Arvind Kejriwal, PM Modi Twitter
ಸುದ್ದಿಗಳು

ಮೋದಿ ಪದವಿ ಪ್ರಮಾಣಪತ್ರ ಕೋರಿ ಕೇಜ್ರಿವಾಲ್‌ ಆರ್‌ಟಿಐ ಅರ್ಜಿ; 'ಪ್ರಧಾನಿ ಖಾಸಗಿತನಕ್ಕೆ ಧಕ್ಕೆ' ಎಂದ ಗುಜರಾತ್‌ ವಿವಿ

ಇಲ್ಲಿ ಬಚ್ಚಿಡುವಂಥದ್ದೇನು ಇಲ್ಲ. ಆದರೆ, ವಿಶ್ವವಿದ್ಯಾಲಯಕ್ಕೆ ಮಾಹಿತಿ ಬಹಿರಂಗಪಡಿಸಲು ಆಗ್ರಹಿಸಲಾಗದು ಎಂದು ವಿಶ್ವವಿದ್ಯಾಲಯ ಪ್ರತಿನಿಧಿಸಿದ್ದ ಸಾಲಿಸಿಟಿರ್‌ ಜನರಲ್‌ ತುಷಾರ್‌ ಮೆಹ್ತಾ ವಾದ.

Bar & Bench

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪದವಿ ಪ್ರಮಾಣ ಪತ್ರದ ಪ್ರತಿಗಳನ್ನು ನೀಡುವಂತೆ ಕೇಂದ್ರ ಮಾಹಿತಿ ಆಯೋಗ (ಸಿಐಸಿ) ನಿರ್ದೇಶನ ನೀಡಿರುವುದು ಪ್ರಧಾನಿಯವರ ಖಾಸಗಿತನಕ್ಕೆ ಧಕ್ಕೆ ಉಂಟು ಮಾಡುತ್ತದೆ ಎಂದು ಗುಜರಾತ್‌ ವಿಶ್ವವಿದ್ಯಾಲಯವು ಗುರುವಾರ ಗುಜರಾತ್‌ ಹೈಕೋರ್ಟ್‌ಗೆ ತಿಳಿಸಿದೆ.

ಮೋದಿಯವರ ಪದವಿ ಮತ್ತು ಸ್ನಾತಕೋತ್ತರ ಪದವಿಯ ಮಾಹಿತಿ ನೀಡುವಂತೆ ಪ್ರಧಾನ ಮಂತ್ರಿ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿ (ಪಿಐಒ) ಮತ್ತು ಗುಜರಾತ್‌ ಮತ್ತು ದೆಹಲಿ ವಿಶ್ವವಿದ್ಯಾಲಯದ ಪಿಐಒಗಳಿಗೆ ಸಿಐಸಿ ನಿರ್ದೇಶಿಸಿರುವುದನ್ನು ಪ್ರಶ್ನಿಸಿ ಗುಜರಾತ್‌ ವಿಶ್ವವಿದ್ಯಾಲಯ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿರೇನ್‌ ವೈಷ್ಣವ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಆದೇಶ ಕಾಯ್ದಿರಿಸಿದೆ.

ಪ್ರಧಾನಿ ನರೇಂದ್ರ ಮೋದಿಯವರು 1978ರಲ್ಲಿ ಗುಜರಾತ್‌ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿದ್ದು, 1983ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ.

ಪ್ರಕರಣದ ವಿಚಾರಣೆ ವೇಳೆ ಗುಜರಾತ್‌ ವಿಶ್ವವಿದ್ಯಾಲಯವನ್ನು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಪ್ರತಿನಿಧಿಸಿದ್ದರೆ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಹಿರಿಯ ವಕೀಲ ಪೆರ್ಸಿ ಕವಿನಾ ಪ್ರತಿನಿಧಿಸಿದ್ದರು.

ಮೆಹ್ತಾ ವಾದ

  • ಇಲ್ಲಿ ಮುಚ್ಚಿಡುವಂಥದ್ದೇನು ಇಲ್ಲ. ಆದರೆ, ವಿಶ್ವವಿದ್ಯಾಲಯವನ್ನು ಮಾಹಿತಿ ನೀಡುವಂತೆ ಒತ್ತಾಯಿಸಲಾಗದು.

  • ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರ ಹಿಡಿದಿರುವ ವ್ಯಕ್ತಿ ಡಾಕ್ಟರೇಟ್‌ ಪಡೆದಿರಲಿ ಅಥವಾ ಅನಕ್ಷರಸ್ಥನಾಗಿರಲಿ ಅದರಿಂದ ಯಾವುದೇ ವ್ಯತ್ಯಾಸವಾಗದು. ಈ ಪ್ರಕರಣದಲ್ಲಿ ಯಾವುದೇ ತೆರನಾದ ಸಾರ್ವಜನಿಕ ಹಿತಾಸಕ್ತಿ ಅಡಗಿಲ್ಲ. ಅಲ್ಲದೆ, ಪ್ರಧಾನಿಯವರ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ.

  • ಯಾರದೋ ಹುಡುಗಾಟಿಕೆಗೆ ಅಥವಾ ಬೇಜವಾಬ್ದಾರಿಯುತ ಕುತೂಹಲ ತಣಿಸುವುದಕ್ಕೆ ನಮ್ಮನ್ನು ಮಾಹಿತಿ ನೀಡುವಂತೆ ಸೂಚಿಸಲಾಗದು. ಕೇಳಲಾಗಿರುವ ಮಾಹಿತಿಗೂ ಮೋದಿಯವರ ಸಾರ್ವಜನಿಕ ವ್ಯಕ್ತಿತ್ವಕ್ಕೂ ಯಾವುದೇ ಸಂಬಂಧವಿಲ್ಲ.

  • ಒಂದೊಮ್ಮೆ ರಾಷ್ಟ್ರಪತಿಯವರ ಎತ್ತರವೆಷ್ಟು, ಅವರ ಬ್ಯಾಂಕ್‌ ಖಾತೆಯಲ್ಲಿ ಎಷ್ಟು ಹಣವಿದೆ ಇತ್ಯಾದಿ ಮಾಹಿತಿಯನ್ನು ಆರ್‌ಟಿಐ ಅಡಿ ಕೇಳಿದರೆ ಅದಕ್ಕೆ ತರ್ಕವಿದೆಯೇ? ಅದರಲ್ಲಿ ಸಾರ್ವಜನಿಕ ಹಿತಾಸಕ್ತಿ ಇದೆಯೇ?

  • ನಾನು ಏನು ತಿಂಡಿ ತಿಂದೆ ಎಂದು (ಆರ್‌ಟಿಐ ಅಡಿ) ಕೇಳಲಾಗದು. ಆದರೆ, ತಿಂಡಿ ತಿನ್ನಲು ಎಷ್ಟು ಹಣ ವ್ಯಯಿಸಿದ್ದೇನೆ ಎಂಬುದನ್ನು ಕೇಳಬಹುದಾಗಿದೆ.

ಪೆರ್ಸಿ ಕವಿನಾ ವಾದ

  • ಮೋದಿ ಅವರು ಚುನಾವಣೆಯ ಸಂದರ್ಭದಲ್ಲಿ ಸಲ್ಲಿಸಿರುವ ಉಮೇದುವಾರಿಕೆಯಲ್ಲಿ ಶೈಕ್ಷಣಿಕ ಅರ್ಹತೆ ಉಲ್ಲೇಖಿಸಲಾಗಿದೆ. ಹೀಗಾಗಿ, ನಾವು ಪದವಿ ಪ್ರಮಾಣ ಪತ್ರದ ಪ್ರತಿಗಳನ್ನು ಕೇಳುತ್ತಿದ್ದೇವೆಯೇ ವಿನಾ ಅಂಕಪಟ್ಟಿಯನ್ನಲ್ಲ.

  • ರಾಜೀವ್‌ ಶುಕ್ಲಾ ಎಂಬವರ ಜೊತೆ ಮೋದಿಯವರು ನೀಡಿರುವ ಸಂದರ್ಶನವು ಅಂತರ್ಜಾಲದಲ್ಲಿದೆಯೇ ವಿನಾ ಎಸ್‌ಜಿಯವರು ಮಾಹಿತಿ ನೀಡಿರುವಂತೆ ಪದವಿ ಪ್ರಮಾಣ ಪತ್ರವು ಇಲ್ಲ. ಇದಕ್ಕಾಗಿ ನಾವು ಪದವಿ ಪ್ರಮಾಣ ಪತ್ರದ ಪ್ರತಿ ಕೇಳಿದ್ದೇವೆ.