ಬಿಎಸ್‌ವೈ ಪ್ರಕರಣದ ವಿಚಾರಣೆಗೆ ಹೆಚ್ಚು ಸಮಯ ತೆಗೆದುಕೊಳ್ಳಲಾಗುತ್ತಿದೆ ಎಂಬ ಆರೋಪಕ್ಕೆ ಗುರಿಯಾಗಲು ಬಯಸಲ್ಲ: ಹೈಕೋರ್ಟ್‌

ನಾಳೆ ಯಾರಾದರೂ ಈ ಪ್ರಕರಣದಲ್ಲಿ ಸಾಕಷ್ಟು ಸಮಯ ತೆಗೆದುಕೊಳ್ಳುವ ಮೂಲಕ ಅನಗತ್ಯ ಆಸಕ್ತಿ ತೋರಿಸಲಾಗಿದೆ ಎನ್ನಬಾರದು. ರಾತ್ರಿ ಒಂಭತ್ತು ಗಂಟೆಯಾದರೂ ನಾನು ನಿಮ್ಮ ವಾದ ಆಲಿಸಲು ಸಿದ್ಧನಿದ್ದೇನೆ ಎಂದ ನ್ಯಾ. ನಾಗಪ್ರಸನ್ನ.
B S Yediyurappa and Karnataka HC
B S Yediyurappa and Karnataka HC
Published on

ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರು ಆರೋಪಿಯಾಗಿರುವ ಪೋಕ್ಸೊ ಪ್ರಕರಣದ ವಿಚಾರಣೆಗೆ ಸಾಕಷ್ಟು ಸಮಯ ತೆಗೆದುಕೊಳ್ಳಲಾಗುತ್ತಿದೆ ಎಂಬ ಆರೋಪಕ್ಕೆ ಗುರಿಯಾಗಲು ಬಯಸುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಗುರುವಾರ ಮೌಖಿಕವಾಗಿ ಕಟುವಾಗಿ ನುಡಿಯಿತು.

ಪೋಕ್ಸೊ ಪ್ರಕರಣ ರದ್ದತಿ ಕೋರಿ ಬಿಜೆಪಿಯ ಹಿರಿಯ ನಾಯಕ ಬಿ ಎಸ್‌ ಯಡಿಯೂರಪ್ಪ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಕೆಲಹೊತ್ತು ವಾದಿಸಿದ ಹಿರಿಯ ವಕೀಲರಾದ ಸಿ ವಿ ನಾಗೇಶ್‌ ಅವರು “ಈಗಾಗಲೇ ಕಲಾಪದ ಸಮಯ ಮುಗಿದಿದೆ. ವಾದ ಮಂಡಿಸಲು ಒಂದು ತಾಸಿಗೂ ಹೆಚ್ಚಿನ ಕಾಲಾವಕಾಶ ಬೇಕಿರುವುದರಿಂದ ರಜಾಕಾಲದ ಬಳಿಕ ವಿಚಾರಣೆ ನಡೆಸಬಹುದು. ಪ್ರಾಸಿಕ್ಯೂಷನ್‌ ಬಯಸಿದ ದಿನ ವಾದಿಸಲು ಸಿದ್ಧನಿದ್ದೇನೆ” ಎಂದರು.

ಆಗ ನ್ಯಾ. ನಾಗಪ್ರಸನ್ನ ಅವರು “ನಾಳೆ ಯಾರಾದರೂ ಈ ಪ್ರಕರಣದಲ್ಲಿ ಸಾಕಷ್ಟು ಸಮಯ ತೆಗೆದುಕೊಳ್ಳುವ ಮೂಲಕ ಅನಗತ್ಯ ಆಸಕ್ತಿ ತೋರಿಸಲಾಗಿದೆ ಎನ್ನಬಾರದು. ರಾತ್ರಿ ಒಂಭತ್ತು ಗಂಟೆಯಾದರೂ ನಾನು ನಿಮ್ಮ ವಾದ ಆಲಿಸಲು ಸಿದ್ಧನಿದ್ದೇನೆ. ನನಗೆ ಯಾವುದೇ ಸಮಸ್ಯೆ ಇಲ್ಲ” ಎಂದರು.

ಆಗ ನಾಗೇಶ್‌ ಅವರು “ನಾನೇ ವಿಚಾರಣೆ ಮುಂದೂಡುವಂತೆ ಕೋರುತ್ತಿದ್ದೇನೆ” ಎಂದರು.

