Karnataka HC and JSW 
ಸುದ್ದಿಗಳು

ಅಕ್ರಮ ಹಣ ವರ್ಗಾವಣೆ ಪ್ರಕರಣ: ಜೆಎಸ್‌ಡಬ್ಲ್ಯು ಸ್ಟೀಲ್ಸ್‌ ಮನವಿ ತಿರಸ್ಕರಿಸಿದ ಹೈಕೋರ್ಟ್‌

ಖಾಸಗಿ ದೂರಿಗೆ ಬದಲಾಗಿ ಪೊಲೀಸ್‌ ವರದಿ ಆಧರಿಸಿ ಸಂಜ್ಞೇಯ ಪರಿಗಣಿಸಿರುವುದರಿಂದ ನ್ಯಾಯಾಧೀಶರು ಸಕಾರಣ ಸಹಿತ ಆದೇಶ ಹೊರಡಿಸುವ ಅಗತ್ಯವಿಲ್ಲ ಎಂದು ಹೈಕೋರ್ಟ್‌ ಹೇಳಿದೆ.

Bar & Bench

ಗಣಿ ಹಗರಣದ ಪ್ರಮುಖ ಆರೋಪಿ ಮಾಜಿ ಸಚಿವ ಜಿ ಜನಾರ್ದನ ರೆಡ್ಡಿ ಒಡೆತನದ ಓಬಳಾಪುರಂ ಮೈನಿಂಗ್‌ ಕಂಪೆನಿ ಪ್ರೈ. ಲಿ. (ಓಎಂಸಿ) ಜೊತೆಗಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಕಾಯಿದೆ ಆರೋಪದ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಲಯವು ಸಂಜ್ಞೇಯ ಅಪರಾಧ ಪರಿಗಣಿಸಿರುವುದನ್ನು ಪ್ರಶ್ನಿಸಿ ಜೆಎಸ್‌ಡಬ್ಲ್ಯು ಸ್ಟೀಲ್‌ ಲಿಮಿಟೆಡ್‌ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ತಿರಸ್ಕರಿಸಿದೆ.

ಜೆಎಸ್‌ಡಬ್ಲ್ಯು ವಿರುದ್ಧ ವಿಶೇಷ ನ್ಯಾಯಾಲಯವು 2022ರ ಏಪ್ರಿಲ್‌ 11ರಂದು ಸಂಜ್ಞೇಯ ಅಪರಾಧ ಪರಿಗಣಿಸಿರುವುದು ಸುಪ್ರೀಂ ಕೋರ್ಟ್‌ ರೂಪಿಸಿರುವ ತತ್ವಗಳಿಗೆ ಅನುಸಾರವಾಗಿದೆ ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಹೇಳಿದೆ.

“ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಿರುವುದಾಗಿ ಹೇಳಿದ್ದಾರೆ. ಖಾಸಗಿ ದೂರಿಗೆ ಬದಲಾಗಿ ಪೊಲೀಸ್‌ ವರದಿ ಆಧರಿಸಿ ಸಂಜ್ಞೇಯ ಪರಿಗಣಿಸಿರುವುದರಿಂದ ನ್ಯಾಯಾಧೀಶರು ಸಕಾರಣ ಸಹಿತ ಆದೇಶ ಹೊರಡಿಸುವ ಅಗತ್ಯವಿಲ್ಲ” ಎಂದು ಹೈಕೋರ್ಟ್‌ ಹೇಳಿದ್ದು, ಅಪರಾಧ ಪರಿಣಿಸುವಾಗ ವಿಶೇಷ ನ್ಯಾಯಾಲಯವು ವಿವೇಚನೆಯನ್ನು ಬಳಸಿಲ್ಲ ಎಂಬ ಜೆಎಸ್‌ಡಬ್ಲ್ಯು ವಾದವನ್ನು ತಿರಸ್ಕರಿಸಿದೆ.

