಕರಣದ ಮೊದಲನೇ ಪ್ರತಿವಾದಿಯಾಗಿರುವ ಲೋಕಸಭೆ ಕಾರ್ಯದರ್ಶಿಗೆ ಆದೇಶ ಅಥವಾ ನಿರ್ದೇಶನ ನೀಡಬೇಕು.