Justices Narendar and M I Arunm Karntaka HC
Justices Narendar and M I Arunm Karntaka HC 
ಸುದ್ದಿಗಳು

ಪೋಕ್ಸೊ ಪ್ರಕರಣ: ಆರೋಪಿಯನ್ನು ಖುಲಾಸೆಗೊಳಿಸಿದ್ದ ವಿಚಾರಣಾಧೀನ ನ್ಯಾಯಾಲಯದ ಆದೇಶ ಬದಿಗೆ ಸರಿಸಿದ ಹೈಕೋರ್ಟ್‌

Siddesh M S

ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ವಂಚಿಸಿ, ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯಿದೆ ಅಡಿ ಆರೋಪಿಯಾಗಿದ್ದಾತನನ್ನು ಖುಲಾಸೆಗೊಳಿಸಿದ್ದ ವಿಚಾರಣಾಧೀನ ನ್ಯಾಯಾಲಯದ ಆದೇಶವನ್ನು ಈಚೆಗೆ ಕರ್ನಾಟಕ ಹೈಕೋರ್ಟ್‌ ಬದಿಗೆ ಸರಿಸಿದ್ದು, ಪ್ರಕರಣದ ಮರು ವಿಚಾರಣೆ ನಡೆಸುವಂತೆ ಕೆಳ ಹಂತದ ನ್ಯಾಯಾಲಯಕ್ಕೆ ಆದೇಶಿಸಿ, ತೀರ್ಪು ನೀಡಿದೆ.

ಚಿಕ್ಕಮಗಳೂರಿನ ಒಂದನೇ ಹೆಚ್ಚುವರಿ ಸೆಷನ್ಸ್‌ ಮತ್ತು ವಿಶೇಷ ನ್ಯಾಯಾಧೀಶರಾದ ಕೆ ಎಲ್‌ ಅಶೋಕ್‌ ಅವರು ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷದ ಫೆಬ್ರವರಿ ಒಂದರಂದು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಪ್ರಾಸಿಕ್ಯೂಷನ್‌ ಸಿಆರ್‌ಪಿಸಿ ಸೆಕ್ಷನ್‌ 378(1) ಮತ್ತು (3)ರ ಅಡಿ ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಜಿ ನರೇಂದರ್‌ ಮತ್ತು ಎಂ ಐ ಅರುಣ್‌ ಅವರಿದ್ದ ವಿಭಾಗೀಯ ಪೀಠವು ಪುರಸ್ಕರಿಸಿದೆ.

