ಅಕ್ರಮ ಹಣ ವರ್ಗಾವಣೆ ಪ್ರಕರಣ: ಜೆಎಸ್‌ಡಬ್ಲು ಸ್ಟೀಲ್ಸ್‌ ಅಧಿಕಾರಿಗಳ ವಿರುದ್ದ ಕ್ರಮಕೈಗೊಳ್ಳದಂತೆ ಆದೇಶಿಸಿದ ಹೈಕೋರ್ಟ್‌

ಪ್ರಕರಣವು ವಿಲೇವಾರಿಯಾಗುವವರೆಗೂ ಜೆಎಸ್‌ಡಬ್ಲು ಸ್ಟೀಲ್ಸ್‌ ಲಿಮಿಟೆಡ್‌ ಅಧಿಕಾರಿಗಳನ್ನು ವಶಕ್ಕೆ ಪಡೆಯದಂತೆ ಜಾರಿ ನಿರ್ದೇಶನಾಲಯದ ಉಪ ನಿರ್ದೇಶಕರನ್ನು ನಿರ್ಬಂಧಿಸಿರುವ ಮಧ್ಯಂತರ ಆದೇಶವು ಚಾಲ್ತಿಯಲ್ಲಿರಲಿದೆ ಎಂದ ಹೈಕೋರ್ಟ್‌.
Karnataka HC and  JSW
Karnataka HC and JSW
Published on

ಅಕ್ರಮ ಗಣಿಗಾರಿಕೆ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೆಎಸ್‌ಡಬ್ಲು ಸ್ಟೀಲ್ಸ್‌ ಲಿಮಿಟೆಡ್‌ ಅಧಿಕಾರಿಗಳನ್ನು ವಶಕ್ಕೆ ಪಡೆಯದಂತೆ ಜಾರಿ ನಿರ್ದೇಶನಾಲಯದ ಉಪ ನಿರ್ದೇಶಕರನ್ನು ನಿರ್ಬಂಧಿಸಿ ಕಳೆದ ವರ್ಷದ ಡಿಸೆಂಬರ್‌ 14ರಂದು ತಾನೇ ನೀಡಿದ್ದ ಮಧ್ಯಂತರ ಆದೇಶವನ್ನು ತೆರವು ಮಾಡಿದ್ದ ಏಕಸದಸ್ಯ ಪೀಠದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠವು ಈಚೆಗೆ ಬದಿಗೆ ಸರಿಸಿದ್ದು, ಮಧ್ಯಂತರ ಆದೇಶ ಮುಂದುವರಿಯಲಿದೆ ಎಂದಿದೆ.

ನ್ಯಾಯಮೂರ್ತಿ ಎಸ್‌ ಜಿ ಪಂಡಿತ್‌ ಅವರಿದ್ದ ಏಕಸದಸ್ಯ ಪೀಠವು ಮಾರ್ಚ್‌ 4ರಂದು ಮಧ್ಯಂತರ ಆದೇಶವನ್ನು ತೆರವು ಮಾಡಿದ್ದನ್ನು ಪ್ರಶ್ನಿಸಿ ಪರಿಹಾರ ಕೋರಿ ಜೆಎಸ್‌ಡಬ್ಲು ಸ್ಟೀಲ್ಸ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರಿದ್ದ ವಿಭಾಗೀಯ ಪೀಠವು ಮಾನ್ಯ ಮಾಡಿದೆ.

“ಏಕಸದಸ್ಯ ಪೀಠದ ಮುಂದಿರುವ ಪ್ರಕರಣವು ವಿಲೇವಾರಿಯಾಗುವವರೆಗೂ ಜೆಎಸ್‌ಡಬ್ಲು ಸ್ಟೀಲ್ಸ್‌ ಲಿಮಿಟೆಡ್‌ ಅಧಿಕಾರಿಗಳನ್ನು ವಶಕ್ಕೆ ಪಡೆಯದಂತೆ ಜಾರಿ ನಿರ್ದೇಶನಾಲಯದ ಉಪ ನಿರ್ದೇಶಕರನ್ನು ನಿರ್ಬಂಧಿಸಿರುವ ಮಧ್ಯಂತರ ಆದೇಶವು ಚಾಲ್ತಿಯಲ್ಲಿರಲಿದೆ” ಎಂದಿರುವ ವಿಭಾಗೀಯ ಪೀಠವು ಪ್ರಕರಣವನ್ನು ತುರ್ತಾಗಿ ವಿಲೇವಾರಿ ಮಾಡುವಂತೆ ಏಕಸದಸ್ಯ ಪೀಠಕ್ಕೆ ಆದೇಶ ಮಾಡಿದೆ.

