<div class="paragraphs"><p>Solicitor General of India Tushar Mehta</p></div>

Solicitor General of India Tushar Mehta

 
ಸುದ್ದಿಗಳು

[ಅಕ್ರಮ ಹಣ ವರ್ಗಾವಣೆ] ತನಿಖೆ ಹಂತದಲ್ಲಿ 4,700 ಪ್ರಕರಣ, 20 ವರ್ಷದಲ್ಲಿ 313 ಮಂದಿ ಸೆರೆ: ಸುಪ್ರೀಂಗೆ ಎಸ್‌ಜಿ ಮಾಹಿತಿ

Bar & Bench

ಅಕ್ರಮ ಹಣ ವರ್ಗಾವಣೆ ನಿಯಮಾವಳಿಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ವಾದ ಮಂಡಿಸಿದರು.

ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್, ದಿನೇಶ್ ಮಾಹೇಶ್ವರಿ ಹಾಗೂ ಸಿ ಟಿ ರವಿಕುಮಾರ್ ಅವರಿದ್ದ ತ್ರಿಸದಸ್ಯ ಪೀಠದ ಮುಂದೆ ಅವರು ಮಂಡಿಸಿದ ವಾದದ ಪ್ರಕಾರ ಕಾಯಿದೆಯಡಿ ಪ್ರಸ್ತುತ 4,700 ಪ್ರಕರಣಗಳನ್ನು ಜಾರಿ ನಿರ್ದೇಶನಾಲಯ (ಇ ಡಿ) ತನಿಖೆ ನಡೆಸುತ್ತಿದೆ.

ಎಸ್‌ಜಿ ನೀಡಿದ ಮಾಹಿತಿ

  • ಇ ಡಿ ಕಳೆದ 5 ವರ್ಷಗಳಲ್ಲಿ ಒಟ್ಟು 2,086 ಪ್ರಕರಣಗಳನ್ನು ದಾಖಲಿಸಿದ್ದು ದೇಶದಲ್ಲಿ ದಾಖಲಾಗಿರುವ 33 ಲಕ್ಷ ಪ್ರಕರಣಗಳಿಗೆ ಹೋಲಿಸಿದರೆ ಈ ಕಾಯಿದೆಯಡಿ ದಾಖಲಾದ ಪ್ರಕರಣಗಳ ಶೇಕಡಾವಾರು ಸಂಖ್ಯೆ ಕೇವಲ 0.06ರಷ್ಟು.

  • "2021 ರಲ್ಲಿ 981 ಪ್ರಕರಣಗಳು ದಾಖಲಾಗಿದ್ದು ಅಮೆರಿಕ, ಇಂಗ್ಲೆಂಡ್‌, ಚೀನಾ, ಆಸ್ಟ್ರಿಯಾ, ಬೆಲ್ಜಿಯಂ ಮುಂತಾದ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೋಲಿಸಿದರೆ ಇಲ್ಲಿ ಬಹಳ ಕಡಿಮೆ ಸಂಖ್ಯೆಯ ಪ್ರಕರಣಗಳು ದಾಖಲಾಗಿವೆ.

  • ಕಳೆದ 20 ವರ್ಷಗಳಲ್ಲಿ, ಅಂದರೆ 2002 ರಿಂದಇಲ್ಲಿಯವರೆಗೆ, ಪಿಎಂಎಲ್‌ಎ ಅಡಿ ಬಂಧಿತರಾದವರ ಸಂಖ್ಯೆ ಕೇವಲ 313.

  • ದೇಶವು ಅಕ್ರಮ ಹಣ ವರ್ಗಾವಣೆ ವಿರುದ್ಧದ ಜಾಗತಿಕ ಒಕ್ಕೂಟವಾಗಿರುವ ಹಣಕಾಸು ಕಾರ್ಯಪಡೆಯ (ಎಫ್‌ಎಟಿಎಫ್‌) ಭಾಗವಾಗಿದ್ದು ಭಾರತದ ಕಾನೂನುಗಳು ಜಾಗತಿಕ ಕಾನೂನುಗಳಿಗೆ ಸಮನಾಗಿರಬೇಕು.

