ಪೋಕ್ಸೊ ಪ್ರಕರಣ: ಬಿಎಸ್‌ವೈ ಸೇರಿ ನಾಲ್ವರ ವಿರುದ್ಧ 700ಕ್ಕೂ ಅಧಿಕ ಪುಟಗಳ ಆರೋಪ ಪಟ್ಟಿ ಸಲ್ಲಿಕೆ

ಪೋಕ್ಸೊ ಪ್ರಕರಣದ ಎಫ್‌ಐಆರ್‌ ರದ್ದತಿ ಹಾಗೂ ನಿರೀಕ್ಷಣಾ ಜಾಮೀನು ಕೋರಿ ಬಿಎಸ್‌ವೈ ಸಲ್ಲಿಸಿರುವ ಅರ್ಜಿಗಳು ಹೈಕೋರ್ಟ್‌ನಲ್ಲಿ ಶುಕ್ರವಾರ ವಿಚಾರಣೆಗೆ ಬರಲಿವೆ. ಈ ನಿಟ್ಟಿನಲ್ಲಿ ಸಿಐಡಿ ಆರೋಪ ಪಟ್ಟಿ ಸಲ್ಲಿಸಿರುವ ವಿಚಾರಕ್ಕೆ ಮಹತ್ವ ಬಂದಿದೆ.
B S Yediyurappa
B S Yediyurappa
Published on

ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಹಿರಿಯ ನಾಯಕ ಬಿ ಎಸ್‌ ಯಡಿಯೂರಪ್ಪ ವಿರುದ್ಧದ ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿಯು ಗುರುವಾರ ವಿಶೇಷ ಪೋಕ್ಸೊ ನ್ಯಾಯಾಲಯಕ್ಕೆ ಎರಡು ಸಂಪುಟಗಳಲ್ಲಿ ಸುಮಾರು 700ಕ್ಕೂ ಅಧಿಕ ಪುಟಗಳ ಆರೋಪ ಪಟ್ಟಿ ಸಲ್ಲಿಕೆ ಮಾಡಿದೆ.

ಬಿಎಸ್‌ವೈ ಸೇರಿ ನಾಲ್ವರ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದ್ದು, ಮೂವರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ಗಳಿಗೆ ಸಂಬಂಧಿಸಿದಂತೆ ಮಾತ್ರ ಆರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ. ಆರೋಪ ಪಟ್ಟಿಯಲ್ಲಿ 74 ಸಾಕ್ಷ್ಯಗಳನ್ನು ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.

ಯಡಿಯೂರಪ್ಪ ಅವರು ಎಫ್‌ಐಆರ್‌ ರದ್ದತಿ ಕೋರಿ ಹಾಗೂ ಪ್ರಕರಣದಲ್ಲಿ ತಮಗೆ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಕೆ ಮಾಡಿರುವ ಅರ್ಜಿಗಳು ಕರ್ನಾಟಕ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿವೆ. ಈ ನಿಟ್ಟಿನಲ್ಲಿ ಸಿಐಡಿ ಆರೋಪ ಪಟ್ಟಿ ಸಲ್ಲಿಸಿರುವ ವಿಚಾರಕ್ಕೆ ಮಹತ್ವ ಬಂದಿದೆ. ಕಳೆದ ವಿಚಾರಣೆಯಲ್ಲಿ ಯಡಿಯೂರಪ್ಪ ಬಂಧನಕ್ಕೆ ಹೈಕೋರ್ಟ್‌ ತಡೆ ನೀಡಿತ್ತು.

ಸಿಐಡಿ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಅಶೋಕ್‌ ನಾಯಕ್‌ ಅವರು ಬೆಂಗಳೂರಿನ 51ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ಹಾಗೂ ಪೋಕ್ಸೊ ಪ್ರಕರಣಗಳ ವಿಚಾರಣೆ ನಡೆಸುವ ತ್ವರಿತಗತಿಯ ವಿಶೇಷ ನ್ಯಾಯಾಲಯ-1ರ ನ್ಯಾಯಾಧೀಶ ಎನ್ ಎಂ ರಮೇಶ್ ಅವರ ಪೀಠದಲ್ಲಿ ಆರೋಪ ಪಟ್ಟಿ ಸಲ್ಲಿಕೆ ಮಾಡಿದರು.

ಸಿಐಡಿ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಅಶೋಕ್‌ ನಾಯಕ್‌ ಅವರು ಆರೋಪ ಪಟ್ಟಿ ಸಲ್ಲಿಕೆ ಮಾಡಲು ಮುಂದಾದ ವೇಳೆ ನ್ಯಾಯಾಲಯವು ಆರೋಪ ಪಟ್ಟಿ ಸ್ವೀಕರಿಸಲು ವ್ಯಾಪ್ತಿ ಹೊಂದಿರುವ ಕುರಿತು ತಿಳಿಸುವಂತೆ ಸೂಚಿಸಿತ್ತು.

