Arvind Kejriwal, PM Modi and SC 
ಸುದ್ದಿಗಳು

ಪ್ರಧಾನಿ ಮೋದಿ ಪದವಿ ವಿವಾದ: ಕೇಜ್ರಿವಾಲ್‌ಗೆ ನೀಡಿದ್ದ ಸಮನ್ಸ್ ಆದೇಶ ಎತ್ತಿ ಹಿಡಿದ ಸುಪ್ರೀಂ

ಎಎಪಿ ಶಾಸಕ ಸಂಜಯ್ ಸಿಂಗ್ ಸಲ್ಲಿಸಿದ್ದ ಇದೇ ರೀತಿಯ ಮನವಿಯನ್ನು ನ್ಯಾಯಾಲಯ ಈ ಹಿಂದೆ ವಜಾಗೊಳಿಸಿತ್ತು ಎಂದು ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್ ವಿ ಎನ್ ಭಟ್ಟಿ ಅವರಿದ್ದ ಪೀಠ ತಿಳಿಸಿದೆ.

Bar & Bench

ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಪದವಿ ಬಗ್ಗೆ ನೀಡಿದ ಹೇಳಿಕೆಗಳಿಗೆ ಸಂಬಂಧಿಸಿದಂತೆ ಗುಜರಾತ್ ವಿಶ್ವವಿದ್ಯಾಲಯ ದಾಖಲಿಸಿರುವ ಮಾನನಷ್ಟ ಮೊಕದ್ದಮೆಯಲ್ಲಿ ಎಎಪಿ ಅಧಿನಾಯಕ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ರಾಜ್ಯದ ವಿಚಾರಣಾ ನ್ಯಾಯಾಲಯ ನೀಡಿದ್ದ ಸಮನ್ಸ್‌ ರದ್ದತಿಗೆ ಸುಪ್ರೀಂ ಕೋರ್ಟ್‌ ಸೋಮವಾರ ನಿರಾಕರಿಸಿದೆ [ಅರವಿಂದ್‌ ಕೇಜ್ರಿವಾಲ್‌ ಮತ್ತು ಪೀಯುಷ್‌ ಎಂ ಪಟೇಲ್‌ ಇನ್ನಿತರರ ನಡುವಣ ಪ್ರಕರಣ].

 ಎಎಪಿ ಶಾಸಕ ಸಂಜಯ್ ಸಿಂಗ್ ಸಲ್ಲಿಸಿದ್ದ ಇದೇ ರೀತಿಯ ಮನವಿಯನ್ನು ನ್ಯಾಯಾಲಯ ಈ ಹಿಂದೆ ವಜಾಗೊಳಿಸಿತ್ತು ಎಂದು ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್ ವಿ ಎನ್ ಭಟ್ಟಿ ಅವರಿದ್ದ ಪೀಠ ತಿಳಿಸಿದೆ.

"ಒಬ್ಬ ಮೇಲ್ಮನವಿದಾರ ಪೀಠದೆದುರು ಬಂದಿದ್ದರು. ಅವರ ಅರ್ಜಿ ವಜಾಗೊಳಿಸಿದ್ದರಿಂದ ನಾವು ಮಧ್ಯಪ್ರವೇಶಿಸಲು ಬಯಸುವುದಿಲ್ಲ" ಎಂದು ಮೇಲ್ಮನವಿ  ತಿರಸ್ಕರಿಸುವ ಸಂದರ್ಭದಲ್ಲಿ ನ್ಯಾಯಾಲಯ ಹೇಳಿದೆ.

ಸಿಂಗ್ ಅವರು ನೀಡಿರುವ ಹೇಳಿಕೆಗಳು ಭಿನ್ನವಾಗಿವೆ ಎಂದು ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದಿಸಿದರೂ ಪೀಠ ಮನವಿ ತಿರಸ್ಕರಿಸಿತು.

ಗುಜರಾತ್‌ ವಿವಿ ಸಲ್ಲಿಸಿದ್ದ ದೂರು ಪ್ರಸ್ತುತ ಅರ್ಜಿ ಸಲ್ಲಿಸಿರುವ ಕೇಜ್ರಿವಾಲ್‌ ಅವರಿಗೆ ಮಾತ್ರವಲ್ಲದೆ ಸಂಜಯ್‌ ಸಿಂಗ್‌ ಅವರಿಗೂ ಸಂಬಂಧಿಸಿದೆ. ಅವರ ಮನವಿಯನ್ನು ಕಳೆದ ಏಪ್ರಿಲ್‌ 8ರಂದು ವಜಾಗೊಳಿಸಿತ್ತು. ನಾವು ಆ ಆದೇಶಕ್ಕೆ ಅನುಗುಣವಾಗಿರಬೇಕು. ಆ ನೆಲೆಯಲ್ಲಿ ಪ್ರಸ್ತುತ ಮನವಿ ಪರಿಗಣಿಸಲು ಬಯಸುವುದಿಲ್ಲ ಅದನ್ನು ವಜಾಗೊಳಿಸುತ್ತಿದ್ದೇವೆ ಎಂದು ನ್ಯಾಯಾಲಯ ವಿವರಿಸಿದೆ.

ಕೇಜ್ರಿವಾಲ್ ಅವರಿಗೆ ನೀಡಿದ್ದ ಸಮನ್ಸ್ ರದ್ದುಗೊಳಿಸಲು ಗುಜರಾತ್ ಹೈಕೋರ್ಟ್ ಕೂಡ ಫೆಬ್ರವರಿಯಲ್ಲಿ ನಿರಾಕರಿಸಿತ್ತು.ಇದರಿಂದಾಗಿ ಕೇಜ್ರಿವಾಲ್ ಅವರು ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ವಕೀಲ ವಿವೇಕ್‌ ಜೈನ್‌ ಅವರ ಮೂಲಕ ಪ್ರಸ್ತುತ ಮನವಿ ಸಲ್ಲಿಸಿದ್ದರು.

ವಾದ ಮಂಡನೆ ವೇಳೆ ಸಿಂಘ್ವಿ ಅವರು ವಿಶ್ವವಿದ್ಯಾಲಯದ ವಿರುದ್ಧ ಕೇಜ್ರಿವಾಲ್‌ ಅವರು ಯಾವುದೇ ಹೇಳಿಕೆ ನೀಡಿಲ್ಲ. ಆದ್ದರಿಂದ ಅದು  ಮಾನನಷ್ಟ ದೂರು ದಾಖಲಿಸಲಾಗದು. ಸಾರ್ವಜನಿಕ ಜೀವನದಲ್ಲಿ ವ್ಯಕ್ತಿಗಳ ಪದವಿ ಬಹಿರಂಗಪಡಿಸುವಂತೆ ಕೋರಿದರೆ ಅದು ಮಾನನಷ್ಟ ಮೊಕದ್ದಮೆ ಹೂಡಲು ಕಾರಣವಾಗುವುದಿಲ್ಲ ಎಂದರು.

ವಿವಿ ಪರ ವಾದ ಮಂಡಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಸಿಐಸಿ ಆದೇಶವನ್ನು ಹೈಕೋರ್ಟ್‌ ರದ್ದುಗೊಳಿಸಿದ ಬಳಿಕ ಎಎಪಿ ನಾಯಕರು ಪತ್ರಿಕಾಗೋಷ್ಠಿ ನಡೆಸಿ ವಿವಿಯನ್ನು ದೂಷಿಸಿದರು ಎಂದರು. ವಾದ ಆಲಿಸಿದ ನ್ಯಾಯಾಲಯ ಮನವಿ ವಜಾಗೊಳಿಸಿತು.