ಅಕ್ರಮ ಗಣಿಗಾರಿಕೆ, ಅದಿರು ಸಾಗಣೆ ಮತ್ತು ಅದಿರು ರಫ್ತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ 2012ರಲ್ಲಿ ಜನಾರ್ದನ ರೆಡ್ಡಿ ಮತ್ತು ಸಂಬಂಧಿತ ಕಂಪೆನಿಗಳ ವಿರುದ್ಧ ತನಿಖೆ ನಡೆಸುವಂತೆ ಕೇಂದ್ರೀಯ ತನಿಖಾ ದಳಕ್ಕೆ ಆದೇಶಿಸಿತ್ತು. ಇದರ ಬೆನ್ನಿಗೇ ಜಾರಿ ನಿರ್ದೇಶನಾಲಯವು ಸಹ ತನಿಖೆ ಶುರು ಮಾಡಿತ್ತು. ಈ ವೇಳೆ ಓಎಂಸಿ ಜೊತೆ ಜೆಎಸ್‌ಡಬ್ಲ್ಯು ವ್ಯವಹಾರದ ಕುರಿತು ಜಾರಿ ನಿರ್ದೇಶನಾಲಯ ತನಿಖೆ ಕೈಗೊಂಡಿತ್ತು.

ಆನಂತರ ಜಾರಿ ನಿರ್ದೇಶನಾಲಯದ ತನಿಖಾ ವರದಿ ಆಧರಿಸಿ, ಜೆಎಸ್‌ಡಬ್ಲ್ಯು ಮತ್ತು ಇತರೆ ಕಂಪೆನಿಗಳ ವಿರುದ್ಧ ಅಕ್ರಮ ಹಣ ವರ್ಗಾವಣೆ ಕಾಯಿದೆ ಅಡಿ ವಿಶೇಷ ನ್ಯಾಯಾಲಯವು ಸಂಜ್ಞೇಯ ಅಪರಾಧವನ್ನು ಪರಿಗಣಿಸಿತ್ತು. ತನ್ನ ವಿಜಯನಗರದ ಸ್ಟೀಲ್‌ ಪ್ಲಾಂಟ್‌ಗೆ 1.5 ಮಿಲಿಯನ್‌ ಟನ್‌ ಕಬ್ಬಿಣದ ಅದಿರು ಪೂರೈಕೆಗೆ ಸಂಬಂಧಿಸಿದಂತೆ ಓಎಂಸಿ ಜೊತೆ 2009ರಲ್ಲಿ ವ್ಯವಹಾರ ನಡೆಸಿದ್ದು, ಅದಕ್ಕಾಗಿ ಓಎಂಸಿಗೆ 130 ಕೋಟಿ ರೂಪಾಯಿ ಪಾವತಿಸಿದ್ದಾಗಿ ಜೆಎಸ್‌ಎಬ್ಲ್ಯು ವಾದಿಸಿತ್ತು.

2010ರ ಬಳಿಕ ಅದಿರು ಪೂರೈಸದೇ ಗುತ್ತಿಗೆ ಕರಾರು ಉಲ್ಲಂಘಿಸಿದ್ದ ಓಎಂಸಿಯ ಮೇಲೆ ಒತ್ತಡ ಹಾಕಿದ ಹಿನ್ನೆಲೆಯಲ್ಲಿ ಸಹೋದರ ಕಂಪೆನಿಗಳ ಮೂಲಕ ಓಎಂಸಿಯು ಒಂದಿಷ್ಟು ಅದಿರು ಪೂರೈಸಿತ್ತು ಎಂದು ಜೆಎಸ್‌ಡಬ್ಲ್ಯು ವಾದ ಮಂಡಿಸಿತ್ತು.

ಓಎಂಸಿಗೆ ಹಣ ಪಾವತಿಸಿದ್ದು, ಅವರಿಂದ ಹಣ ಸ್ವೀಕರಿಸಿಲ್ಲ. ಇಂದಿಗೂ ಓಎಂಸಿಯು ಜೆಎಸ್‌ಡಬ್ಲ್ಯುಗೆ ಕೋಟ್ಯಂತರ ರೂಪಾಯಿ ಪಾವತಿಸಬೇಕಿದೆ. ₹35.45 ಕೋಟಿ ರೂಪಾಯಿ ಮತ್ತು ಅದರ ಸಂಬಂಧಿತ ನಷ್ಟವನ್ನು ಓಎಂಸಿಯಿಂದ ವಾಪಸ್‌ ಪಡೆಯುವುದಕ್ಕೆ ಸಂಬಂಧಿಸಿದಂತೆ ಮಧ್ಯಸ್ಥಿಕೆ ಪ್ರಕ್ರಿಯೆಯನ್ನೂ ಆರಂಭಿಸಲಾಗಿದೆ ಎಂದು ಜೆಎಸ್‌ಡಬ್ಲ್ಯು ವಾದಿಸಿತ್ತು.