ಮರು ವಿಚಾರಣೆ ನಡೆಸುವಂತೆ ವಿಚಾರಣಾಧೀನ ನ್ಯಾಯಾಲಯಕ್ಕೆ ಪ್ರಕರಣವನ್ನು ಮರಳಿಸಿರುವ ಹೈಕೋರ್ಟ್‌, ಅಗತ್ಯ ಸಾಕ್ಷ್ಯಾಧಾರ ಸಲ್ಲಿಸಲು ಪ್ರಾಸಿಕ್ಯೂಷನ್‌ಗೆ ಸ್ವಾತಂತ್ರ್ಯ ಕಲ್ಪಿಸಬೇಕು ಎಂದು ಕೆಳ ನ್ಯಾಯಾಲಯಕ್ಕೆ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಚಿಕ್ಕಮಗಳೂರು ತಾಲ್ಲೂಕಿನ ಕೇಸರಿಕೆ ಗ್ರಾಮದ ನುಷ್ರತ್‌ ಅಲಿ ಎಂಬವರ ಕಾಫಿ ತೋಟದಲ್ಲಿ ಕೂಲಿ ಕಾರ್ಮಿಕರಾಗಿ ನಮ್ಮ ಕುಟುಂಬ ಕೆಲಸ ಮಾಡುತ್ತಿದ್ದು, ಕೆಲವು ತಿಂಗಳಿಂದ ಅದೇ ತೋಟದಲ್ಲಿ ಕಾರ್ಮಿಕನಾಗಿ 19 ವರ್ಷದ ಸಂತೋಷ್‌ ಎಂಬಾತ ಕೆಲಸಕ್ಕೆ ಸೇರಿದ್ದ. 10ನೇ ತರಗತಿ ವಿದ್ಯಾರ್ಥಿನಿಯಾದ ಪುತ್ರಿ ಮತ್ತು ಸಂತೋಷ್‌ ಪ್ರೇಮಪಾಶಕ್ಕೆ ಒಳಗಾಗಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಪುತ್ರಿಯನ್ನು ವಿವಾಹವಾಗುವುದಾಗಿ ಆಕೆಯ ಜೊತೆ ಒತ್ತಾಯಪೂರ್ವಕವಾಗಿ ಸಂತೋಷ್‌ ಸಂಭೋಗ ನಡೆಸಿದ್ದ. ಕಳೆದ 20 ದಿನಗಳಿಂದ ಆತ ಯಾರಿಗೂ ಹೇಳದೇ ತನ್ನೂರಿಗೆ ತೆರಳಿದ್ದಾನೆ. ಸದ್ಯ ಪುತ್ರಿ ಏಳು ತಿಂಗಳ ಗರ್ಭಿಣಿಯಾಗಿದ್ದು, ಆರೋಪಿ ಸಂತೋಷ್‌ ವಿರುದ್ಧ ಕ್ರಿಮಿನಲ್‌ ದೂರು ದಾಖಲಿಸಬೇಕು ಎಂದು ಸಂತ್ರಸ್ತೆಯ ತಂದೆ 2019ರ ಏಪ್ರಿಲ್‌ 29ರಂದು ಆಲ್ದೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಸಂತ್ರಸ್ತೆ ಹೇಳಿಕೆ ದಾಖಲು: ತಂದೆಯ ದೂರಿನ ಮೇರೆಗೆ ಪೊಲೀಸರು ಸಂತ್ರಸ್ತೆಯ ಹೇಳಿಕೆ ದಾಖಲಿಸಿಕೊಂಡಿದ್ದರು. ತಂದೆ ದೂರಿನಲ್ಲಿ ಹೇಳಿದ್ದನ್ನೇ ಆಕೆಯು ಪೊಲೀಸರ ಮುಂದೆ ದಾಖಲು ಮಾಡಿದ್ದಳು. ಸಂತ್ರಸ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದ್ದು, ಆಕೆಯು 32 ವಾರಗಳ ಗರ್ಭವತಿಯಾಗಿದ್ದಾಳೆ ಎಂದು ವೈದ್ಯಕೀಯ-ಕಾನೂನು ಪರೀಕ್ಷಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ಆಧರಿಸಿ ಆರೋಪಿ ಸಂತೋಷ್‌ ವಿರುದ್ಧ ಪೋಕ್ಸೊ ಕಾಯಿದೆ- 2012ರ ಸೆಕ್ಷನ್‌ 5(ಜೆ) (ii) ಮತ್ತು 6 ಹಾಗೂ ಭಾರತೀಯ ದಂಡ ಸಂಹಿತೆ ಸೆಕ್ಷನ್‌ 376(2) (ಎನ್‌) ಅಡಿ ದೂರು ದಾಖಲಿಸಲಾಗಿತ್ತು.

ತಿರುಗಿಬಿದ್ದ ಸಂತ್ರಸ್ತೆ ಹಾಗೂ ಕುಟುಂಬ: ಆರೋಪಿ ಸಂತೋಷ್‌ನ ಸುಳ್ಳುಗಳ ಭರವಸೆಗಳಿಗೆ ಮಾರುಹೋದ ದೂರುದಾರರಾದ ಸಂತ್ರಸ್ತೆಯ ತಂದೆ, ತಾಯಿ, ಸಹೋದರ-ಸಹೋದರಿ ಎಲ್ಲರೂ ಪ್ರಾಸಿಕ್ಯೂಷನ್‌ಗೆ ವಿರುದ್ಧವಾಗಿ ಸಾಕ್ಷಿ ನುಡಿದಿದ್ದರು. ದೂರಿನಲ್ಲಿನ ಅಂಶಗಳು ಹಾಗೂ ಪೊಲೀಸರ ಮುಂದೆ ಸಂತ್ರಸ್ತೆ ದಾಖಲಿಸಿದ್ದ ಹೇಳಿಕೆಯನ್ನು ನಿರಾಕರಿಸಲಾಗಿತ್ತು. ಆರೋಪಿ ಬಲಾತ್ಕಾರದಿಂದ ಲೈಂಗಿಕ ದೌರ್ಜನ್ಯ ನಡೆಸಿದ್ದು, ಇದರಿಂದ ಸಂತ್ರಸ್ತೆ ಗರ್ಭಿಣಿಯಾಗಿದ್ದಾಳೆ ಎಂಬುದನ್ನು ಸಾಬೀತುಪಡಿಸುವ ಯಾವುದೇ ಹೇಳಿಕೆಯನ್ನು ನೀಡಿರಲಿಲ್ಲ. ಇದನ್ನು ಆಧರಿಸಿದ್ದ ವಿಚಾರಣಾಧೀನ ನ್ಯಾಯಾಲಯವು ಪ್ರತಿಕೂಲ ಸಾಕ್ಷ್ಯದ ಹಿನ್ನೆಲೆಯಲ್ಲಿ ಆರೋಪಿ ಸಂತೋಷ್‌ನನ್ನು ಖುಲಾಸೆಗೊಳಿಸಿತ್ತು.