ಆಗ ಎಸ್‌ಪಿಪಿ ನಾಯಕ್‌ ಅವರು “ಪೋಕ್ಸೊ ನ್ಯಾಯಾಲಯವು ಅಪರಾಧ ಕೇಂದ್ರಿತ ನ್ಯಾಯಾಲಯ ಎಂದು ಪರಿಗಣಿಸಲ್ಪಡುತ್ತದೆ. ಜನಪ್ರತಿನಿಧಿಗಳ ನ್ಯಾಯಾಲಯವು ಆರೋಪಿ ಕೇಂದ್ರಿತ ನ್ಯಾಯಾಲಯವಾಗುತ್ತದೆ. ಹೀಗಾಗಿ, ಆರೋಪಪಟ್ಟಿಯನ್ನು ಪ್ರಧಾನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರ ಮುಂದೆ ಸಲ್ಲಿಕೆ ಮಾಡುವ ಅಗತ್ಯವಿಲ್ಲ” ಎಂದು ಮೆಮೊ ಸಲ್ಲಿಸಿ ವಾದಿಸಿದ್ದರು. ಇದನ್ನು ಆಲಿಸಿದ ಪೀಠವು ಆರೋಪ ಪಟ್ಟಿ ಸ್ವೀಕರಿಸಿದ್ದು, ಅದನ್ನು ಪ್ರಧಾನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರ ಮುಂದೆ ಮಂಡಿಸುವಂತೆ ಆದೇಶಿಸಿದೆ. ಬೆಳಿಗ್ಗೆ 11 ಗಂಟೆಗೆ ಸಿಐಡಿ ಆರೋಪ ಪಟ್ಟಿ ಸಲ್ಲಿಕೆ ವಿಚಾರ ಆರಂಭವಾಗಿದ್ದು, ಕೊನೆಗೆ 4.30ಕ್ಕೆ ಪೋಕ್ಸೊ ವಿಶೇಷ ನ್ಯಾಯಾಲಯವು ಆರೋಪ ಪಟ್ಟಿ ಸ್ವೀಕರಿಸಿದೆ ಎಂದು ತಿಳಿದು ಬಂದಿದೆ.

ಬಿಎಸ್‌ವೈ ವಿರುದ್ಧ ಪೋಕ್ಸೊ ಕಾಯಿದೆ ಸೆಕ್ಷನ್‌ 8, ಐಪಿಸಿ ಸೆಕ್ಷನ್‌ಗಳಾದ 354(ಎ), 204, 214 ಅಡಿ, ಎರಡನೇ ಆರೋಪಿ ಅರುಣ್‌ ಎಂ ವೈ, ಮೂರನೇ ಆರೋಪಿ ಎಂ ರುದ್ರೇಶ್‌ ಮತ್ತು ನಾಲ್ಕನೇ ಆರೋಪಿ ಜಿ ಮರಿಸ್ವಾಮಿ ಅವರ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 204, 214ರ ಅಡಿ ಆರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ.

ಬಿಎಸ್‌ವೈ ನಿರ್ದೇಶನದಂತೆ ಮೂರನೇ ಆರೋಪಿ ರುದ್ರೇಶ್‌ ಅವರಿಂದ 2 ಲಕ್ಷ ರೂಪಾಯಿ ಪಡೆದು ಅದನ್ನು ಫಿರ್ಯಾದಿಯಾಗಿರುವ ಸಂತ್ರಸ್ತೆ ಮಹಿಳೆಗೆ ನೀಡುವುದಲ್ಲದೇ ಆಕೆಯ ಐ-ಫೋನ್‌ನಲ್ಲಿನ ಬಿಎಸ್‌ವೈಗೆ ಸಂಬಂಧಿಸಿದ ವಿಡಿಯೊವನ್ನು ಡಿಲೀಟ್‌ ಮಾಡಿಸಿರುವುದು ಮತ್ತು ಅದನ್ನು ಸಾಮಾಜಿಕ ಜಾಲತಾಣದಿಂದ ತೆಗೆಸಿದ ಆರೋಪ ಅರುಣ್ ಮತ್ತು ಮರಿಸ್ವಾಮಿ ಅವರ ಮೇಲಿದೆ.

Also Read
ಪೋಕ್ಸೊ ಪ್ರಕರಣ: ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ ಕದತಟ್ಟಿರುವ ಮಾಜಿ ಸಿಎಂ ಬಿಎಸ್‌ವೈ ನೀಡಿರುವ ಕಾರಣಗಳೇನು?

