Murugha Sharanaru and Chitradurga court 
ಸುದ್ದಿಗಳು

[ಪೋಕ್ಸೊ ಪ್ರಕರಣ] ಸುಪ್ರೀಂ ಕೋರ್ಟ್‌ ಆದೇಶದ ಅನುಪಾಲನೆ: ಚಿತ್ರದುರ್ಗ ಜೈಲಿನಿಂದ ಬಿಡುಗಡೆಯಾದ ಮುರುಘಾ ಶರಣರು

ನಾಲ್ಕು ಅಥವಾ ಆರು ತಿಂಗಳ ಒಳಗೆ 12-13 ಪ್ರಮುಖ ಸಾಕ್ಷಿಗಳ ವಿಚಾರಣೆಯನ್ನು ವಿಚಾರಣಾಧೀನ ನ್ಯಾಯಾಲಯ ಪೂರ್ಣಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿತ್ತು. ಇದು ಪಾಲನೆಯಾಗಿರುವ ಹಿನ್ನೆಲೆಯಲ್ಲಿ ಶರಣರು ಬಿಡುಗಡೆಯಾಗಿದ್ದಾರೆ.

Bar & Bench

ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಪೋಕ್ಸೊ ಪ್ರಕರಣದಲ್ಲಿ ಸಂತ್ರಸ್ತೆಯರೂ ಸೇರಿ 12 ಪ್ರಮುಖ ಸಾಕ್ಷಿಗಳ ವಿಚಾರಣೆಯು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಮುರುಘಾ ಮಠದ ಶಿವಮೂರ್ತಿ ಶರಣರು ಸೋಮವಾರ ಚಿತ್ರದುರ್ಗದ ಜಿಲ್ಲಾ ಕಾರಾಗೃಹದಿಂದ ಬಿಡುಗಡೆಯಾದರು. ಚಿತ್ರದುರ್ಗ ಜಿಲ್ಲೆಗೆ ನಿರ್ಬಂಧ ಇರುವ ಹಿನ್ನೆಲೆಯಲ್ಲಿ ಮೊದಲನೇ ಆರೋಪಿಯಾಗಿರುವ ಶಿವಮೂರ್ತಿ ಶರಣರು ದಾವಣೆಗೆರೆಯ ಮಠದತ್ತ ಪ್ರಯಾಣ ಬೆಳೆಸಿದರು.

ನಾಲ್ಕು ಅಥವಾ ಆರು ತಿಂಗಳ ಒಳಗೆ ಪ್ರಾಸಿಕ್ಯೂಷನ್‌ ನೀಡುವ 12-13 ಪ್ರಮುಖ ಸಾಕ್ಷಿಗಳ ವಿಚಾರಣೆ ಪೂರ್ಣಗೊಳ್ಳಬೇಕು. ಅಲ್ಲಿಯವರೆಗೆ 2023ರ ನವೆಂಬರ್‌ 11ರಂದು ಕರ್ನಾಟಕ ಹೈಕೋರ್ಟ್‌ ಶಿವಮೂರ್ತಿ ಶರಣರಿಗೆ ನೀಡಿದ್ದ ಜಾಮೀನಿಗೆ ತಡೆ ನೀಡಲಾಗಿರುತ್ತದೆ ಎಂದು 2024ರ ಏಪ್ರಿಲ್‌ 26ರಂದು ಸುಪ್ರೀಂ ಕೋರ್ಟ್‌ ಆದೇಶಿಸಿತ್ತು. ಅಲ್ಲದೇ, ಒಂದು ವಾರದಲ್ಲಿ ಶಿವಮೂರ್ತಿ ಶರಣರು ಜೈಲು ಅಧಿಕಾರಿಗಳಿಗೆ ಶರಣಾಗಬೇಕು ಎಂದು ಸರ್ವೋಚ್ಚ ನ್ಯಾಯಾಲಯ ನಿರ್ದೇಶಿಸಿತ್ತು. ಈ ಆದೇಶ ಪಾಲನೆಯಾಗಿರುವ ಹಿನ್ನೆಲೆಯಲ್ಲಿ ಇಂದು ಶಿವಮೂರ್ತಿ ಶರಣರನ್ನು ಬಿಡುಗಡೆ ಮಾಡುವಂತೆ ಚಿತ್ರದುರ್ಗದ ಎರಡನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶ ಗಂಗಾಧರ ಚನ್ನಬಸಪ್ಪ ಹಡಪದ ಅವರು ಆದೇಶಿಸಿದರು.

