ದೇಶದ ಭದ್ರತೆ ಮೇಲೆ ಆಧಾರ್ ವಂಚನೆ ಪರಿಣಾಮ: ಜಾಗರೂಕವಾಗಿರುವಂತೆ ಕೇಂದ್ರ, ರಾಜ್ಯಗಳಿಗೆ ಸೂಚಿಸಿದ ಕರ್ನಾಟಕ ಹೈಕೋರ್ಟ್

ಇಂತಹ ಪ್ರಕರಣಗಳು ಹೆಚ್ಚುತ್ತಿದ್ದು, ರಾಷ್ಟ್ರೀಯ ಭದ್ರತೆಯ ಮೇಲೆ ಅವು ಬೀರಬಹುದಾದ ಪರಿಣಾಮದ ಬಗ್ಗೆ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಎಚ್ಚರಿಕೆ ನೀಡಿತು.
ದೇಶದ ಭದ್ರತೆ ಮೇಲೆ ಆಧಾರ್ ವಂಚನೆ ಪರಿಣಾಮ: ಜಾಗರೂಕವಾಗಿರುವಂತೆ ಕೇಂದ್ರ, ರಾಜ್ಯಗಳಿಗೆ ಸೂಚಿಸಿದ ಕರ್ನಾಟಕ ಹೈಕೋರ್ಟ್
Published on

ಆಧಾರ್‌ ನೋಂದಣಿ ವಂಚನೆ ಘಟನೆಗಳಿಗೆ ಸಂಬಂಧಿಸಿದಂತೆ ನಿಗಾ ಇಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಕರ್ನಾಟಕ ಹೈಕೋರ್ಟ್‌ ತಿಳಿಸಿದೆ [ನರೇಶ್ ಕುಮಾರ್ ಆರ್ ಪಿ ಮತ್ತು ಕರ್ನಾಟಕ ಸರ್ಕಾರ ನಡುವಣ ಪ್ರಕರಣ].

ಇಂತಹ ಪ್ರಕರಣಗಳು ಹೆಚ್ಚುತ್ತಿದ್ದು, ರಾಷ್ಟ್ರೀಯ ಭದ್ರತೆಯ ಮೇಲೆ ಅವು ಬೀರಬಹುದಾದ ಪರಿಣಾಮದ ಬಗ್ಗೆ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಎಚ್ಚರಿಕೆ ನೀಡಿತು.

Also Read
ಪುದುಚೆರಿ ಬಿಜೆಪಿ ಪ್ರಚಾರ: ಆಧಾರ್‌ ಮಾಹಿತಿ ಸೋರಿಕೆ ಬಗ್ಗೆ ವಿಶ್ವಾಸಾರ್ಹ ಸಾಕ್ಷ್ಯ; ತನಿಖೆಗೆ ಹೈಕೋರ್ಟ್ ಆದೇಶ

ಭಾರತೀಯ ದಂಡ ಸಂಹಿತೆಯ ವಿವಿಧ ನಿಬಂಧನೆಗಳ ಅಡಿ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಎಜುರೇಸ್‌ ಕಂಪೆನಿಯ ಸಿಇಒ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಅರ್ಜಿದಾರರ ಪರವಾಗಿ ವಕೀಲ ಮೂರ್ತಿ ನಾಯಕ್‌ ವಾದಿಸಿದ್ದರು. ಕೇಂದ್ರ ಸರ್ಕಾರವನ್ನು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಶಾಂತಿ ಭೂಷಣ್‌ ಪ್ರತಿನಿಧಿಸಿದ್ದರು.

ಎರಡೂ ಕಡೆಯ ವಾದಗಳನ್ನು ಆಲಿಸಿದ ಬಳಿಕ ನ್ಯಾಯಾಲಯವು ಅರ್ಜಿದಾರರು ಆಧಾರ್‌ ನೋಂದಣಿಯ ಉಚಿತ ಕಿಟ್‌ಗಳ ವ್ಯಾಪಾರದಲ್ಲಿ ತೊಡಗಿಕೊಂಡಿರುವುದು ಯಾವುದೇ ಲೋಪವಿಲ್ಲದೆ ಸ್ಪಷ್ಟವಾಗಿದೆ. ಇದು ನಿಸ್ಸಂದೇಹವಾಗಿ ಐಪಿಸಿ ಸೆಕ್ಷನ್ 420ರ ಅಡಿ ಶಿಕ್ಷಾರ್ಹ ಅಪರಾಧವಾಗಲಿದ್ದು ಹಾಗೆ ನೋಡಿದರೆ ಇದು ಮೋಸ ಮಾಡುವ ಉದ್ದೇಶದಿಂದ ಮಾತ್ರವೇ ಎಸಗಿದ ಕೃತ್ಯ ಎಂದು ಅಭಿಪ್ರಾಯಪಟ್ಟಿತು.

ಆದ್ದರಿಂದ, ಹೊರಡಿಸಲಾದ ನೋಟಿಸ್‌ ಮತ್ತು ಸಂಗ್ರಹಿಸಲಾಗಿರುವ ಹಣದ ಸಮರ್ಥನೆ ಕುರಿತಾಗಿ ಅರ್ಜಿದಾರರು ತಪ್ಪಿಲ್ಲದೆ ಹೊರಬರುವುದು ವಿಚಾರಣೆಯ ವಿಷಯವಾಗಿದೆ. ಆಧಾರ್‌ ಕಿಟ್‌ ಮಾರಾಟ ಮಾಡಲು ಐದು ಆಯ್ಕೆಗಳ ಅಡಿಯಲ್ಲಿ ಸಂಗ್ರಹಿಸಲಾಗಿರುವ ಹಣ ರೂ. 40,000 ದಿಂದ 1,85,000 ವರೆಗೆ ಇದ್ದು ʼನಮ್ಮ ಕೇಂದ್ರʼದಲ್ಲಿ ಆಧಾರ್‌ ನೋಂದಣಿಗಾಗಿ ಪಡೆಯುವ ಹಣ ರೂ.100/- ರಿಂದ ರೂ .200/- ವರೆಗೆ ಇರುತ್ತದೆ ಎಂದು ಅಭಿಪ್ರಾಯಪಟ್ಟಿತು.

ಯುಐಡಿಎಐ ಅಧಿಕಾರಿ ಸಾಮಾನ್ಯ ನಾಗರಿಕನಂತೆ ಆಧಾರ್‌ ಕಾರ್ಡ್‌ ಪಡೆಯಲು ʼನಮ್ಮ ಕೇಂದ್ರʼಕ್ಕೆ ಭೇಟಿ ನೀಡಿದಾಗ ಅರ್ಜಿದಾರರು ಆಧಾರ್‌ ಕಿಟ್‌ ಮತ್ತು ಕಾರ್ಡ್‌ಗಳನ್ನು ಮಾರಾಟ ಮಾಡುವ ದಾಖಲಾತಿ ಏಜೆನ್ಸಿಯೊಂದಿಗೆ ದುಷ್ಕೃತ್ಯ ಎಸಗಿರುವುದು ಕಂಡುಬಂದಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಈ ಹಿನ್ನೆಲೆಯಲ್ಲಿ ಎಫ್‌ಐಆರ್‌ ರದ್ದುಗೊಳಿಸಲು ನಿರಾಕರಿಸಿದ ಪೀಠ ಅರ್ಜಿ ವಜಾಗೊಳಿಸಿತು.

Kannada Bar & Bench
kannada.barandbench.com