ಸಂತ್ರಸ್ತೆ ಮತ್ತು ಆಕೆಯ ಕುಟುಂಬವು ಪ್ರಾಸಿಕ್ಯೂಷನ್‌ಗೆ ವಿರುದ್ಧವಾಗಿ ಸಾಕ್ಷಿ ನುಡಿದ ಹಿನ್ನೆಲೆಯಲ್ಲಿ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿರುವ ಇತರೆ ಸಾಕ್ಷಿಗಳನ್ನು ಪರಿಶೀಲಿಸಲು ಅವಕಾಶ ಮಾಡಿಕೊಡುವಂತೆ ಪ್ರಾಸಿಕ್ಯೂಷನ್‌ ನ್ಯಾಯಾಲಯವನ್ನು ಕೋರಿತ್ತು. ಆದರೆ, ಸಂತ್ರಸ್ತೆ ಮತ್ತು ಇತರೆ ಸಾಕ್ಷಿಗಳು ಪ್ರತಿಕೂಲವಾಗಿ ಸಾಕ್ಷಿ ನುಡಿದಿರುವುದರಿಂದ ಉಳಿದ ಸಾಕ್ಷಿಗಳನ್ನು ಪರಿಶೀಲಿಸಲು ಅವಕಾಶ ನೀಡಲಾಗದು ಎಂದು ನ್ಯಾಯಾಲಯ ಹೇಳಿತ್ತು.

ಸಂತ್ರಸ್ತೆ, ಆರೋಪಿಯ ಡಿಎನ್‌ಎ ಪರೀಕ್ಷೆ ನಡೆಸಲಾಗಿಲ್ಲ: ಅಪ್ರಾಪ್ತ ಸಂತ್ರಸ್ತೆ ಮತ್ತು ಆರೋಪಿ ಸಂತೋಷ್‌ನ ವಂಶವಾಹಿ (ಡಿಎನ್‌ಎ) ಪರೀಕ್ಷೆ ನಡೆಸಲಾಗಿಲ್ಲ. ಸಂತ್ರಸ್ತೆ ತಪಾಸಣೆ ನಡೆಸಿದ್ದ ವೈದ್ಯರು ಸೇರಿದಂತೆ ಇತರೆ ಸಾಕ್ಷಿಗಳನ್ನು ಪರಿಶೀಲಿಸಲು ವಿಚಾರಣಾಧೀನ ನ್ಯಾಯಾಲಯ ಅವಕಾಶ ಮಾಡಿಕೊಡದೇ ತಪ್ಪೆಸಗಿದೆ. ಇದು ಆರೋಪಿಯನ್ನು ರಿಮ್ಯಾಂಡ್‌ಗೆ ಪಡೆಯುವ ಪ್ರಕರಣವಾಗಿದೆ ಎಂದು ಮೇಲ್ಮನವಿಯಲ್ಲಿ ಪ್ರಾಸಿಕ್ಯೂಷನ್‌ ತಗಾದೆ ಎತ್ತಿತ್ತು.

ಈ ಮಧ್ಯೆ, ಅಪ್ರಾಪ್ತೆ ಮತ್ತು ಆರೋಪಿಯ ಡಿಎನ್‌ಎ ಪರೀಕ್ಷೆ ನಡೆಸುವ ಸಂಬಂಧ ಅಗತ್ಯ ಮನವಿಯನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಪ್ರಾಸಿಕ್ಯೂಷನ್‌ ಸಲ್ಲಿಸಿಲ್ಲ. ಈಗ, ವಿಚಾರಣಾಧೀನ ನ್ಯಾಯಾಲಯವು ಡಿಎನ್‌ಎ ಪರೀಕ್ಷೆ ನಡೆಸಲು ಅವಕಾಶ ಮಾಡಿಕೊಟ್ಟಿಲ್ಲ ಎಂದು ಹೇಳುವಂತಿಲ್ಲ ಎಂದು ಹೈಕೋರ್ಟ್‌ ಹೇಳಿದೆ. ಸಂತ್ರಸ್ತೆಯ ಕುಟುಂಬದವರೇ ಪ್ರತಿಕೂಲ ಸಾಕ್ಷಿ ನುಡಿದಿದ್ದರಿಂದ ಉಳಿದ ಸಾಕ್ಷಿಗಳ ಪರಿಶೀಲನೆಗೆ ವಿಚಾರಣಾಧೀನ ನ್ಯಾಯಾಲಯವು ಪ್ರಾಸಿಕ್ಯೂಷನ್‌ಗೆ ಅನುಮತಿಸಿಲ್ಲ ಎಂದು ವಿಭಾಗೀಯ ಪೀಠವು ಆದೇಶದಲ್ಲಿ ದಾಖಲಿಸಿದೆ.