ಜೆಎಸ್‌ಡಬ್ಲು ಪ್ರತಿನಿಧಿಸಿದ್ದ ಹಿರಿಯ ವಕೀಲರಾದ ಮುಕುಲ್‌ ರೋಹಟ್ಗಿ ಮತ್ತು ಸಜ್ಜನ್‌ ಪೂವಯ್ಯ ಅವರು “ಅಸಿಂಧುವಾಗಿರುವ ಆದೇಶದಲ್ಲಿನ ನಿಯಮಗಳ ಅನ್ವಯ ಯಾವುದೇ ಪ್ರಕ್ರಿಯೆ ಮುಂದುವರಿಸದಂತೆ, ಸಮನ್ಸ್‌ ಜಾರಿ ಮಾಡದಂತೆ ಹಾಗೂ ಜೆಎಸ್‌ಡಬ್ಲು ಸ್ಟೀಲ್ಸ್‌ ಮತ್ತು ಅದರ ಅಧಿಕಾರಿಗಳ ವಿರುದ್ಧ ಯಾವುದೇ ತೆರನಾದ ದುರುದ್ದೇಶಪೂರಿತ ಕ್ರಮಕೈಗೊಳ್ಳದಂತೆ ಜಾರಿ ನಿರ್ದೇಶನಾಲಯಕ್ಕೆ ನಿರ್ದೇಶಿಸಬೇಕು ಎಂದು ಮಧ್ಯಪ್ರವೇಶ ಮನವಿ ಸಲ್ಲಿಸಲಾಗಿತ್ತು. ವಿಚಾರಣೆಯನ್ನು ಮೇಲಿನ ಕೋರಿಕೆಗಷ್ಟೇ ಸೀಮಿತಗೊಳಿಸಬೇಕಿದ್ದ ಏಕಸದಸ್ಯ ಪೀಠವು ಮಧ್ಯಂತರ ಆದೇಶದಲ್ಲಿ ಮಾರ್ಪಾಡು ಕೋರಿ ಜಾರಿ ನಿರ್ದೇಶನಾಲಯ ಮನವಿ ಸಲ್ಲಿಸದಿದ್ದರೂ ಅದನ್ನು ತೆರವು ಮಾಡಿದೆ. ಹೀಗಾಗಿ, ಏಕಸದಸ್ಯ ಪೀಠದ ಆದೇಶವನ್ನು ವಜಾ ಮಾಡಬೇಕು. ಮಧ್ಯಂತರ ಆದೇಶವನ್ನು ಮುಂದುವರಿಸಬೇಕು” ಎಂದು ಕೋರಿದ್ದರು.

ಜಾರಿ ನಿರ್ದೇಶನಾಲಯವನ್ನು ಪ್ರತಿನಿಧಿಸಿದ್ದ ವಕೀಲ ಮಧುಕರ್‌ ದೇಶಪಾಂಡೆ ಅವರು “ಜೆಎಸ್‌ಡಬ್ಲು ಸ್ಟೀಲ್ಸ್‌ ಪರವಾಗಿನ ಮಧ್ಯಂತರ ಆದೇಶವು ಕಾಲಮಿತಿಗೆ ಸಂಬಂಧಿಸಿದ್ದು, ಮೇಲಿಂದ ಮೇಲೆ ಅದನ್ನು ವಿಸ್ತರಿಸಲಾಗಿದೆ. ಉಭಯ ಪಕ್ಷಕಾರರನ್ನು ಆಲಿಸಿದ ಬಳಿಕ ಏಕಸದಸ್ಯ ಪೀಠವು ಆಕ್ಷೇಪಾರ್ಹವಾದ ಮಧ್ಯಂತರ ಆದೇಶವನ್ನು ತೆರವು ಮಾಡಿತ್ತು. ಹೀಗಾಗಿ, ಜೆಎಸ್‌ಡಬ್ಲು ಮೇಲ್ಮನವಿಯನ್ನು ಮಾನ್ಯ ಮಾಡಬಾರದು” ಎಂದು ಕೋರಿದ್ದರು.

ಏಕಸದಸ್ಯ ಪೀಠದ ಆದೇಶ ಏನಿತ್ತು?