ಅಂತಿಮವಾಗಿ ಪ್ರಾಸಿಕ್ಯೂಷನ್‌ ಪರ ವಿಶೇಷ ಸರ್ಕಾರಿ ಅಭಿಯೋಜಕರಾದ ಪ್ರೊ. ರವಿವರ್ಮ ಕುಮಾರ್‌, ಸಂತ್ರಸ್ತೆಯ ಸಂಬಂಧಿ ಪರ ವಕೀಲ ಎಸ್‌ ಬಾಲನ್‌ ಅವರು ಒಪ್ಪಿದ ಹಿನ್ನೆಲೆಯಲ್ಲಿ ನ್ಯಾಯಾಲಯವು ವಿಚಾರಣೆಯನ್ನು ಜನವರಿ 7ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ ನಾಗೇಶ್‌ ಅವರು “ಸಾಕ್ಷಿಗಳ ಹೇಳಿಕೆ ಒಳಗೊಂಡ ಪೊಲೀಸರ ವರದಿಯನ್ನು ಆಧರಿಸಿ “ಸಿಆರ್‌ಪಿಸಿ ಸೆಕ್ಷನ್‌ 173 (2) ಅಡಿ ಮ್ಯಾಜಿಸ್ಟ್ರೇಟ್‌ ಸಂಜ್ಞೇ ಪರಿಗಣಿಸಬೇಕು. ಇಲ್ಲವಾದಲ್ಲಿ ಸಂಜ್ಞೇ ತೆಗೆದುಕೊಳ್ಳುವಂತಿಲ್ಲ. ಸಿಆರ್‌ಪಿಸಿ ಸೆಕ್ಷನ್‌ 173 (2) ಅಡಿ ಸಲ್ಲಿಸಿರುವ ಪೊಲೀಸ್‌ ವರದಿಯು ಸಿಆರ್‌ಪಿಸಿ ಸೆಕ್ಷನ್‌ 161 ಅಥವಾ 164 ಅಡಿ ದಾಖಲಿಸಿಕೊಂಡಿರುವ ಸಾಕ್ಷಿಗಳ ಹೇಳಿಕೆ ಒಳಗೊಂಡಿರಬೇಕು. ಇದನ್ನು ಆಧರಿಸಿ ಸಂಜ್ಞೇ ಪರಿಗಣಿಸಿ, ಪ್ರಾಸಸ್‌ ಜಾರಿ, ಮಾಡಬಹುದು. ಇದು ಆರೋಪಿಯನ್ನು ಖುಲಾಸೆಗೊಳಿಸಲು ಅಥವಾ ಆರೋಪಿಗಳ ವಿರುದ್ಧ ಆರೋಪ ನಿಗದಿ ಮಾಡಲು ಅಗತ್ಯ. ಇದಕ್ಕೆ ಪ್ರಾಸಿಕ್ಯೂಷನ್‌ ಆಕ್ಷೇಪಿಸಲಾಗದು” ಎಂದರು.

Also Read
ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಸ್ವತಃ ಬಿಎಸ್‌ವೈ ಸಂತ್ರಸ್ತೆಯ ತಾಯಿಯ ಬಳಿ ಒಪ್ಪಿದ್ದಾರೆ: ಸರ್ಕಾರದ ವಾದ

ಮುಡಾ ಪ್ರಕರಣವನ್ನು ಸಿಬಿಐ ವಿಚಾರಣೆ ನೀಡುವ ಕುರಿತಾದ ಪ್ರಕರಣದ ವಿಚಾರಣೆಯಲ್ಲಿ ಪ್ರೊ. ರವಿವರ್ಮ ಕುಮಾರ್ ಮತ್ತು ನ್ಯಾಯಮೂರ್ತಿ ನಾಗಪ್ರಸನ್ನ ಅವರ ನಡುವೆ “ನ್ಯಾಯಾಲಯ ಸ್ವಯಂಪ್ರೇರಿತವಾಗಿ ಆದೇಶ ಮಾಡಿದೆ” ಎನ್ನುವ ವಿಚಾರವು ಕಾವೇರಿದ ವಾತಾವರಣ ನಿರ್ಮಿಸಿತ್ತು. ಆನಂತರ ಬಿಎಸ್‌ವೈ ಆರೋಪಿಯಾಗಿರುವ ಪೋಕ್ಸೊ ಪ್ರಕರಣದ ವಿಚಾರಣೆ ನಡೆದಿದ್ದು, ನ್ಯಾಯಮೂರ್ತಿಗಳು ತುಸು ಹೆಚ್ಚೇ ಗಂಭೀರವಾಗಿದ್ದರು.

Kannada Bar & Bench
kannada.barandbench.com