ಸಿಜೆಐ ಚಂದ್ರಚೂಡ್‌ ವಿರುದ್ಧದ ಟ್ರೋಲ್‌ಗೆ ಆಡಳಿತ ಪಕ್ಷದಿಂದ ಬೆಂಬಲ; ರಾಷ್ಟ್ರಪತಿ ಮುರ್ಮುಗೆ ವಿಪಕ್ಷ ಸಂಸದರಿಂದ ಪತ್ರ

ಟ್ರೋಲ್‌ ಮಾಡುವವರು ಮಹಾರಾಷ್ಟ್ರದ ಆಡಳಿತ ಪಕ್ಷದೆಡೆಗೆ ಅನುಕಂಪ ಹೊಂದಿದ್ದು, ಸಿಜೆಐ ವಿರುದ್ಧ ದಾಳಿ ಆರಂಭಿಸಿದ್ದಾರೆ ಎಂದು ಪತ್ರದಲ್ಲಿ ಆಕ್ಷೇಪಿಸಲಾಗಿದೆ.
Justice DY Chandrachud
Justice DY Chandrachud
Published on

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ವಿರುದ್ಧ ಆನ್‌ಲೈನ್‌ ಟ್ರೋಲ್‌ ಆರಂಭಿಸಿರುವವರ ವಿರುದ್ಧ ತಕ್ಷಣ ಕ್ರಮಕೈಗೊಳ್ಳುವಂತೆ ಹಿರಿಯ ವಕೀಲ ಮತ್ತು ಕಾಂಗ್ರೆಸ್‌ ಸಂಸದ ವಿವೇಕ್‌ ಕೆ ಟಂಕಾ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ.

ಮಹಾರಾಷ್ಟ್ರ ಸರ್ಕಾರ ಸ್ಥಾಪನೆ ಮತ್ತು ಅದರಲ್ಲಿ ರಾಜ್ಯಪಾಲರ ಪಾತ್ರ ಕುರಿತಾದ ಮಹತ್ವದ ಸಾಂವಿಧಾನಿಕ ವಿಚಾರವನ್ನು ಒಳಗೊಂಡಿರುವ ಪ್ರಕರಣದ ವಿಚಾರಣೆಯನ್ನು ಸಿಜೆಐ ಚಂದ್ರಚೂಡ್‌ ಅವರ ನೇತೃತ್ವದ ಸಾಂವಿಧಾನಿಕ ಪೀಠ ವಿಚಾರಣೆ ನಡೆಸಿದೆ ಎಂದು ಹೇಳಿರುವ ಪತ್ರಕ್ಕೆ 13 ಸಂಸದರು ಬೆಂಬಲ ಸೂಚಿಸಿದ್ದಾರೆ.

ವಿಚಾರವು ನ್ಯಾಯಿಕ ಪರಾಮರ್ಶೆಗೆ ಒಳಪಟ್ಟಿದ್ದು, ಟ್ರೋಲ್‌ ಮಾಡುವವರು ಮಹಾರಾಷ್ಟ್ರದಲ್ಲಿ ಆಡಳಿತ ಪಕ್ಷದ ಕಡೆಗೆ ಅನುಕಂಪ ಹೊಂದಿದ್ದು, ಸಿಜೆಐ ವಿರುದ್ಧ ದಾಳಿ ಆರಂಭಿಸಿದ್ದಾರೆ ಎಂದು ಪತ್ರದಲ್ಲಿ ಹೇಳಲಾಗಿದೆ.

“ಸಿಜೆಐ ಅವರ ವಿರುದ್ಧ ಬಳಸಿರುವ ಪದಗಳು ಮತ್ತು ವಿಚಾರಗಳು ಅಸಹ್ಯ ಮತ್ತು ಅಸಭ್ಯವಾಗಿದ್ದು, ಇದನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ” ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿರುವಾಗ ಇಂಥ ಹೇಯ ನಡತೆಯು ಆಡಳಿತ ಪಕ್ಷದ ಬೆಂಬಲವಿದ್ದಾಗ ಮಾತ್ರ ಮಾಡಲು ಸಾಧ್ಯ ಎಂದು ಪತ್ರದಲ್ಲಿ ಹೇಳಲಾಗಿದೆ. “ಘನವೆತ್ತ ತಾವು ಮತ್ತು ಭಾರತದಲ್ಲಿನ ಸಾಂವಿಧಾನಿಕ ಮತ್ತು ಶಾಸನಬದ್ಧ ಪ್ರಾಧಿಕಾರಗಳು ನ್ಯಾಯಾಂಗದ ಘನತೆ ಎತ್ತಿ ಹಿಡಿಯುವ ಕರ್ತವ್ಯ ಮಾಡಬೇಕಿದೆ” ಎಂದು ಪತ್ರದಲ್ಲಿ ಕೋರಲಾಗಿದೆ.

“ಟ್ರೋಲ್‌ ಮಾಡುವುದರಲ್ಲಿ ನಿರತವಾಗಿರುವವರು ಮತ್ತು ಅದರ ಹಿಂದಿರುವವರ ಅಂದರೆ ಬೆಂಬಲ ಮತ್ತು ಪ್ರಾಯೋಜಕತ್ವ ನೀಡುತ್ತಿರುವವರ ವಿರುದ್ಧ ತಕ್ಷಣ ಕ್ರಮಕೈಗೊಳ್ಳಬೇಕು. ಕಾನೂನು ಅನುಪಾಲನಾ ಸಂಸದರಾದ ನಾವುಗಳು ತಪ್ಪಿತಸ್ಥರ ವಿರುದ್ಧ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಬಯಸುತ್ತೇವೆ. ಇಲ್ಲವಾದಲ್ಲಿ ಪ್ರಕರಣವನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲಾಗುವುದು” ಎಂದು ಹೇಳಿದ್ದಾರೆ.

Kannada Bar & Bench
kannada.barandbench.com