PNB scam 
ಸುದ್ದಿಗಳು

ನೀರವ್ ಮೋದಿ ಪ್ರಕರಣ: ಬ್ಯಾಂಕ್, ಕೇಂದ್ರ ಸರ್ಕಾರದ ಕಾರ್ಯವೈಖರಿ ಕುರಿತು ಬ್ರಿಟನ್ ನ್ಯಾಯಾಲಯ ಹೇಳಿದ್ದೇನು?

ಭಾರತದ ಜೈಲುಗಳ ಸ್ಥಿತಿ, ನೀರವ್ ಮಾನಸಿಕ ಆರೋಗ್ಯ ಮತ್ತು ಭಾರತೀಯ ನ್ಯಾಯಾಂಗ ಸ್ವಾತಂತ್ರ್ಯದ ಬಗ್ಗೆ ನೀರವ್ ಪರ ವಕೀಲರು ಮಂಡಿಸಿದ ವಾದಗಳನ್ನು ಕೂಡ ನ್ಯಾಯಾಲಯ ತಳ್ಳಿಹಾಕಿತು.

Bar & Bench

ದೇಶದಿಂದ ಪಲಾಯನಮಾಡಿದ್ದ ವಜ್ರ ವ್ಯಾಪಾರಿ ನೀರವ್‌ ಮೋದಿ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಬ್ರಿಟನ್‌ನ ವೆಸ್ಟ್‌ಮಿನಿಸ್ಟರ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಗುರುವಾರ ಅನುಮತಿ ನೀಡಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ (ಪಿಎನ್‌ಬಿ) ಸುಮಾರು 14,000 ಕೋಟಿ ರೂಪಾಯಿ ವಂಚಿಸಿರುವ ಪ್ರಮುಖ ಆರೋಪ ನೀರವ್ ಮೋದಿ ಮೇಲಿದೆ.

ನ್ಯಾಯಾಧೀಶ ಸ್ಯಾಮ್ ಗೂಝಿ ಅವರು ಹಸ್ತಾಂತರ ಪ್ರಕ್ರಿಯೆಗೆ ಹಸಿರು ನಿಶಾನೆ ತೋರುತ್ತಾ, “ಎಲ್ಲಾ ತನಿಖೆಗಳನ್ನು ಇಡಿಯಾಗಿ ನೋಡಿದಾಗ ಪಿಎನ್‌ಬಿಗೆ ವಂಚನೆ ಎಸಗಿದ ಪಿತೂರಿಗೆ ಸಂಬಂಧಿಸಿದಂತೆ ನೀರವ್‌ ಮೋದಿ ಶಿಕ್ಷಾರ್ಹ ಎಂಬುದಕ್ಕೆ ಮೇಲ್ನೋಟಕ್ಕೆ ಪುರಾವೆಗಳಿವೆ ಎಂಬುದು ನಮ್ಮ ಗಮನಕ್ಕೆ ಬಂದಿದೆ…” ಎಂದರು.

ಪಿಎನ್‌ಬಿ ಹಗರಣಕ್ಕೆ ಸಂಬಂಧಿಸಿದಂತೆ, ವಂಚನೆ ರೂಪಿಸಿದ್ದು, ಅಕ್ರಮ ಹಣ ವರ್ಗಾವಣೆ, ನ್ಯಾಯದ ದಿಕ್ಕು ತಪ್ಪಿಸುವಂತಹ ಪಿತೂರಿಗೆ ಮುಂದಾದದ್ದು ಹಾಗೂ ತನ್ನ ಕಂಪೆನಿಯ ನಿರ್ದೇಶಕ ಆಶಿಶ್ ಲಾಡ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದು ಮೋದಿ ವಿರುದ್ಧದ ಪ್ರಮುಖ ಆರೋಪಗಳಾಗಿವೆ.

