B S Yediyurappa and Karnataka HC 
ಸುದ್ದಿಗಳು

[ಬಿಎಸ್‌ವೈ ವಿರುದ್ಧದ ಪೋಕ್ಸೊ ಪ್ರಕರಣ] ವಿಚಾರಣಾಧೀನ ನ್ಯಾಯಾಲಯ ವಿವೇಚನೆ ಬಳಸಿಲ್ಲ: ಹೈಕೋರ್ಟ್‌

“ನೀವು ಉಲ್ಲೇಖಿಸುತ್ತಿರುವ ಸಾಕ್ಷಿಗಳ ಹೇಳಿಕೆಯನ್ನು ಪರಿಗಣಿಸಬೇಕು ಎಂದಾದರೆ ಸಂತ್ರಸ್ತೆಯ ಹೇಳಿಕೆಯನ್ನೂ ಪರಿಗಣಿಸಬೇಕಾಗುತ್ತದೆ. ಇಡೀ ಘಟನೆಯನ್ನು ಸಂತ್ರಸ್ತೆ ವಿವರಿಸಿದ್ದಾರೆʼ ಎಂದು ಹಿರಿಯ ವಕೀಲ ನಾಗೇಶ್‌ ಅವರನ್ನು ಕುರಿತು ಹೇಳಿದ ನ್ಯಾಯಾಲಯ.

Bar & Bench

“ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ವಿರುದ್ಧದ ಪೋಕ್ಸೊ ಪ್ರಕರಣದಲ್ಲಿ ಸಂಜ್ಞೇ ಸ್ವೀಕರಿಸಿರುವ ವಿಚಾರಣಾಧೀನ ನ್ಯಾಯಾಲಯದ ಆದೇಶದಲ್ಲಿ ವಿವೇಚನೆ ಬಳಸಲಾಗಿಲ್ಲ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ” ಎಂದು ಕರ್ನಾಟಕ ಹೈಕೋರ್ಟ್‌ ಮಂಗಳವಾರ ಅಭಿಪ್ರಾಯ ವ್ಯಕ್ತಪಡಿಸಿತು.

ಪೋಕ್ಸೊ ಪ್ರಕರಣ ಮತ್ತು ಆನಂತರದ ನ್ಯಾಯಾಂಗ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಬಿಜೆಪಿಯ ಹಿರಿಯ ನಾಯಕ ಬಿ ಎಸ್‌ ಯಡಿಯೂರಪ್ಪ, ಪ್ರಕರಣದಲ್ಲಿ ಇತರೆ ಆರೋಪಿಗಳಾಗಿರುವ ಅರುಣ ವೈ ಎಂ, ರುದ್ರೇಶ ಮರಳುಸಿದ್ದಯ್ಯ ಮತ್ತು ಜಿ ಮರಿಸ್ವಾಮಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

ಯಡಿಯೂರಪ್ಪ ಪರವಾಗಿ ವಾದ ಮುಂದುವರಿಸಿದ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು “ಸತ್ಯ ಬಯಲು ಮಾಡಲು ತನಿಖೆ ನಡೆಸಲಾಗುತ್ತದೆ. ತನಿಖೆಯು ಪಕ್ಷಪಾತಿಯಾಗಿರಬಾರದು. ನ್ಯಾಯಯುತ ಮತ್ತು ಕಾನೂನಿನ ಅನ್ವಯ ನಡೆಯಬೇಕು” ಎಂದರು.

“ಸಂಜ್ಞೇ ಪರಿಗಣಿಸುವ ಸಂದರ್ಭದಲ್ಲಿ ವಿಚಾರಣಾಧೀನ ನ್ಯಾಯಾಲಯವು ತನಿಖಾಧಿಕಾರಿಯ ಅಭಿಪ್ರಾಯ ಒಪ್ಪಲಾಗದು. ಅಂತೆಯೇ ಪೊಲೀಸರು ಬಿ ವರದಿ ಸಲ್ಲಿಸಿದ ಪ್ರಕರಣಕ್ಕೂ ಇದು ಅನ್ವಯವಾಗುತ್ತದೆ. ತನಿಖಾಧಿಕಾರಿ ಸಾಕ್ಷಿ ಸಂಗ್ರಹಿಸಲಿದ್ದು, ಅವರು ಸಾಕ್ಷಿಯನ್ನು ಪ್ರತ್ಯೇಕಿಸಲಾಗದು. ಸಾಕ್ಷಿಯು ಒಪ್ಪಿತವೇ ಇಲ್ಲವೇ ಎಂಬುದನ್ನು ನ್ಯಾಯಾಲಯ ನಿರ್ಧರಿಸಲಿದೆ” ಎಂದರು.

“ದೂರು ದಾಖಲಿಸುವುದಕ್ಕೂ ಮುನ್ನ ದೂರುದಾರೆ (ಸಂತ್ರಸ್ತೆಯ ತಾಯಿ; ಈಗ ಸಾವನ್ನಪ್ಪಿದ್ದಾರೆ) ಮತ್ತು ಸಂತ್ರಸ್ತೆಯು ಹಲವು ಬಾರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ” ಎಂದರು.

ಒಂದು ಹಂತದಲ್ಲಿ ಪೀಠವು ನಾಗೇಶ್‌ ಅವರಿಗೆ “ನೀವು ಉಲ್ಲೇಖಿಸುತ್ತಿರುವ ಸಾಕ್ಷಿಗಳ ಹೇಳಿಕೆಯನ್ನು ಪರಿಗಣಿಸಬೇಕು ಎಂದಾದರೆ ಸಂತ್ರಸ್ತೆಯ ಹೇಳಿಕೆಯನ್ನೂ ಪರಿಗಣಿಸಬೇಕಾಗುತ್ತದೆ. ಇಡೀ ಘಟನೆಯನ್ನು ಸಂತ್ರಸ್ತೆ ವಿವರಿಸಿದ್ದಾರೆ. ಇದು ಹೇಳಿಕೆ ವರ್ಸಸ್‌ ಹೇಳಿಕೆ ಆಗುವುದಿಲ್ಲವೇ, ಅದು ವಿಚಾರಣೆ ನಡೆಯುವುದು ಸೂಕ್ತವಾಗಿದೆ” ಎಂದಿತು.

ಈ ಹಂತದಲ್ಲಿ ಹಿರಿಯ ವಕೀಲರಾದ ನಾಗೇಶ್‌ ಅವರು ವಾದ ಮಂಡನೆಗೆ ಇನ್ನೂ ಒಂದು ತಾಸು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ನ್ಯಾಯಾಲಯವು ವಿಚಾರಣೆಯನ್ನು ಜನವರಿ 10ಕ್ಕೆ ಮುಂದೂಡಿತು.