B S Yediyurappa 
ಸುದ್ದಿಗಳು

ಪೋಕ್ಸೊ ಪ್ರಕರಣ: ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ವಿರುದ್ಧ ಬಂಧನ ವಾರೆಂಟ್‌ ಜಾರಿಗೆ ವಿಶೇಷ ನ್ಯಾಯಾಲಯದ ಅನುಮತಿ

ಸಿಐಡಿ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ 51ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ಹಾಗೂ ಪೋಕ್ಸೊ ಪ್ರಕರಣಗಳ ವಿಚಾರಣೆ ನಡೆಸುವ ತ್ವರಿತಗತಿಯ ವಿಶೇಷ ನ್ಯಾಯಾಲಯ-1ರ ನ್ಯಾಯಾಧೀಶ ಎನ್ ಎಂ ರಮೇಶ್ ಪುರಸ್ಕರಿಸಿದ್ದಾರೆ.

Bar & Bench

ಪೋಕ್ಸೊ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ವಿರುದ್ಧ ಬಂಧನ ವಾರೆಂಟ್‌ ಹೊರಡಿಸಲು ಸಿಐಡಿ ಪೊಲೀಸರಿಗೆ ಬೆಂಗಳೂರಿನ ವಿಶೇಷ ಪೋಕ್ಸೊ ನ್ಯಾಯಾಲಯ ಗುರುವಾರ ಅನುಮತಿಸುವ ಮೂಲಕ ಮಹತ್ವದ ಆದೇಶ ಮಾಡಿದೆ. ಯಾವುದೇ ಸಂದರ್ಭದಲ್ಲಿ ಯಡಿಯೂರಪ್ಪ ಅವರ ಬಂಧನ ಸಾಧ್ಯತೆ ಇದೆ.

ಸಿಐಡಿ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ 51ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ಹಾಗೂ ಪೋಕ್ಸೊ ಪ್ರಕರಣಗಳ ವಿಚಾರಣೆ ನಡೆಸುವ ತ್ವರಿತಗತಿಯ ವಿಶೇಷ ನ್ಯಾಯಾಲಯ-1ರ ನ್ಯಾಯಾಧೀಶ ಎನ್ ಎಂ ರಮೇಶ್ ಪುರಸ್ಕರಿಸಿದರು.

ಇದಕ್ಕೂ ಮುನ್ನ, ವಿಶೇಷ ಸರ್ಕಾರಿ ಅಭಿಯೋಜಕರಾದ ಅಶೋಕ್ ನಾಯಕ್ ಅವರು “ಯಡಿಯೂರಪ್ಪನವರ ವಿರುದ್ಧ ಅತ್ಯಾಚಾರ ಆಗಿದೆಯೋ, ಇಲ್ಲವೋ ಎಂಬುದನ್ನು ಪರೀಕ್ಷಿಸುವ ನೆಪದಲ್ಲಿ ಹದಿನೇಳು ವರ್ಷದ ಬಾಲಕಿಯನ್ನು ರೂಮಿನಲ್ಲಿ ಕೂಡಿ ಹಾಕಿಕೊಂಡು ಆಕೆಯ ಖಾಸಗಿ ಅಂಗಗಳನ್ನು ಮುಟ್ಟುವ ಮೂಲಕ ಲೈಂಗಿಕ ಕಿರುಕುಳ ನೀಡಿದ ಆರೋಪವಿದೆ. ಈ ಪ್ರಕರಣದಲ್ಲಿ ಯಡಿಯೂರಪ್ಪ ಅವರನ್ನು ಬಂಧಿಸಲು ನಿರ್ದೇಶಿಸಬೇಕು" ಎಂದು ಕೋರಿದರು.

“ಆರೋಪಿ ತುಂಬಾ ಬಲಾಢ್ಯರಾಗಿದ್ದು,‌ ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿದ್ದವರು. ಅವರ ಇಬ್ಬರು ಪುತ್ರರಲ್ಲಿ ಒಬ್ಬರು ಹಾಲಿ ಸಂಸದರು ಮತ್ತೊಬ್ಬರು ಪಕ್ಷವೊಂದರ ರಾಜ್ಯ ಘಟಕದ ಅಧ್ಯಕ್ಷರು. ಇಂತಹವರು ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ನೋಟಿಸ್ ಕೊಟ್ಟರೂ ವಿಚಾರಣೆಗೆ ಹಾಜರಾಗುತ್ತಿಲ್ಲ. ಪದೇಪದೇ ಸಮಯ ಕೇಳುತ್ತಿದ್ದಾರೆ” ಎಂದು ಆಕ್ಷೇಪಿಸಿದರು.

ಮುಂದುವರಿದು, "ಘಟನೆ ನಡೆದ ದಿನವೇ ಯಡಿಯೂರಪ್ಪ ಸಂತ್ರಸ್ತ ಬಾಲಕಿಯ ತಾಯಿಗೆ ಎರಡು ಲಕ್ಷ ರೂಪಾಯಿಗಳನ್ನು ಬಲವಂತದಿಂದ ನೀಡಿದ್ದಾರೆ. ನೀನು ಕಷ್ಟದಲ್ಲಿ ಇದ್ದೀಯ. ಇಟ್ಟುಕೋ ಎಂದು ಸಮಾಧಾನ ಮಾಡುವ ನೆಪದಲ್ಲಿ ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸಿದ್ದಾರೆ. ಸಂತ್ರಸ್ತೆಯ ತಾಯಿ ಮಾಡಿಕೊಂಡಿದ್ದ ವಿಡಿಯೋವನ್ನು ಡಿಲಿಟ್ ಮಾಡಿಸಿದ್ದಾರೆ. ಹೀಗೆ ಹಲವು ಹಂತಗಳಲ್ಲಿ ಸಾಕ್ಷ್ಯ ನಾಶ ಮಾಡುತ್ತಲೇ ಇದ್ದಾರೆ. ಒಂದು ವೇಳೆ ಅವರು ಕೇಳಿದಷ್ಟು ಸಮಯ ನೀಡಿದ್ದೇ ಆದರೆ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ನಾಶ ಮಾಡುವ ಸಾಧ್ಯತೆ ಇದೆ. ಆದ್ದರಿಂದ, ಕೂಡಲೇ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲು ಆದೇಶಿಸಬೇಕು" ಎಂದು ಕೋರಿದರು.

ಯಡಿಯೂರಪ್ಪ ವಿರುದ್ಧ ಪೋಕ್ಸೊ ಕಾಯಿದೆ ಸೆಕ್ಷನ್‌ 8 (ಲೈಂಗಿಕ ದೌರ್ಜನ್ಯ) ಮತ್ತು ಐಪಿಸಿ ಸೆಕ್ಷನ್‌ 354 (ಎ) ಅಡಿ (ಲೈಂಗಿಕ ಕಿರುಕುಳ) ಎಫ್‌ಐಆರ್‌ ದಾಖಲಾಗಿದೆ.