  • "ಅಕ್ರಮ ಹಣ ವರ್ಗಾವಣೆ ಹೇಗೆ ತಡೆಯಬೇಕು ಎಂಬುದರ ಕುರಿತು ಎಫ್‌ಎಟಿಎಫ್‌ ಶಿಫಾರಸುಗಳನ್ನು ಮಾಡಿದೆ. ಅದಕ್ಕೆ ರೇಟಿಂಗ್ ಮತ್ತು ಮೌಲ್ಯಮಾಪನವಿದೆ. ಈ ಮೌಲ್ಯಮಾಪನದ ಭಾಗವಾಗಿ, ಕಾನೂನು ಆಡಳಿತ ಮತ್ತು ಆಡಳಿತಾಂಗವನ್ನು ಶ್ರೇಣೀಕರಿಸಲಾಗಿದೆ. ಎಫ್‌ಎಟಿಎಫ್‌ನಲ್ಲಿ 3 ಗ್ರೇಡಿಂಗ್‌ಗಳಿವೆ – ನಾನ್‌ ಕಂಪ್ಲೇಂಟ್, ಕಂಪ್ಲೇಂಟ್‌ ಹಾಗೂ ಅರೆ ಕಂಪ್ಲೇಂಟ್‌. ಈ ಶ್ರೇಣೀಕರಣವು ದೇಶವೊಂದರ ಕ್ರೆಡಿಟ್ ರೇಟಿಂಗ್, ವಿಶ್ವ ಬ್ಯಾಂಕ್ ಮತ್ತು ಎಡಿಬಿಯಿಂದ ಸಾಲ ಸಂಗ್ರಹಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.

  • ಭಾರತದಲ್ಲಿ ಅಕ್ರಮ ಹಣ ವರ್ಗಾವಣೆ ನಡೆದರೆ, ಅದು ಅಮೆರಿಕದ ಮೇಲೆ ಪರಿಣಾಮ ಬೀರುವ ಸಾಮರ್ಥ್ಯ ಹೊಂದಿದ್ದು ಹಲವು ಹಂತಗಳಲ್ಲಿ ಪರಿಣಾಮ ಬೀರಲಿದೆ.

  • ಜಾಗತಿಕ ಜಾಲ, ಎಫ್‌ಎಟಿಎಫ್‌ನ ಶಿಫಾರಸುಗಳನ್ನು ಆಧರಿಸಿ ಪಿಎಂಎಲ್‌ಎ ಮತ್ತು ಅದರ ತಿದ್ದುಪಡಿಗಳು ನಡೆದಿವೆ.

ಆದಾಗ್ಯೂ, ಶಾಸನದ ಸಾಂವಿಧಾನಿಕತೆ ರಕ್ಷಿಸಲು ಇದು ಆಧಾರವಾಗುವುದಿಲ್ಲವಾದ್ದರಿಂದ ಸಾಂವಿಧಾನಿಕತೆಗೆ ಸಂಬಂಧಿಸಿದ ಪ್ರಶ್ನೆಗಳ ಕುರಿತು ನ್ಯಾಯಾಲಯಕ್ಕೆ ತಿಳಿಸಿದರು.

ದೇಶದಿಂದ ಪರಾರಿಯಾದ ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಬಗ್ಗೆ ಅಂಕಿಅಂಶಗಳನ್ನು ಸಲ್ಲಿಸಿದ ಅವರು ಈ ಮೂವರೂ ಮಾಡಿರುವ ಒಟ್ಟು ವಂಚನೆ ರೂ. 22,585 ಕೋಟಿ ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡ ಆಸ್ತಿ ರೂ 19,111 ಕೋಟಿ, ಬ್ಯಾಂಕ್‌ಗಳಿಗೆ ಮರಳಿಸಲಾದ ಆಸ್ತಿ ರೂ 15,113 ಕೋಟಿ.

ಬ್ಯಾಂಕ್‌ಗಳು ಮತ್ತು ಸಂಸ್ಥೆಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ದೇಶ ತೊರೆದಿರುವ ಕೆಲವರು ನ್ಯಾಯಾಲಯಗಳ ರಕ್ಷಣೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ ಆರೋಪಿಗಳಿಗೆ ಬಲವಂತದ ಕ್ರಮಗಳ ಮೂಲಕ ನ್ಯಾಯಾಲಯಗಳು ರಕ್ಷಣೆ ನೀಡಿದ್ದರಿಂದ ಸರ್ಕಾರದ ಬೊಕ್ಕಸಕ್ಕೆ ಸೇರಬೇಕಾದ ₹ 67,000 ಕೋಟಿ ಹಣ ಬಾಕಿ ಉಳಿದಿದೆ.

ಪ್ರಕರಣದ ವಿಚಾರಣೆ ಮಂಗಳವಾರ ಮಾರ್ಚ್ 1ರಂದು ಪುನರಾರಂಭವಾಗಲಿದೆ.