ex CM B S Yediyurappa and Karnataka HC 
ಸುದ್ದಿಗಳು

ಪೋಕ್ಸೊ ಪ್ರಕರಣ: ಆರೋಪ ಪಟ್ಟಿ ಸಲ್ಲಿಕೆಯಾಗಿರುವುದರಿಂದ ಬಿಎಸ್‌ವೈ ಮನವಿ ಅಸ್ತಿತ್ವ ಕಳೆದುಕೊಂಡಿದೆ ಎಂದ ಸರ್ಕಾರ

“ಆಕ್ಷೇಪಣೆ ಸಲ್ಲಿಸಲಾಗುವುದು ಎಂದು ಹೇಳಿದ್ದೀರಲ್ಲಾ. ಮೊದಲಿಗೆ ಸಲ್ಲಿಕೆ ಮಾಡಿ, ಆಮೇಲೆ ನೋಡೋಣ” ಎಂದು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ.

Bar & Bench

ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ವಿರುದ್ಧದ ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ. ಹೀಗಾಗಿ, ಎಫ್‌ಐಆರ್‌ ರದ್ದತಿ ಹಾಗೂ ನಿರೀಕ್ಷಣಾ ಜಾಮೀನು ಅರ್ಜಿಗಳು ಅಸ್ತಿತ್ವ ಕಳೆದುಕೊಂಡಿವೆ ಎಂದು ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ಶುಕ್ರವಾರ ತಿಳಿಸಿತು. ನಿನ್ನೆಯಷ್ಟೇ ಪೋಕ್ಸೊ ವಿಶೇಷ ನ್ಯಾಯಾಲಯಕ್ಕೆ ಸಿಐಡಿಯು 700ಕ್ಕೂ ಅಧಿಕ ಪುಟಗಳ ಆರೋಪ ಪಟ್ಟಿ ಸಲ್ಲಿಸಿತ್ತು.

ಪೋಕ್ಸೊ ಪ್ರಕರಣ ಸಂಬಂಧದ ಎಫ್‌ಐಆರ್‌ ರದ್ದು ಮತ್ತು ನಿರೀಕ್ಷಣಾ ಜಾಮೀನು ಕೋರಿ ಯಡಿಯೂರಪ್ಪ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ಏಕಸದಸ್ಯ ಪೀಠ ನಡೆಸಿತು.

ಸಿಐಡಿ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು ಮೊದಲಿಗೆ ಆಕ್ಷೇಪಣೆ ಸಲ್ಲಿಸಲಾಗುವುದು ಎಂದರು. ಆನಂತರ ಸಿಐಡಿ ಆರೋಪ ಪಟ್ಟಿ ಸಲ್ಲಿಸಿರುವುದರಿಂದ ಅರ್ಜಿಗಳು ಅಸ್ತಿತ್ವ ಕಳೆದುಕೊಂಡಿವೆ ಎಂದರು.

ಆಗ ಪೀಠವು ʼಆಕ್ಷೇಪಣೆ ಸಲ್ಲಿಸಲಾಗುವುದು ಎಂದು ಹೇಳಿದ್ದೀರಲ್ಲಾ. ಮೊದಲಿಗೆ ಸಲ್ಲಿಕೆ ಮಾಡಿ, ಆಮೇಲೆ ನೋಡೋಣ” ಎಂದಿತು.

ಈ ಮಧ್ಯೆ ಪೀಠವು, "ಪೋಕ್ಸೊ ಪ್ರಕರಣದ ದೂರುದಾರೆಯ ಪುತ್ರ ಶಶಾಂಕ್‌ ಸಿಂಗ್‌ ಪರ ವಕೀಲ ಎಸ್‌ ಬಾಲನ್‌ ಅವರು ಬಿ ಎಸ್‌ ಯಡಿಯೂರಪ್ಪ ಅವರನ್ನು ಬಂಧಿಸಿ ವಿಚಾರಣೆ ನಡೆಸಬೇಕು ಎಂದು ಕೋರಿರುವ ಅರ್ಜಿಗೆ ಪೂರಕವಾಗಿ ಸಂಬಂಧಪಟ್ಟ ತೀರ್ಪುಗಳನ್ನು ಸಲ್ಲಿಸಬೇಕು. ಮುಂದಿನ ವಿಚಾರಣೆಗೆ ಅವುಗಳು ಸಲ್ಲಿಕೆಯಾಗಬೇಕು. ಕಂತಿನಲ್ಲಿ ವಿಚಾರಣೆ ನಡೆಸಲಾಗದು” ಎಂದು ಹೇಳಿತು. ಇದಕ್ಕೆ ಬಾಲನ್‌ ಸಮ್ಮತಿಸಿದರು.

ಅಲ್ಲದೇ, “ನ್ಯಾಯಾಲಯವು ಸಂತ್ರಸ್ತರ ನೋವನ್ನು ಆಲಿಸಬೇಕು. ಯಡಿಯೂರಪ್ಪ ಅವರಿಗೆ ಜಾಮೀನು ಮತ್ತಿತರ ಪರಿಹಾರ ವಿಚಾರಣಾಧೀನ ನ್ಯಾಯಾಲಯದಲ್ಲಿ ಲಭ್ಯವಿದೆ. ಅಲ್ಲಿನ ಅವಕಾಶ ಮುಗಿದ ಮೇಲೆ ಹೈಕೋರ್ಟ್‌ಗೆ ಬರಬಹುದು” ಎಂದು ಬಾಲನ್‌ ಹೇಳಿದರು. ಆಗ ಪೀಠವು “ಅದನ್ನು ಅಷ್ಟು ಗಂಭೀರವಾಗಿ, ಕಡ್ಡಾಯ ನಿಯಮವೆಂದು ಪರಿಗಣಿಸಲಾಗದು” ಎಂದಿತು. ಅಂತಿಮವಾಗಿ ಪೀಠವು ವಿಚಾರಣೆ ಮುಂದೂಡಿತು.