ಇನ್ನೂ 80ಕ್ಕೂ ಹೆಚ್ಚು ಸಾಕ್ಷಿಗಳ ವಿಚಾರಣೆ ಮತ್ತು ಪಾಟೀ ಸವಾಲು ನಡೆಯಬೇಕಿದೆ. ಈ ನೆಲೆಯಲ್ಲಿ ನೋಡಿದರೆ ಪ್ರಕರಣ ಸದ್ಯಕ್ಕೆ ಇತ್ಯರ್ಥವಾಗುವ ಸಾಧ್ಯತೆ ಕ್ಷೀಣ ಎನ್ನುವ ಅಭಿಪ್ರಾಯ ಕಾನೂನು ವಲಯದಲ್ಲಿದೆ.

2022ರ ಆಗಸ್ಟ್‌ 26ರಂದು ಮೈಸೂರಿನ ನಜರಾಬಾದ್‌ ಠಾಣೆಯಲ್ಲಿ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳು ಸ್ವಾಮೀಜಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರು ನೀಡಿದ್ದರು. ಹಾಸ್ಟೆಲ್‌ನಲ್ಲಿ ತಂಗಿದ್ದ ತಮ್ಮನ್ನು ಸ್ವಾಮೀಜಿ ಅವರ ಖಾಸಗಿ ಕೋಣೆ ಸ್ವಚ್ಛತೆಗೆ ಕಳುಹಿಸಲಾಗಿತ್ತು. ಈ ಸಂದರ್ಭದಲ್ಲಿ ಸ್ವಾಮೀಜಿ ಅವರು ಚಾಕೋಲೇಟ್‌ ಮತ್ತು ಸೇಬಿನ ಹಣ್ಣಿಗೆ ಮಾದಕ ದ್ರವ್ಯ ಸೇರಿಸಿ ಕೊಡುತ್ತಿದ್ದರು. ಇದರಿಂದ ಪ್ರಜ್ಞೆ ತಪ್ಪಿದಾಗ ಸ್ವಾಮೀಜಿ ಅವರು ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂದು ಬಾಲಕಿಯರು ದೂರಿನಲ್ಲಿ ಆರೋಪಿಸಿದ್ದರು.

ಮೈಸೂರಿನ ನಜಾರಾಬಾದ್‌ ಠಾಣೆಯ ಪೊಲೀಸರು ಪ್ರಕರಣವನ್ನು ಚಿತ್ರದುರ್ಗದ ಗ್ರಾಮೀಣ ಠಾಣೆಗೆ ವರ್ಗಾಯಿಸಿದ್ದರು. ಅಲ್ಲಿನ ಪೊಲೀಸರು ಶಿವಮೂರ್ತಿ ಮುರುಘಾ ಶರಣರು, ಮಠದ ಹಾಸ್ಟೆಲ್‌ ವಾರ್ಡನ್‌ ರಶ್ಮಿ, ಮಠದ ಕಾರ್ಯದರ್ಶಿ ಪರಮಶಿವಯ್ಯ, ಕಿರಿಯ ಸ್ವಾಮೀಜಿ ಮತ್ತು ಮಠದ ವಕೀಲ ಗಂಗಾಧರಯ್ಯ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು. ಸ್ವಾಮೀಜಿಯನ್ನು 2022ರ ಸೆಪ್ಟೆಂಬರ್‌ 1ರಂದು ಬಂಧಿಸಲಾಗಿತ್ತು. ಇದಾದ ಬಳಿಕ ಮತ್ತಿಬ್ಬರು ವಿದ್ಯಾರ್ಥಿನಿಯರು ದೂರು ನೀಡಿದ್ದರಿಂದ ಮತ್ತೊಂದು ಪೋಕ್ಸೊ ಪ್ರಕರಣ ದಾಖಲಿಸಲಾಗಿತ್ತು.

ಶರಣರ ವಿರುದ್ಧ ಭಾರತೀಯ ದಂಡ ಸಂಹಿತೆ, ಬಾಲ ನ್ಯಾಯ ಕಾಯಿದೆ, ಪೋಕ್ಸೊ ಕಾಯಿದೆ ಮತ್ತು ಧಾರ್ಮಿಕ ಸಂಸ್ಥೆಗಳ (ದುರ್ಬಳಕೆ ತಡೆ) ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿತ್ತು. ಇವುಗಳಲ್ಲಿ ಕೆಲವು ಕಾಯಿದೆ ಮತ್ತು ಸೆಕ್ಷನ್‌ಗಳನ್ನು ತಪ್ಪಾಗಿ ಅನ್ವಯಿಸಲಾಗಿದೆ ಎಂದು ಹೈಕೋರ್ಟ್‌ ಅವುಗಳನ್ನು ಕೈಬಿಟ್ಟಿತ್ತು.