"ನೀರವ್ ಮೋದಿಯವರನ್ನು ಭಾರತಕ್ಕೆ ಹಸ್ತಾಂತರಿಸುವುದು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಮ್ಮೇಳನದಲ್ಲಿ ಗುರುತಿಸಲಾದ ಹಕ್ಕುಗಳಿಗೆ ಹೊಂದಾಣಿಕೆಯಾಗಿದ್ದು 1998ರ ಮಾನವ ಹಕ್ಕುಗಳ ಕಾಯಿದೆಯ ವ್ಯಾಪ್ತಿಯಲ್ಲಿಯೇ ಬರಲಿದೆ " ಎಂದು ನ್ಯಾಯಾಲಯ ಹೇಳಿದೆ.

ಹಣದ ಅಕ್ರಮ ವರ್ಗಾವಣೆಯಲ್ಲಿ ನೀರವ್‌ ಮೋದಿ ಕೈವಾಡವಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ನ್ಯಾಯಾಲಯ ಪ್ರಮುಖವಾಗಿ ತಿಳಿಸಿದೆ. ಭಾರತದಲ್ಲಿ ನ್ಯಾಯಾಂಗವು ರಾಜಿಯಾಗಿದೆ ಮತ್ತು ಕಾರ್ಯಾಂಗಕ್ಕೆ ಅಧೀನವಾಗಿದೆ ಎಂಬ ವಾದವನ್ನೂ ನ್ಯಾಯಾಲಯ ಇದೇ ಸಂದರ್ಭದಲ್ಲಿ ತಿರಸ್ಕರಿಸಿತು.

ಆರಂಭದಲ್ಲಿ ಭಾರತ ಸರ್ಕಾರ ಸಾಕ್ಷ್ಯಗಳನ್ನು ಸಲ್ಲಿಸಿದ ವಿಧಾನದ ಬಗ್ಗೆ ನ್ಯಾಯಾಲಯ ನೀರಸ ಪ್ರತಿಕ್ರಿಯೆ ವ್ಯಕ್ತಪಡಿಸಿತು. ಭಾರತ ಸರ್ಕಾರ ಸಿದ್ಧಪಡಿಸಿದ ಸಾಕ್ಷ್ಯಗಳಲ್ಲಿ ದೋಷವಿದ್ದು ಕಳಪೆ ರೀತಿಯಲ್ಲಿ ಮಂಡನೆಯಾದವು. ಅವನ್ನು ಅನುಸರಿಸುವುದು ಕಷ್ಟವಿತ್ತು. ಮಲ್ಯ ಪ್ರಕರಣದಲ್ಲಿಯೂ ಹಿರಿಯ ಜಿಲ್ಲಾ ನ್ಯಾಯಧೀಶರು ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭವಿಷ್ಯದಲ್ಲಿ ಹೀಗೆ ಮನವಿ ಸಲ್ಲಿಸುವಾಗ ಕೇಂದ್ರ ಸರ್ಕಾರ ಈ ಅವಲೋಕನಗಳನ್ನು ಪರಿಗಣಿಸುತ್ತದೆ ಎಂದು ಭಾವಿಸುತ್ತೇನೆ” ಎಂಬುದಾಗಿ ನ್ಯಾ. ಗೂಝಿ‌ ಹೇಳಿದ್ದಾರೆ.