ತಪ್ಪೆಸಗಿದ ವಿಚಾರಣಾಧೀನ ನ್ಯಾಯಾಲಯ: ಆರೋಪಿ ಸಂತೋಷ್‌ ಮತ್ತು ಸಂತ್ರಸ್ತೆ ಇಬ್ಬರೂ ವಿವಾಹವಾಗಿದ್ದು, ಸೌಖ್ಯದಿಂದ ಜೀವನ ನಡೆಸುತ್ತಿದ್ದಾರೆ ಎಂದು ಆರೋಪಿಯ ಪರ ವಕೀಲರು ವಾದಿಸಿದ್ದಾರೆ. ಆದರೆ, ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕರು ಇದು ತಪ್ಪಾದ ವಾದ ಎಂದಿದ್ದು, ಆರೋಪಿಯ ಭರವಸೆಯ ಹಿನ್ನೆಲೆಯಲ್ಲಿ ಸಂತ್ರಸ್ತೆ ಸೇರಿದಂತೆ ಇಡೀ ಕುಟುಂಬ ಪ್ರತಿಕೂಲ ಸಾಕ್ಷಿ ನುಡಿದಿದೆ. ಈಗ ಆರೋಪಿಯು ಮಗು ಮತ್ತು ಆಕೆಯನ್ನು ತೊರೆದಿದ್ದು, ಯಾರ ಕೈಗೂ ಸಿಗುತ್ತಿಲ್ಲ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ ಸತ್ಯ ಸಾಬೀತುಪಡಿಸಲು ಸಾಕಷ್ಟು ಅವಕಾಶವಿದ್ದು, ವಿಚಾರಣಾಧೀನ ನ್ಯಾಯಾಲಯವು ಉಳಿದ ಸಾಕ್ಷಿಗಳನ್ನು ಪರಿಶೀಲಿಸಲು ಅವಕಾಶ ನೀಡದೇ ತಪ್ಪೆಸಗಿದೆ. ಆರೋಪಿ ಮತ್ತು ಮಗುವಿನ ಡಿಎನ್‌ಎ ಪರೀಕ್ಷೆ ನಡೆಸಲು ಅಗತ್ಯ ಮನವಿ ಸಲ್ಲಿಸಲಾಗುವುದು ಎಂದಿದ್ದರು.

ವಾದ-ಪ್ರತಿವಾದವನ್ನು ಆಲಿಸಿದ ಹೈಕೋರ್ಟ್‌ ವಿಚಾರಣಾಧೀನ ನ್ಯಾಯಾಲಯವು ಪ್ರಾಸಿಕ್ಯೂಷನ್‌ಗೆ ಆರೋಪಿಯ ತಪ್ಪುಗಳನ್ನು ಸಾಬೀತುಪಡಿಸಲು ಅಗತ್ಯ ಸಾಕ್ಷ್ಯಾಧಾರ ಪ್ರಸ್ತುತಪಡಿಸಲು ಅವಕಾಶ ನೀಡದೇ ಸ್ಪಷ್ಟವಾಗಿ ತಪ್ಪೆಸಗಿದೆ ಎಂದು ಹೇಳಿತು.

ಪ್ರಾಸಿಕ್ಯೂಷನ್‌ ಪರ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ವಿಜಯಕುಮಾರ್‌ ಮಜಗೆ, ಹೈಕೋರ್ಟ್‌ನಲ್ಲಿ ಸರ್ಕಾರಿ ವಕೀಲೆಯಾಗಿರುವ ರಶ್ಮಿ ಜಾಧವ್‌, ಆರೋಪಿ ಪರ ವಕೀಲ ಎನ್‌ ಆರ್‌ ರವಿಕುಮಾರ್‌ ವಾದಿಸಿದರು.

State of Karnataka v. Santhosh.pdf
Preview