2021ರ ಡಿಸೆಂಬರ್‌ 14ರ ವಿಚಾರಣೆಯಂದು “ಜೆಎಸ್‌ಡಬ್ಲು ಸ್ಟೀಲ್ಸ್‌ ಅಧಿಕಾರಿಗಳನ್ನು ಬಂಧಿಸುವ ಮತ್ತು ವಶಕ್ಕೆ ಪಡೆಯುವ ಆತಂಕವಿದೆ. ಹೀಗಾಗಿ, ಅವರಿಗೆ ರಕ್ಷಣೆ ಒದಗಿಸಬೇಕು” ಎಂದು ಜೆಎಸ್‌ಡಬ್ಲು ಸ್ಟೀಲ್ಸ್‌ ಪರ ಹಿರಿಯ ವಕೀಲ ಉದಯ್‌ ಹೊಳ್ಳ ಕೋರಿದ್ದರು. ಇದನ್ನು ಮಾನ್ಯ ಮಾಡಿದ್ದ ನ್ಯಾ. ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ಏಕಸದಸ್ಯ ಪೀಠವು “ಮುಂದಿನ ವಿಚಾರಣೆಯವರೆಗೆ ಜೆಎಸ್‌ಡಬ್ಲು ಸ್ಟೀಲ್ಸ್‌ನ ಅಧಿಕಾರಿಗಳನ್ನು ಬಂಧಿಸುವುದಾಗಲಿ ಅಥವಾ ವಶಕ್ಕೆ ಪಡೆಯುವುದಾಗಲಿ ಮಾಡುವಂತಿಲ್ಲ” ಎಂದು ಜಾರಿ ನಿರ್ದೇಶನಾಲಯಕ್ಕೆ ಆದೇಶಿಸಿತ್ತು. ಆ ಬಳಿಕ ಕಾಲಕಾಲಕ್ಕೆ ಮಧ್ಯಂತರ ಆದೇಶವನ್ನು ವಿಸ್ತರಿಸುತ್ತಾ ಬರಲಾಗಿತ್ತು.

Also Read
ಜಿಂದಾಲ್‌ಗೆ 3,667 ಎಕರೆ ಸರ್ಕಾರಿ ಜಮೀನು ಪರಭಾರೆ: ಸಂಪುಟ ಸಭೆ ನಿರ್ಧಾರ ಪ್ರಶ್ನಿಸಿದ್ದ ಅರ್ಜಿ ವಜಾ ಮಾಡಿದ ಹೈಕೋರ್ಟ್‌

2022ರ ಮಾರ್ಚ್‌ 4ರಂದು ನ್ಯಾ. ಪಂಡಿತ್‌ ಅವರ ನೇತೃತ್ವದ ಏಕಸದಸ್ಯ ಪೀಠವು “2021ರ ಅಕ್ಟೋಬರ್‌ 27ರಂದು ಜಾರಿ ನಿರ್ದೇಶನಾಲಯ ಹೊರಡಿಸಿರುವ ಆದೇಶಕ್ಕೆ ಸಂಬಂಧಿಸಿದಂತೆ ಜೆಎಸ್‌ಡಬ್ಲು ಸ್ಟೀಲ್ಸ್‌ ಅಧಿಕಾರಿಗಳ ವಿರುದ್ಧ ಯಾವುದೇ ದುರುದ್ದೇಶಪೂರಿತ ಕ್ರಮಕೈಗೊಳ್ಳಬಾರದು ಎಂದು ಮಧ್ಯಂತರ ಆದೇಶ ಮಾಡಿತ್ತು. ಇಲ್ಲಿ ಅಕ್ರಮ ಹಣ ವರ್ಗಾವಣೆ ಕಾಯಿದೆಯ (ಪಿಎಂಎಲ್‌ಎ) ಸೆಕ್ಷನ್‌ 3ರ ಅಡಿ ತನಿಖೆಗಾಗಿ ಜಾರಿ ನಿರ್ದೇಶನಾಲಯ ಸಮನ್ಸ್‌ ಜಾರಿ ಮಾಡಿರುವುದು ಸದರಿ ರಿಟ್‌ ಮನವಿಯ ವಿಷಯವಾಗಿಲ್ಲ. ಪಿಎಂಎಲ್‌ಎ ಸೆಕ್ಷನ್‌ 5ರ ಅಡಿ ಪ್ರಕ್ರಿಯೆ ಮಾತ್ರ ಮನವಿಯ ವಿಷಯವಾಗಿದೆ. ಹೀಗಾಗಿ, 2021ರ ಡಿಸೆಂಬರ್‌ 14ರ ಮಧ್ಯಂತರ ಆದೇಶವನ್ನು ತೆರವು ಮಾಡಲಾಗಿದೆ ಎಂದು ಏಕಸದಸ್ಯ ಪೀಠವು ಆದೇಶದಲ್ಲಿ ಸ್ಪಷ್ಟಪಡಿಸಿತ್ತು. ಇದನ್ನು ಪ್ರಶ್ನಿಸಿ ವಿಭಾಗೀಯ ಪೀಠದ ಮುಂದೆ ಜೆಎಸ್‌ಡಬ್ಲು ಸ್ಟೀಲ್ಸ್‌ ಮೇಲ್ಮನವಿ ಸಲ್ಲಿಸಿತ್ತು. ಇದನ್ನು ಪುರಸ್ಕರಿಸಲಾಗಿದೆ.

Attachment
PDF
JSW Steel Ltd V. Enforcement Directorate.pdf
Preview
Kannada Bar & Bench
kannada.barandbench.com