ಕೋವಿಡ್-19 ಲಸಿಕೆ ಪ್ರಮಾಣಪತ್ರದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ತೆಗೆದುಹಾಕಲು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ವಜಾಗೊಳಿಸಿದ್ದ ಕೇರಳ ಹೈಕೋರ್ಟ್‌ನ ಏಕ ಸದಸ್ಯ ಪೀಠದ ತೀರ್ಪನ್ನು ಪ್ರಶ್ನಿಸಿದ್ದ ಆರ್‌ಟಿಐ ಕಾರ್ಯಕರ್ತರೊಬ್ಬರ ಮೇಲ್ಮನವಿಯನ್ನು ಕೇರಳ ಹೈಕೋರ್ಟ್ ವಿಭಾಗೀಯ ಪೀಠ ಮಂಗಳವಾರ ವಜಾಗೊಳಿಸಿದೆ [ಪೀಟರ್ ಮ್ಯಾಲಿಪರಾಂಪಿಲ್ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ].
ಡಿಸೆಂಬರ್ 21, 2021 ರಂದು, ಹೈಕೋರ್ಟ್‌ನ ಏಕ ಸದಸ್ಯ ಪೀಠ ಅರ್ಜಿಯನ್ನು ವಜಾಗೊಳಿಸಿ ಅರ್ಜಿದಾರರಾದ ಪೀಟರ್ ಮ್ಯಾಲಿಪರಾಂಪಿಲ್ ಅವರಿಗೆ ₹ 1 ಲಕ್ಷ ದಂಡ ವಿಧಿಸಿತ್ತು. ಮುಖ್ಯ ನ್ಯಾಯಮೂರ್ತಿ ಎಸ್ ಮಣಿಕುಮಾರ್ ಮತ್ತು ನ್ಯಾ. ಶಾಜಿ ಪಿ ಚಾಲಿ ಅವರಿದ್ದ ವಿಭಾಗೀಯ ಪೀಠವು ಇಂದು ಇದೇ ಅರ್ಜಿಯನ್ನು ಆಲಿಸಿ ವಜಾಗೊಳಿಸಿದೆ.
ಪ್ರಧಾನ ಮಂತ್ರಿಯ ಭಾವಚಿತ್ರವು ಜಾಹೀರಾತಲ್ಲ ಮತ್ತು ಲಸಿಕೆ ಪ್ರಮಾಣಪತ್ರದ ಮೂಲಕವೂ ಸಂದೇಶವನ್ನು ನೀಡುವ ಹಕ್ಕು ಪ್ರಧಾನಿಗೆ ಇದೆ ಎಂಬ ಏಕ ಸದಸ್ಯ ಪೀಠದ ಮಾತಿಗೆ ವಿಭಾಗೀಯ ಪೀಠ ಸಮ್ಮತಿ ಸೂಚಿಸಿತು. ಇದು ಪ್ರಧಾನಿ ಸಂದೇಶ, ಜಾಹೀರಾತಲ್ಲ ಎಂದು ಅದು ಹೇಳಿತು.
ತೀರ್ಪಿನ ವಿವರಗಳನ್ನು ನಂತರ ಜಾಲತಾಣಕ್ಕೆ ಅಪ್‌ಲೋಡ್ ಮಾಡಲಾಗುವುದು ಎಂದ ಪೀಠ ಏಕಸದಸ್ಯ ಪೀಠ ವಿಧಿಸಿದ್ದ ದಂಡವನ್ನು ದೃಢೀಕರಿಸಿದೆಯೇ ಎಂಬುದನ್ನು ಅಂತಿಮವಾಗಿ ದೃಢಪಡಿಸಲಿಲ್ಲ.
ಕೋವಿಡ್ ವಿರುದ್ಧದ ಲಸಿಕಾ ಅಭಿಯಾನವನ್ನು ಪ್ರಧಾನಿ ಮೋದಿಯವರ ಪ್ರಚಾರ ಅಭಿಯಾನವನ್ನಾಗಿ ಮಾರ್ಪಡಿಸಲಾಗಿದೆ ಎನ್ನುವುದು ಅರ್ಜಿದಾರರ ದೂರಾಗಿತ್ತು. ಪಾವತಿ ಮಾಡಿ ಪಡೆದಿರುವ ಲಸಿಕೆಯ ಪ್ರಮಾಣ ಪತ್ರದಲ್ಲಿಯೂ ಮೋದಿಯವರ ಚಿತ್ರವಿದ್ದ ಬಗ್ಗೆ ಆಕ್ಷೇಪಿಸಲಾಗಿತ್ತು.