"ಪಿಎನ್‌ಬಿ ಕೊಟ್ಟಿದ್ದ ಸಾಲ ಮರುಪಾವತಿ ಖಾತ್ರಿ ಪತ್ರದ (ಎಲ್‌ಒಯು) ಕುರಿತಂತೆ ನ್ಯಾಯಾಧೀಶರು “ನೀರವ್ ಮೋದಿಯವರು ಕಾನೂನುಬದ್ಧ ವ್ಯವಹಾರದಲ್ಲಿ ತೊಡಗಿಕೊಂಡಿದ್ದು ಎಲ್‌ಒಯುಗಳನ್ನು ಸೂಕ್ತ ರೀತಿಯಲ್ಲಿ ಬಳಸಿದ್ದಾರೆ ಎಂಬ ವಾದವನ್ನು ಒಪ್ಪುವುದಿಲ್ಲ. ಹಣಕಾಸಿನ ಉತ್ಪನ್ನದ ಮೂಲಕ ಅಂತಹ ಅಗಾಧವಾದ ಆರ್ಥಿಕ ಮಾನ್ಯತೆ ಸೃಷ್ಟಿಸಲು ಪಿಎನ್‌ಬಿಗೆ ಆಸಕ್ತಿ ಇರದು. ಅದನ್ನು ಸಾಮಾನ್ಯ ವ್ಯವಹಾರ ಸಾಲಕ್ಕಾಗಿ ವಿನ್ಯಾಸಗೊಳಿಸಲಾಗಿರಲಿಲ್ಲ ಎಂಬುದು ಬ್ಯಾಂಕ್‌ ಅಧಿಕಾರಿಗಳು ನೀಡಿದ ಪುರಾವೆಗಳಿಂದ ದೃಢಪಟ್ಟಿದೆ. ನಿಜವಾದ ಆಮದು ವಹಿವಾಟಿನ ಬಗ್ಗೆ ಯಾವುದೇ ಪುರಾವೆಗಳಿಲ್ಲ ಮತ್ತು ಎಲ್‌ಒಯುಗಳನ್ನು ಅಪ್ರಮಾಣಿಕವಾಗಿ ಸಿದ್ಧಪಡಿಸಲಾಗಿದೆ ಎನ್ನುವುದನ್ನು ನಾನು ಕಂಡುಕೊಂಡಿದ್ದೇನೆ," ಎಂದರು.

“ಇತರ ಆರೋಪಿ ಪಿತೂರಿಗಾರರೊಂದಿಗೆ ನೀರವ್‌ ಒಪ್ಪಂದ ಮಾಡಿಕೊಂಡಿರುವುದಕ್ಕೆ ಯಾವುದೇ ನೇರ ಪುರಾವೆ ಇಲ್ಲದಿದ್ದರೂ ಸಮಗ್ರವಾಗಿ ಮತ್ತು ಕ್ರಮೇಣ ಪರಿಗಣಿಸಲಾದ ಸಾಕ್ಷ್ಯಗಳ ಪ್ರಕಾರ ತನಿಖಾಧಿಕಾರಿಗಳಿಗೆ ಸಾಕ್ಷ್ಯ ದೊರೆಯದಂತೆ ಮಾಡಲು ಸಾಕ್ಷಿಗಳೊಂದಿಗೆ ಹಸ್ತಕ್ಷೇಪ ಮಾಡುತ್ತಾ, ಸಾಕ್ಷ್ಯ ನಾಶಕ್ಕೆ ನೀರವ್‌ ಮತ್ತು ಸಹ ಪಿತೂರಿಗಾರರು ಮುಂದಾಗಿರುವುದನ್ನು ಗಮನಿಸಿದಾಗ ನ್ಯಾಯದ ದಿಕ್ಕು ತಪ್ಪಿಸಲು ಅವರಿಗೆ ಒಲವಿತ್ತು ಎಂಬುದನ್ನು ಅದು ತೋರಿಸುತ್ತದೆ” ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.

ಭಾರತದ ಜೈಲುಗಳ ಸ್ಥಿತಿ, ನೀರವ್‌ ಮಾನಸಿಕ ಆರೋಗ್ಯ ಮತ್ತು ಭಾರತೀಯ ನ್ಯಾಯಾಂಗ ಸ್ವಾತಂತ್ರ್ಯದ ಬಗ್ಗೆ ನೀರವ್‌ ಪರ ವಕೀಲರು ಮಂಡಿಸಿದ ವಾದಗಳನ್ನು ಕೂಡ ನ್ಯಾಯಾಲಯ ತಳ್ಳಿಹಾಕಿತು.