ಪ್ರಕರಣದ ಹಿನ್ನೆಲೆ: ಸಂತ್ರಸ್ತೆಯ ತಾಯಿ ನೀಡಿದ್ದ ದೂರಿನ ಅನ್ವಯ ಸಂತ್ರಸ್ತೆಯ ಮೇಲೆ ಈ ಹಿಂದೆ ಅತ್ಯಾಚಾರವಾಗಿದ್ದು, ಈ ಸಂಬಂಧ ವಿಶೇಷ ತನಿಖಾ ದಳ ರಚಿಸಲು ರಾಜ್ಯ ಸರ್ಕಾರದ ಮೇಲೆ ಒತ್ತಡ ತರುವ ಮೂಲಕ ನೆರವಾಗುವಂತೆ ಕೋರಲು ಸಂತ್ರಸ್ತೆ ಮತ್ತು ಆಕೆಯ ತಾಯಿ ಯಡಿಯೂರಪ್ಪ ಅವರನ್ನು 2024ರ ಫೆಬ್ರವರಿ 2ರಂದು ಅವರ ನಿವಾಸದಲ್ಲಿ ಭೇಟಿ ಮಾಡಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರು ನಮ್ಮ ಜೊತೆ ಒಂಭತ್ತು ನಿಮಿಷ ಮಾತನಾಡಿ, ನಮಗೆ ಟೀ ಕುಡಿಸಿದರು. ಆನಂತರ ನನ್ನ ಮಗಳನ್ನು ಕೊಠಡಿಗೆ ಕರೆದೊಯ್ದು ಚಿಲಕ ಹಾಕಿಕೊಂಡಿದ್ದರು. ಈ ವೇಳೆ ಆಕೆಯ ವಕ್ಷಸ್ಥಳವನ್ನು ಸ್ಪರ್ಶಿಸಿ ಲೈಂಗಿಕ ದೌರ್ಜನ್ಯವೆಸಗಿದ್ದರು. ಆಕೆ ಹೊರಹೋಗಲು ಬಾಗಿಲು ತೆರೆಯುವಂತೆ ಒತ್ತಾಯಿಸಿದ್ದಳು. ಆನಂತರ ಯಡಿಯೂರಪ್ಪ ಅವರೇ ಬಾಗಿಲು ತೆರೆದಿದ್ದು, ತಕ್ಷಣ ಓಡಿ ಬಂದ ನನ್ನ ಪುತ್ರಿ ಘಟನೆಯನ್ನು ವಿವರಿಸಿದಳು ಎಂದು ದೂರಲಾಗಿತ್ತು.

ಈ ಕುರಿತು ಯಡಿಯೂರಪ್ಪ ಅವರನ್ನು ಪ್ರಶ್ನಿಸಲಾಗಿ ಅದಕ್ಕೆ ಅವರು ನಿಮ್ಮ ಮಗಳಿಗೆ ರೇಪ್‌ ಆಗಿದೆಯೋ? ಇಲ್ಲವೋ? ಎಂಬುದನ್ನು ಚೆಕ್‌ ಮಾಡಲು ಹಾಗೆ ಮಾಡಿದೆ ಎಂದು ಹೇಳಿದ್ದಾಗಿ ದೂರಿನಲ್ಲಿ ತಿಳಿಸಲಾಗಿತ್ತು. ಮುಂದುವರೆದು, ತಕ್ಷಣ ನಮ್ಮ ಕ್ಷಮೆಯಾಚಿಸಿದ ಯಡಿಯೂರಪ್ಪ ಅವರು ನಿಮಗೆ ಮೋಸ ಆಗಿರುವ ವಿಚಾರದಲ್ಲಿ ಸಹಾಯ ಮಾಡುತ್ತೇನೆ ಎಂದರು. ಇದಕ್ಕೆ ನಾನು ಒಪ್ಪಲಿಲ್ಲ. ಯಡಿಯೂರಪ್ಪ ಅವರು ತಮ್ಮ ಅನುಚಿತ ವರ್ತನೆಯ ಘಟನೆಯ ವಿಚಾರವನ್ನು ಹೊರೆಗೆ ಬಾಯಿ ಬಿಡದಂತೆ ತಡೆಯಲು ತುಂಬಾ ಪ್ರಯತ್ನಿಸಿದರು ಎಂದು ಸಂತ್ರಸ್ತೆಯ ತಾಯಿ ಸದಾಶಿವನಗರ ಠಾಣೆಗೆ ದೂರು ನೀಡಿದ್ದರು. ಇದನ್ನು ಆಧರಿಸಿ ಪೊಲೀಸರು ಪೋಕ್ಸೊ ಕಾಯಿದೆ ಸೆಕ್ಷನ್‌ 8 (ಲೈಂಗಿಕ ದೌರ್ಜನ್ಯ) ಮತ್ತು ಐಪಿಸಿ ಸೆಕ್ಷನ್‌ 354 (ಎ) ಅಡಿ (ಲೈಂಗಿಕ ಕಿರುಕುಳ) ಯಡಿಯೂರಪ್ಪ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು. 

Kannada Bar & Bench
kannada.barandbench.com