ಸುದ್ದಿಗಳು

[ಪಿಎಂಸಿ ಬ್ಯಾಂಕ್ ವಂಚನೆ ಪ್ರಕರಣ] ರಾಕೇಶ್ ವಾಧವಾನ್ ಜಾಮೀನು ಅರ್ಜಿ ತಿರಸ್ಕರಿಸಿದ ಬಾಂಬೆ ಹೈಕೋರ್ಟ್

Bar & Bench

ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ (ಪಿಎಂಸಿ) ಬಹುಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೌಸಿಂಗ್ ಡೆವಲಪ್‌ಮೆಂಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಎಚ್‌ಡಿಐಎಲ್) ಸಂಸ್ಥಾಪಕ ರಾಕೇಶ್ ವಾಧವಾನ್ ಅವರಿಗೆ ವೈದ್ಯಕೀಯ ಜಾಮೀನು ನೀಡಲು ಬಾಂಬೆ ಹೈಕೋರ್ಟ್‌ ನಿರಾಕರಿಸಿದೆ.

ತಮಗೆ ವಯಸ್ಸಾಗಿರುವ ಹಿನ್ನೆಲೆಯಲ್ಲಿ, ತಮ್ಮ ಆರೋಗ್ಯಸ್ಥಿತಿಯನ್ನು ಪರಿಗಣಿಸಿ ಬಿಡುಗಡೆ ಮಾಡುವಂತೆ ವಾಧವಾನ್‌ ಕೋರಿದ್ದರು. ಪಿಎಂಸಿಬ್ಯಾಂಕ್ ಬಹುಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ವಾಧವಾನ್ ಅವರನ್ನು ಬಂಧಿಸಲಾಗಿದ್ದು ಇವರ ವಿರುದ್ಧ ಜಾರಿ ನಿರ್ದೇಶನಾಲಯ ಮತ್ತು ಮುಂಬೈ ಪೊಲೀಸ್‌ ಆರ್ಥಿಕ ಅಪರಾಧ ದಳ ಪ್ರಕರಣ ದಾಖಲಿಸಿವೆ.

ಕೆಇಎಂ ಆಸ್ಪತ್ರೆಗೆ ದಾಖಲಾಗಿರುವ ವಾಧವಾನ್ ಅಲ್ಲಿ ಹೃದಯ ಚಿಕಿತ್ಸಾ ಸೌಲಭ್ಯ ಇಲ್ಲದಿರುವುದರಿಂದ ಖಾಸಗಿ ಆಸ್ಪತ್ರೆಗೆ ವರ್ಗಾಯಿಸುವಂತೆ ಕೋರಿದ್ದರು. ನ್ಯಾಯಾಲಯದ ನಿರ್ದೇಶನದಂತೆ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಒಬ್ಬರು ವರದಿ ಸಲ್ಲಿಸಿದ್ದು ಅದರಲ್ಲಿ ವಾಧವಾನ್‌ ಅವರಿಗೆ ಪೇಸ್‌ಮೇಕರ್‌ ಅಳವಡಿಸುವ ಅಗತ್ಯವಿದೆ ಎಂದು ಉಲ್ಲೇಖಿಸಲಾಗಿತ್ತು.

ವಾಧವಾನ್‌ ಅವರಿಗೆ ಶಾಶ್ವತ ಪೇಸ್‌ಮೇಕರ್‌ ಅಳವಡಿಸಬೇಕು ಎಂದು ಹೃದಯ ತಜ್ಞರು ಹೇಳಿದ್ದಾರೆ ಇದರಿಂದ ಅವರ ಆರೋಗ್ಯದಲ್ಲಿ ಸುಧಾರಣೆಯಾಗಲಿದೆ ಎಂಬದಾಗಿ ಹಿರಿಯ ನ್ಯಾಯವಾದಿ ಆಬಾದ್‌ ಪೊಂಡಾ ವಾದಿಸಿದರು. ಆದರೆ ಎಲ್ಲಾಅಗತ್ಯ ಸೌಲಭ್ಯ ಇರುವುದರಿಂದ ಜೆ ಜೆ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡಬಹುದು ಎಂದು ಪಬ್ಲಿಕ್‌ ಪ್ರಾಸಿಕ್ಯೂಟರ್‌ ತಿಳಿಸಿದರು.

ಮಂಗಳವಾರ ವಾಧವಾನ್‌ ಪರ ವಾದಿಸಿದ್ದ ವಕೀಲ ಎ ಬೊಬ್ಡೆ ಅವರು ಇದಾಗಲೇ ವಾಧವಾನ್‌ ಅವರಿಗೆ ಪೇಸ್‌ಮೇಕರ್‌ ಅನ್ನು ಕೆಇಎಂ ಆಸ್ಪತ್ರೆಯಲ್ಲಿ ಅಳವಡಿಸಲಾಗಿದೆ. ಹೃದಯ ಶುಶ್ರೂಷಾ ಘಟಕವಿರುವ ಖಾಸಗಿ ಆಸ್ಪತ್ರೆಗೆ ತೆರಳಬೇಕಿರುವುದರಿಂದ ವೈದ್ಯಕೀಯ ಜಾಮೀನು ನೀಡುವಂತೆ ಕೋರಿದ್ದರು. ಇದಕ್ಕೆ ರಾಜ್ಯ ಸರ್ಕಾರದ ಪರ ವಕೀಲರು ಇನ್ನೊಂದು ವಾರದ ಅವಧಿಯಲ್ಲಿಯೇ ಕೆಇಎಂನಲ್ಲಿ ಹೃದಯ ಶುಶ್ರೂಷಾ ಘಟಕವನ್ನು ಆರಂಭಿಸಲಾಗುವುದು. ಹಾಗಾಗಿ, ಅವರಿಗೆ ಜಾಮೀನು ನೀಡುವ ಅಗತ್ಯವಿಲ್ಲ ಎಂದಿದ್ದರು. ಅಂತಿಮವಾಗಿ ಬುಧವಾರ ಆದೇಶ ಕಾಯ್ದಿರಿಸಿದ್ದ ನ್ಯಾ. ನಿತಿನ್‌ ಸಾಂಬ್ರೆ ಇಂದು ವಾಧವಾನ್‌ ಜಾಮೀನು ಅರ್ಜಿ ತಿರಸ್ಕರಿಸಿ ತೀರ್ಪು ಪ್ರಕಟಿಸಿದರು.